ಕಾಗದದ ದೋಣಿಗೆ ಬೆಲೆ ಏರಿಕೆಯ ಹೊಡೆತ

ದೇಶದ ಲಕ್ಷಾಂತರ ಸಣ್ಣ ಪೇಪರ್‌ ಘಟಕಗಳಿಗೆ ಸಂಕಷ್ಟ

ನವದೆಹಲಿ, ಮಾ.20 – ಕಚ್ಚಾ ವಸ್ತುಗಳ ಬೆಲೆ ಏರಿಕೆ ಯಿಂದಾಗಿ ಮುದ್ರಣ ವಲಯ ಈಗ ಸಂಕಷ್ಟಕ್ಕೆ ಸಿಲುಕಿದೆ. ಮುದ್ರಣಕ್ಕೆ ಬಳಸಲಾಗುವ ಮಸಿ, ಪ್ಲೇಟ್‌ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಕಾಗದದ ಬೆಲೆ ಏರಿಕೆ ಮುದ್ರಕರಿಗೆ ಸಮಸ್ಯೆ ತರುತ್ತಿದೆ.

ಮೊದಲು ಲಾಕ್‌ಡೌನ್‌ ಕಾರಣ ದಿಂದಾಗಿ ಮುದ್ರಣ ವಲಯ ತತ್ತರಿಸಿತ್ತು. ಈಗ ಲಾಕ್‌ಡೌನ್‌ ಮುಗಿಯುತ್ತಿರು ವಂತೆಯೇ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಲಾಕ್‌ಡೌನ್‌ ಕಾಲದಲ್ಲಿ ಕಾಗದದ ದೋಣಿ ಯಂತಾಗಿದ್ದ ಉದ್ಯಮ, ಈಗ ಆ ಕಾಗದದ ದೋಣಿಗೂ ಬೆಲೆ ಏರಿಕೆ ರಂಧ್ರ ಮಾಡಿದೆ. ಕೊರೊನಾ ನಂತರ ಕೆಲವು ತಿಂಗಳ ಕಾಲ ಇದ್ದ ಆಶಾವಾದ ಈಗ ತೂಗುಯ್ಯಾಲೆಗೆ ಸಿಲುಕಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಕಾಗದದ ಬೆಲೆ ಕುಸಿದಿತ್ತು. ಆದರೆ, ಆಗ ಬೇಡಿಕೆಯೇ ಇರಲಿಲ್ಲ. ಹೀಗಾಗಿ ಲಾಕ್‌ಡೌನ್‌ ಅವಧಿ ಯಲ್ಲಿ ಮುದ್ರಣ ಹಾಗೂ ಪ್ಯಾಕೇಜಿಂಗ್ ವಲಯ ಸಂಕಷ್ಟ ಅನುಭವಿಸುವುದು ತಪ್ಪ ಲಿಲ್ಲ. ಈಗ ಲಾಕ್‌ಡೌನ್‌ ಮುಗಿಯುತ್ತಿರು ವಂತೆಯೇ ಬೆಲೆ ಏರಿಕೆ ಕಾಡುತ್ತಿದೆ.

ಕಚ್ಚಾ ವಸ್ತುಗಳ ಬೆಲೆ ತೀವ್ರವಾಗಿ ಏರಿಸಿ ರುವುದನ್ನು ಆಲ್ ಇಂಡಿಯಾ ಫೆಡರೇಷನ್ ಆಫ್ ಮಾಸ್ಟರ್ ಪ್ರಿಂಟರ್ಸ್ (ಎ.ಐ.ಎಫ್.ಎಂ.ಪಿ.) ಖಂಡಿಸಿದೆ. ಒಂದೆಡೆ ಬೆಲೆ ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂಬ ಮಾತುಗಳು ಕೇಳಿಬರುತ್ತಿದ್ದರೂ ಸಹ, ಗ್ರಾಹಕರು ಹೆಚ್ಚಿನ ಬೆಲೆ ತೆರಲು ಬಯಸುತ್ತಿಲ್ಲ ಎಂದು ಮುದ್ರಣ ವಲಯದ ಬಹುತೇಕರು ಹೇಳುತ್ತಿದ್ದಾರೆ.

