ದಾವಣಗೆರೆ, ಜೂ.15- ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವುದು ಇಂದಿನ ದಿನಮಾನಗಳಲ್ಲಿ ಸಂಘ-ಸಂಸ್ಥೆಗಳ ಮೊದಲ ಆದ್ಯತೆ ಆಗಬೇಕೆಂದು ಹಿರಿಯ ನ್ಯಾಯವಾದಿ ಎಲ್.ಹೆಚ್.ಅರುಣ್ಕುಮಾರ್ ಹೇಳಿದರು.
ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ಇವರ ವತಿಯಿಂದ ಭಾನುವಾರ ನಗರದ ಬಂಬೂ ಬಜಾರ್, ಬಾಷಾ ನಗರ, ಶಿವನಗರ, ಹೆಚ್ಕೆಜಿಎನ್ ನಗರದಲ್ಲಿ ಸ್ಲಂ ನಿವಾಸಿಗಳಿಗೆ ದಿನಸಿ ಕಿಟ್ಗಳನ್ನು ವಿತರಿಸಿ ಮಾತನಾಡಿದರು.
ಕೊರೊನಾದಂತಹ ಸಾಂಕ್ರಾಮಿಕ ರೋಗದಿಂದ ಕಳೆದ 2 ವರ್ಷಗಳಿಂದ ಬಡವರು ಅತಂತ್ರ ಸ್ಥಿತಿಯಲ್ಲಿ ಇದ್ದು, ಜೀವನ ನಿರ್ವಹಿಸುವುದು ತುಂಬಾ ದುಸ್ತರವಾಗಿದೆ. ದಿನಗೂಲಿ ಕಾರ್ಮಿಕರು, ಕೃಷಿಕರು, ಸ್ಲಂ ನಿವಾಸಿಗಳು ಅತ್ಯಂತ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ಧಾರೆ. ಇಂತಹ ಜನರ ನೆರವಿಗೆ ಬರುವುದು ಸಂಘ-ಸಂಸ್ಥೆಗಳ ಮೊದಲ ಜವಾಬ್ದಾರಿ ಆಗಬೇಕು ಎಂದು ಹೇಳಿದರು.
ಸ್ಲಂ ಜನಾಂದೋಲನ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ ಮಾತನಾಡಿ, ಸಂಘಟನೆಯು ದಾವಣಗೆರೆಯಲ್ಲಿ ನಿರಂತರವಾಗಿ ಸ್ಲಂ ಜನರ ಮೂಲಭೂತ ಹಕ್ಕುಗಳ ಪರವಾಗಿ ಹೋರಾಟ ಮಾಡುತ್ತಾ ಬಂದಿದ್ದು, ಜತೆಗೆ ಜನಪರ ಕಾರ್ಯಕ್ರಮ, ವಿಚಾರ ಸಂಕಿರಣಗಳನ್ನು ಏರ್ಪಡಿಸುವ ಮೂಲಕ ಅರಿವು ಮೂಡಿಸುವ ಕೆಲಸ ಮಾಡಿದೆ. ಸ್ಲಂ ಜನರು ಸಂಕಷ್ಟದಲ್ಲಿದ್ದ ಇಂದಿನ ಸಂದರ್ಭದಲ್ಲಿ ಸಂಘಟನೆ ಅವಶ್ಯಕವಾದ ದಿನಸಿ ಕಿಟ್ಗಳನ್ನು ಅಜಿತ್ಪ್ರೇಮ್ಜೀ ಫೌಂಡೇಷನ್ ಸಹಕಾರದೊಂದಿಗೆ ದಿನಸಿ ಕಿಟ್ಗಳನ್ನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯ ಮುಂದುವರೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಲಂ ಜನಾಂದೋಲನ ಸಮಿತಿಯ ಜಿಲ್ಲಾಧ್ಯಕ್ಷ ಶಬ್ಬೀರ್ಸಾಬ್, ಅಧ್ಯಕ್ಷರಾದ ಶಾಹೀನಾಬಾನು, ಪದಾಧಿಕಾರಿಗಳಾದ ಸಾವಿತ್ರಮ್ಮ, ಬಾಲಪ್ಪ ಮತ್ತಿತರರು ಇದ್ದರು.