ನಗರಕ್ಕೆ ಭೇಟಿ ನೀಡಿದ್ದ ರೈತ ಹೋರಾಟಗಾರ ರಾಕೇಶ್ ಟಿಕಾಯತ್ ಆಕ್ರೋಶ
ದಾವಣಗೆರೆ, ಮಾ. 21 – ಬಂಡವಾಳಶಾಹಿಗಳು ಧಾನ್ಯವನ್ನು ಕಡಿಮೆ ಬೆಲೆಗೆ ಖರೀದಿಸಿ, ದೊಡ್ಡ ದೊಡ್ಡ ಗೋದಾಮುಗಳಲ್ಲಿ ಧಾನ್ಯಗಳನ್ನು ತುಂಬಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ದೆಹಲಿಯಲ್ಲಿ ಹೋರಾಟ ಮುನ್ನಡೆಸುತ್ತಿರುವ ರೈತ ಮುಖಂಡ ರಾಕೇಶ್ ಟಿಕಾಯತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ರೈತರ ಮಹಾ ಪಂಚಾಯತ್ಗಳನ್ನು ನಡೆಸಲು ಆಗಮಿಸಿದ ವೇಳೆ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಿವಯೋಗ ಮಂದಿರದಲ್ಲಿ ಆಯೋಜಿಸಿದ್ದ ಸಭೆ ಯಲ್ಲಿ ಅವರು ಮಾತನಾಡುತ್ತಿದ್ದರು.
ಕೇಂದ್ರ ಸರ್ಕಾರದ ಕಾಯ್ದೆಯಿಂದ ಬಂಡವಾಳಶಾಹಿಗಳು ದೊಡ್ಡ ಗೋದಾಮುಗಳಲ್ಲಿ ಧಾನ್ಯವನ್ನು ಲಾಭಕ್ಕಾಗಿ ತುಂಬಿಕೊಳ್ಳಲು ದಾರಿ ಮಾಡಿಕೊಡಲಾಗುತ್ತದೆ. ಹೀಗಾದರೆ ಸಣ್ಣ ಅಂಗಡಿಯವರು ಎಲ್ಲಿಗೆ ಹೋಗಬೇಕು? ಇಂತಹ ಪ್ರಯತ್ನದ ವಿರುದ್ಧದ ಹೋರಾಟ ಸುದೀರ್ಘ ವಾಗಿರಲಿದೆ ಎಂದವರು ತಿಳಿಸಿದರು.
ದೆಹಲಿಯಲ್ಲಿ ರೈತರು ಹೋರಾಟ ನಡೆಸುತ್ತಿರುವ ಮಾದರಿಯಲ್ಲೇ, ಬೆಂಗಳೂರನ್ನೂ ನಾಲ್ಕೂ ದಿಕ್ಕುಗಳಿಂದ ಸುತ್ತುವರೆಯಬೇಕು. ಇದು ಬದುಕಿ ಗಾಗಿ ನಡೆಸುತ್ತಿರುವ ಹೋರಾಟ. ಹೀಗಾಗಿ ಜಾತಿ – ಧರ್ಮಗಳು, ಚಿಕ್ಕ ವರು – ದೊಡ್ಡವರೆಂಬ ಭೇದಗಳನ್ನು ಬಿಟ್ಟು ಸಾಗಬೇಕು ಎಂದವರು ಹೇಳಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆ ಹಾಗೂ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಅವರ ವಿಚಾರಧಾರೆಗಳು ನಮ್ಮ ಜೊತೆ ಇವೆ. ಎಲ್ಲರನ್ನೂ ಜೊತೆಗೂಡಿಸಿಕೊಂಡು ಒಂದೇ ದನಿಯಿಂದ ಮುಂದೆ ಸಾಗಬೇಕಿದೆ ಎಂದು ಟಿಕಾಯತ್ ಹೇಳಿದರು.
ಘೋಷಣೆಗಳಲ್ಲಿ ಐಕ್ಯತೆ
ಜೈ ರಾಮ್, ಜೈ ಭೀಮ್, ಹರ್ ಹರ್ ಮಹಾದೇವ್ ಹಾಗೂ ಅಲ್ಲಾಹು ಅಕ್ಬರ್ ಎಂಬ ಘೋಷಣೆಗಳನ್ನು ಒಂದೇ ಸಾಲಿನಲ್ಲಿ ಹೇಳಿದ ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್, ನಮ್ಮ ಭಾಷೆ ಬೇರೆಯಾದರೂ ಭಾವ ಒಂದೇ ಆಗಿರಬೇಕು ಎಂದು ಕರೆ ನೀಡಿದರು.
ಎಲ್ಲರ ಜೊತೆಗೂಡಿ ನಾವು ಮುಂದೆ ಸಾಗುತ್ತೇವೆ. ಯಾವುದೇ ಭೇದ ಭಾವ ಇಲ್ಲದೇ ಈ ಎಲ್ಲ ಘೋಷಣೆಗಳನ್ನು ನಾವು ಮೊಳಗಿಸಬೇಕು ಎಂದವರು ತಿಳಿಸಿದರು.
‘ಶಾದಿ’ಗೆ ಕಾನೂನು ಮಾಡುವವರು ಎಂ.ಎಸ್.ಪಿ.ಗೆ ಏಕೆ ಕಾನೂನು ಮಾಡುತ್ತಿಲ್ಲ?