ಕೇವಲ ಮುದ್ರಣವಷ್ಟೇ ಅಲ್ಲದೇ, ಪ್ಯಾಕೇಜಿಂಗ್ ವಲಯ ಸಹ ಕಾಗದವನ್ನು ಅವಲಂಬಿಸಿದೆ. ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳು ಮುಖ್ಯವಾಗಿ ಕಾಗದವನ್ನು ಬಳಸುತ್ತಿವೆ. ಕೊರೊನಾ ನಂತರದಲ್ಲಿ ಈ ವಲಯಗಳಲ್ಲಿ ಮತ್ತೆ ಹಳೆಯ ಬೇಡಿಕೆ ಬಂದಿರುವುದು ಕಾಗದದ ಬೆಲೆ ಹೆಚ್ಚಾಗಲು ಕಾರಣವಾಗಿದೆ. ದೇಶದಲ್ಲಿ 2.50 ಲಕ್ಷ ಮುದ್ರಣ ಕಂಪನಿಗಳಿವೆ. ಇವುಗಳಲ್ಲಿ ಶೇ.85ಕ್ಕೂ ಹೆಚ್ಚು ಸಣ್ಣ ಹಾಗೂ ಅತಿಸಣ್ಣ ಘಟಕಗಳಾಗಿವೆ. ಈ ಸಣ್ಣ ಘಟಕ ಗಳು ಅತಿಯಾದ ಏರಿಳಿತ ಸಹಿಸಿಕೊಳ್ಳುವ ಶಕ್ತಿ  ಹೊಂದಿಲ್ಲ ಎಂದು ಎ.ಐ.ಎಫ್.ಎಂ.ಪಿ. ಅಧ್ಯಕ್ಷ ಪ್ರೊ. ಕಮಲ್ ಮೋಹನ್ ಚೋಪ್ರಾ ಹೇಳಿದ್ದಾರೆ.

ಲಾಕ್‌ಡೌನ್‌ ನಂತರದಲ್ಲಿ ಹಲವಾರು ಉದ್ಯಮ ಗಳು ಏರಮುಖವಾಗಿವೆ. ಆದರೆ, ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಮುದ್ರಣ ವಲಯ ಮಾತ್ರ ಹೊಡೆತ ಎದುರಿಸುತ್ತಿದೆ ಎಂದವರು ಹೇಳಿದ್ದಾರೆ.

ಕಚ್ಚಾ ವಸ್ತುಗಳ ಬೆಲೆ ಏಕಾಏಕಿ ಶೇ.30-35ರಷ್ಟು ಹೆಚ್ಚಾಗಿರುವುದರಿಂದ ಉದ್ಯಮ ನಿರ್ವಹಿಸುವುದೇ ಕಷ್ಟವಾಗಿದೆ. ಕಾಗದದ ಬೆಲೆ ಏರಿಕೆಯಷ್ಟೇ ಅಲ್ಲದೇ, ಮಾನವ ಶಕ್ತಿಯ ಬೆಲೆ ಏರಿಕೆ, ಲ್ಯಾಮಿನೇಟಿಂಗ್ ಫಿಲ್ಮ್‌, ಸಾರಿಗೆ ಹಾಗೂ ಇತರೆ ವೆಚ್ಚಗಳಲ್ಲಿ ಕಳೆದ ಕೆಲ ವರ್ಷಗಳಲ್ಲಿ ಶೇ.60-70ರವರೆಗೆ ಹೆಚ್ಚಳವಾಗಿದೆ ಎಂದವರು ತಿಳಿಸಿದ್ದಾರೆ.

ಕಾಗದ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಬರುತ್ತದೆ. ಆದರೆ, ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕಾಗದ ವಲಯದ ಮೇಲೆ ಅಗತ್ಯ ನಿಗಾ ವಹಿಸುತ್ತಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಿದರೆ ಗುಣಮಟ್ಟ ಹೆಚ್ಚಿಸುವ ಜೊತೆಗೆ, ಬೆಲೆ ನಿಯಂತ್ರಣ ಸಾಧ್ಯವಾಗಲಿದೆ ಎಂದವರು ತಿಳಿಸಿದ್ದಾರೆ.

ಸರ್ಕಾರ ಕ್ರಮ ತೆಗೆದುಕೊಳ್ಳದೇ ಹೋದರೆ ಮುದ್ರಕರು ಅನಿವಾರ್ಯವಾಗಿ ಬೆಲೆ ಹೆಚ್ಚಿಸಬೇಕಾಗು ತ್ತದೆ. ಇದರಿಂದಾಗಿ ಉದ್ಯಮ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮವಾಗುತ್ತದೆ ಎಂದವರು ತಿಳಿಸಿದ್ದಾರೆ.

ಕಳೆದ ನಾಲ್ಕು ತಿಂಗಳಲ್ಲಿ ಪೇಪರ್ ಮಿಲ್‌ಗಳು ಗಣನೀಯವಾಗಿ ಬೆಲೆ ಹೆಚ್ಚಿಸಿವೆ. ಇದು ಮುದ್ರಣ ವಲಯಕ್ಕೆ ಅನಿರೀಕ್ಷಿತ ಆಘಾತ ನೀಡಿದೆ. ಇದರಿಂದಾಗಿ ಮುದ್ರಣ ಹಾಗೂ ಪ್ಯಾಕೇಜಿಂಗ್ ವಲಯ ಕುಸಿಯುವ ಕಳವಳವಿದೆ ಎಂದೂ ಅವರು ಹೇಳಿದ್ದಾರೆ.


ಎಸ್.ಎ. ಶ್ರೀನಿವಾಸ್,
[email protected]

error: Content is protected !!