ಹರಿಹರದ ಶಾಸಕ ಎಸ್. ರಾಮಪ್ಪ ಭವಿಷ್ಯ
ಮಲೇಬೆನ್ನೂರು, ಜೂ.16- ಪೆಟ್ರೋಲ್,ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಹರಿಹರ ತಾಲ್ಲೂಕಿನಲ್ಲಿ ಪ್ರತಿಭಟನೆ ಮುಂದುವರೆದಿದೆ.
ಶನಿವಾರ ಹರಿಹರದಲ್ಲಿ, ಭಾನುವಾರ ಮಲೇಬೆನ್ನೂರು, ಬೆಳ್ಳೂಡಿಯಲ್ಲಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಪಕ್ಷವು, ಸೋಮವಾರ ಕೊಮಾರನಹಳ್ಳಿ, ಹಾಲಿವಾಣ, ಕೊಕ್ಕನೂರು, ಉಕ್ಕಡಗಾತ್ರಿ, ಯಲವಟ್ಟಿ ಮತ್ತು ಸಾರಥಿ ಗ್ರಾಮಗಳಲ್ಲೂ ಪ್ರತಿಭಟನೆ ನಡೆಸಿತು.
ಕೊಮಾರನಹಳ್ಳಿಯ ಪೆಟ್ರೋಲ್ ಬಂಕ್ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಾಸಕ ಎಸ್. ರಾಮಪ್ಪ ಮಾತನಾಡಿ, ಕಳೆದ 7 ವರ್ಷಗಳಿಂದಲೂ ಸುಳ್ಳು ಹೇಳಿಕೊಂಡೇ ಅಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ಅವರ ನಿಜ ಬಣ್ಣ ಜನತೆಗೆ ಗೊತ್ತಾಗಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜನರಿಂದ ತಿರಸ್ಕೃತವಾಗುವುದು ಸೂರ್ಯನಷ್ಟೇ ಸತ್ಯ ಎಂದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಸಾಮಾನ್ಯ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಕೇಂದ್ರ ಸರ್ಕಾರ, ಭತ್ತ ಖರೀದಿ ಕೇಂದ್ರ ತೆರೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ರಾಮಪ್ಪ ದೂರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕುಂಬಳೂರು ವಾಸುದೇವ ಮೂರ್ತಿ, ಗ್ರಾ.ಪಂ. ಸದಸ್ಯರಾದ ಎಂ.ಆರ್. ಬಸವರಾಜ್, ಚಿಕ್ಕಣ್ಣ, ಚಂದ್ರಪ್ಪ, ನೀಲಪ್ಪ, ಎಸ್.ಎಂ. ಮಂಜುನಾಥ್, ಅಣ್ಣೇಶ್, ನವೀನ್ ಪಟೇಲ್, ಪರಮೇಶ್ವರನಾಯ್ಕ್, ಹೋಟೆಲ್ ಪರಮೇಶ್ವರಪ್ಪ, ಪೂಜಾರ್ ರಾಜಪ್ಪ ಇನ್ನಿತರರು ಭಾಗವಹಿಸಿದ್ದರು.