ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ಮಹಾವಿದ್ಯಾಲಯದ ಉಪಕುಲಪತಿ ಡಾ. ಎಂ.ಕೆ. ನಾಯಕ
ದಾವಣಗೆರೆ, ಮಾ.21- ಕೃಷಿಯಲ್ಲಿ ಅಭಿವೃದ್ಧಿ ಹೊಂದಿದರೂ ರೈತರಿಗೆ ಆದಾಯ ಇಲ್ಲದಂತಾಗಿದೆ ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ಮಹಾವಿದ್ಯಾಲಯದ ಉಪ ಕುಲಪತಿ ಡಾ. ಎಂ.ಕೆ. ನಾಯಕ ಹೇಳಿದರು.
ಕೃಷಿ ತಂತ್ರಜ್ಞರ ಸಂಸ್ಥೆ, ಕೆಪೆಕ್ ಬೆಂಗಳೂರು, ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯ ಶಿವಮೊಗ್ಗ, ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ನಬಾರ್ಡ್, ಆತ್ಮ ಕಾರ್ಯಕ್ರಮ, ತೋಟಗಾರಿಕಾ ಇಲಾಖೆ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಬೆಂಗಳೂರು ವಿಭಾಗೀಯ ರೈತ ಉತ್ಪಾದಕ ಕಂಪನಿಗಳ ಪ್ರತಿನಿಧಿಗಳಿಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಸಂಘಟಿತರಾಗುವ ಜೊತೆಗೆ ಆರ್ಥಿಕವಾಗಿ ಸಬಲರಾಗಬೇಕಿದೆ ಮತ್ತು ರೈತ ಉತ್ಪಾದಕ ಕಂಪನಿಗಳು ಹೆಚ್ಚು ಸ್ಥಾಪನೆಯಾಗಬೇಕಾಗಿದೆ ಎಂದರು.
ದೇಶದಲ್ಲಿ 5 ಸಾವಿರ ಮತ್ತು ರಾಜ್ಯದಲ್ಲಿ 450 ರೈತ ಉತ್ಪಾದಕ ಕಂಪನಿಗಳು ಕಾರ್ಯಾರಂಭ ಮಾಡಿವೆ. ಕೃಷಿಕರ ಮತ್ತು ಕೃಷಿಯ ಸ್ಥಿತಿಗತಿ ಅವಲೋಕಿಸಿದಾಗ ಉತ್ಪಾದನೆಯಲ್ಲಿ ದೇಶ ಮತ್ತು ರಾಜ್ಯದಲ್ಲಿ ಸುಸ್ಥಿತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಕೊರೊನಾ ಸಂದರ್ಭದಲ್ಲಿ 80 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ 24 ದಶಲಕ್ಷ ಟನ್ ಆಹಾರ ಧಾನ್ಯ ಸರಬರಾಜು ಮಾಡಲಾಗಿದೆ ಎಂದರು.
ಕೊರೊನಾ ಸಂದರ್ಭದಲ್ಲಿ ಅನ್ನದಾನ ಜನರಿಗೆ ಎರಡು ಹೊತ್ತು ಊಟ ನೀಡುವ ಜೊತೆಗೆ ಆತ್ಮಸ್ಥೈರ್ಯ ಕೊಟ್ಟಿರುವುದು ಶ್ಲಾಘನೀಯ ಎಂದು ಹೇಳಿದರು. ರೈತರು ಬುದ್ಧಿವಂತರಾಗಿ ವ್ಯವಹಾರ ಜ್ಞಾನ ಪಡೆದುಕೊಳ್ಳುವ ಅಗತ್ಯವಿದೆ.
ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಹೊಸ ಹೊಸ ಆವಿಷ್ಕಾರಗಳಾಗಬೇಕು. ಅನ್ನದಾತರು ಆದಾಯದಾತರಾಗುವ ಕಡೆ ಹೆಜ್ಜೆ ಹಾಕಬೇಕಾಗಿದೆ ಎಂದು ಹಿತ ನುಡಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಕೃಷಿ ತಂತ್ರಜ್ಞರ ಸಂಸ್ಥೆ ಉಪಾಧ್ಯಕ್ಷ ಡಾ. ಜಿ. ಈಶ್ವರಪ್ಪ ಅವರು ನೂತನ ಕೃಷಿ ಕಾಯ್ದೆಗಳ ಹಸ್ತಪ್ರತಿ ಬಿಡುಗಡೆ ಮಾಡಿ ಮಾತನಾಡಿದರು.
ಬೆಂಗಳೂರು ಅಟಾರಿ ವಿಶ್ರಾಂತ ನಿರ್ದೇಶಕ ಡಾ. ಪ್ರಭುಕುಮಾರ್, ಹಿರಿಯ ವಿಜ್ಞಾನಿ ಬೆಂಗಳೂರಿನ ಡಾ. ಡಿ.ವಿ. ಸುಧಾಕರರಾವ್, ಬೆಂಗಳೂರು ಕೃಷಿ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ಟಿ.ಎನ್. ವೆಂಕಟೇಶರೆಡ್ಡಿ, ಡಾ. ಮಂಜುನಾಥ್ ಇವರು ಕೃಷಿ ತಾಂತ್ರಿಕತೆ ಕುರಿತು ಉಪನ್ಯಾಸ ನೀಡಿದರು.
ಹಿರಿಯ ವಿಜ್ಞಾನಿ ಡಾ. ಟಿ.ಎನ್. ದೇವ ರಾಜ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮಣ್ಣನವರ್, ಧಾರವಾಡ ಕೃಷಿ ವಿ.ವಿ. ಆಡಳಿತ ಮಂಡಳಿ ಸದಸ್ಯ ಎಲ್.ಎಸ್. ಅಜಗಣ್ಣನವರ್, ಕೃಷಿ ತಂತ್ರಜ್ಞರ ಸಂಸ್ಥೆ ವ್ಯವಸ್ಥಾಪಕ ಮಂಡಳಿ ಸದಸ್ಯ ಉಮೇಶ್, ದಾವಣಗೆರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ ಮತ್ತಿತರರು ಉಪಸ್ಥಿತರಿದ್ದರು.
ಸಹಾಯಕ ಕೃಷಿ ನಿರ್ದೇಶಕ ಹೆಚ್.ಕೆ. ರೇವಣಸಿದ್ಧನಗೌಡ ಸ್ವಾಗತಿಸಿದರು. ಕಾಡಜ್ಜಿ ಕೃಷಿ ತರಬೇತಿ ಕೇಂದ್ರದ ಉಪನಿರ್ದೇಶಕ ತಿಪ್ಪೇಸ್ವಾಮಿ ನಿರೂಪಿಸಿದರು.