7 ರಂದು ಕಾಡಾ ಅಧ್ಯಕ್ಷರಿಂದ ಭದ್ರೆಗೆ ಬಾಗಿನ
ಮಲೇಬೆನ್ನೂರು, ಆ.4- ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಜಲಾಶಯ ಸಂಪೂರ್ಣ ತುಂಬುತ್ತಿದ್ದಂತೆ ಹೆಚ್ಚುವರಿ ನೀರನ್ನು ನದಿಗೆ ಹರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಬುಧವಾರ ಬೆಳಿಗ್ಗೆ ಮತ್ತಷ್ಟು ಒಳಹರಿವು ಹೆಚ್ಚಾಗಿದ್ದು, ನೀರಿನ ಮಟ್ಟ 184 ಅಡಿ ತಲುಪಿದೆ. 71.535 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲೀಗ 68.188 ಟಿಎಂಸಿ ನೀರು ಸಂಗ್ರಹವಾಗಿದೆ.
ಮಲೆನಾಡಿನಲ್ಲಿ ಮಂಗಳವಾರದಿಂದ ಮತ್ತೆ ಮಳೆ ಆರಂಭವಾಗಿದೆ. ಅಲ್ಲದೇ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹೇಳಿದೆ. ಹಾಗಾಗಿ ಜಲಾಶಯದ ಹಿತದೃಷ್ಟಿಯಿಂದ ಗರಿಷ್ಠ ಮಟ್ಟ 186 ಅಡಿ ವರೆಗೆ ನೀರು ಸಂಗ್ರಹಿಸದೇ 184 ಅಥವಾ 185 ಅಡಿಗೆ ನೀರು ತಲುಪಿದ ತಕ್ಷಣ ಒಳ ಹರಿವಿನ ಪ್ರಮಾಣ ನೋಡಿಕೊಂಡು ಜಲಾಶಯದ ಕ್ರೆಸ್ಟ್ ಗೇಟ್‌ಗಳ ಮೂಲಕ ಹೆಚ್ಚುವರಿ ನೀರು ನದಿಗೆ ಬಿಡಲಾಗುವುದು.
ಕಳೆದ ವರ್ಷ ಈ ದಿನ ಜಲಾಶಯದಲ್ಲಿ 154 ಅಡಿ 3 ಇಂಚು ನೀರಿತ್ತು. ಕಳೆದ 2 ವರ್ಷಗಳಿಗೆ ಹೋಲಿಸಿದರೆ, ಜುಲೈ ತಿಂಗಳಲ್ಲೇ ಜಲಾಶಯಕ್ಕೆ ಇಷ್ಟೊಂದು ಪ್ರಮಾಣದ ನೀರು ಹರಿದು ಬಂದು ಅಚ್ಚುಕಟ್ಟಿನ ರೈತರ ಬದುಕನ್ನು ಭದ್ರಗೊಳಿಸಿದೆ.
7 ಕ್ಕೆ ಬಾಗಿನ: ಭರ್ತಿಯಾಗಿರುವ ಭದ್ರಾ ಜಲಾಶಯಕ್ಕೆ ಇದೇ ದಿನಾಂಕ 7ರ ಶನಿವಾರ ಬೆಳಿಗ್ಗೆ 8 ಗಂಟೆಗೆ ಭದ್ರಾ ಕಾಡಾ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರು ಅಚ್ಚುಕಟ್ಟು ವ್ಯಾಪ್ತಿಯ ಸಂಸದರ, ಶಾಸಕರ ಹಾಗೂ ಕಾಡಾ ಸದಸ್ಯರು, ರೈತ ಮುಖಂಡರ ಸಮ್ಮುಖದಲ್ಲಿ ಬಾಗಿನ ಅರ್ಪಿಸಲಿದ್ದಾರೆ.