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮದುವೆಗೆ (ಲವ್ ಜಿಹಾದ್) ಹಾಗೂ ಆಹಾರಕ್ಕೂ ಕಾನೂನು ಮಾಡುತ್ತಿದೆ. ಆದರೆ, ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.)ಗೆ ಕಾನೂನು ಮಾಡುತ್ತಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮದುವೆ, ಆಹಾರ ಇತ್ಯಾದಿಗಳನ್ನು ಜನರ ಮನಸ್ಸಿಗೆ ಬಿಡಿ. ರೈತರು ಕೇಳುತ್ತಿರುವಂತೆ ಕನಿಷ್ಠ ಬೆಂಬಲ ಬೆಲೆಗಾಗಿ ಕಾನೂನು ರೂಪಿಸಿ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿದಿನ ತಮ್ಮ ಮನಸ್ಸಿನ ಜೊತೆ ಮಾತನಾಡುತ್ತಿದ್ದಾರೆ. ಆದರೆ, ರೈತರ ಮಾತು ಮಾತ್ರ ಕೇಳುತ್ತಿಲ್ಲ ಎಂದು ಆಕ್ಷೇಪಿಸಿದರು.
ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದ ಬಿಜೆಪಿ ಸರ್ಕಾರ, ಅವರ ಸಾಲವನ್ನು ದುಪ್ಪಟ್ಟು ಮಾಡಿದೆ. ಕೈಗಾರಿಕೋದ್ಯಮಿಗಳ ಆದಾಯವಷ್ಟೇ ದ್ವಿಗುಣವಾಗಿದೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ಯುವಕರಿಗೆ ಉದ್ಯೋಗ ಒದಗಿಸಿಲ್ಲ, ರೈತರು ಹಾಗೂ ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇಂತಹ ಸಂದರ್ಭದಲ್ಲಿ ಹಳ್ಳಿಗಳನ್ನು, ದೇಶವನ್ನು ಹಾಗೂ ಸಂವಿಧಾನವನ್ನು ಉಳಿಸಲು ಈ ಆಂದೋಲನ ನಡೆಸಲಾಗುತ್ತಿದೆ ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಕೇಂದ್ರದ ಮೂರು ಹಾಗೂ ರಾಜ್ಯದ ಎರಡು ಕರಾಳ ಕಾಯ್ದೆಗಳ ವಿರುದ್ಧ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ರೈತ – ಕಾರ್ಮಿಕರು ಹಾಗೂ ಲೂಟಿಕೋರ ವರ್ಗದ ನಡುವಿನ ಸಂಘರ್ಷ ಇದಾಗಿದೆ ಎಂದರು.
ಶೋಷಣೆ ಮಾಡುತ್ತಿರುವವರನ್ನು ಬಂಡವಾಳಶಾಹಿ ಎನ್ನುವ ಬದಲು ಲೂಟಿಕೋರರು ಎಂದು ಕರೆಯಬೇಕು. ಅವರ ಕೈಗೆ ಕೃಷಿ ಕೊಡಬಾರದು. ಹೋರಾಟ ಮಾಡದಿದ್ದರೆ ದೇಶ ಉಳಿಸುವುದು ಕಷ್ಟ ಎಂದು ಎಚ್ಚರಿಸಿದರು.
ಕಾರ್ಮಿಕ ಮುಖಂಡರಾದ ಹೆಚ್.ಕೆ. ರಾಮಚಂದ್ರಪ್ಪ ಮಾತನಾಡಿ, ರೈತರನ್ನು ತುಳಿಯುತ್ತಿರುವ ಸರ್ಕಾರದ ವಿರುದ್ಧ ದನಿ ಎತ್ತಲಾಗಿದೆ. 2024ರವರೆಗೆ ರೈತರ ಹೋರಾಟ ನಡೆಯುತ್ತದೆ. ಜನ ಜಾಗೃತಿಯಾದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಥೆ ಮುಗಿಯುತ್ತದೆ ಎಂದರು.
ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲೂ ರೈತರ ಮಹಾಪಂಚಾಯತ್ ಮಾಡಬೇಕಿದೆ. ಮನುವಾದಿ ಸರ್ಕಾರವನ್ನು ಕಿತ್ತು ಹಾಕಿ ಜನಪರ ಸರ್ಕಾರ ತರಲು ಹೋರಾಟ ನಡೆಯಬೇಕಿದೆ ಎಂದರು.
ಇದಕ್ಕೂ ಮುಂಚೆ ಅಂಬೇಡ್ಕರ್ ವೃತ್ತಕ್ಕೆ ತೆರಳಿದ್ದ ಟಿಕಾಯತ್, ಅಲ್ಲಿ ಸಂವಿಧಾನ ಶಿಲ್ಪಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್, ವಿವಿಧ ಸಂಘಟನೆಗಳ ಮುಖಂಡರಾದ ಅನೀಸ್ ಪಾಷ, ಎಲ್.ಹೆಚ್. ಅರುಣ್ ಕುಮಾರ್, ಅರುಣ್ ಕುಮಾರ್ ಕುರುಡಿ, ಸತೀಶ್ ಕುಮಾರ್, ಡಾ. ವಸುಧೇಂದ್ರ, ಜಬೀನಾ ಖಾನಂ, ಆವರಗೆರೆ ವಾಸು, ಆವರಗೆರೆ ಚಂದ್ರು, ಹೊನ್ನೂರು ಮುನಿಯಪ್ಪ, ಸತೀಶ್ ಅರವಿಂದ, ಆದಿಲ್ ಕಾನ್, ಅಣಬೇರು ತಿಪ್ಪೇಸ್ವಾಮಿ, ರಾಮಚಂದ್ರ ಕಲಾಲ್, ಆವರಗೆರೆ ರುದ್ರಮುನಿ ಮತ್ತಿತರರು ಉಪಸ್ಥಿತರಿದ್ದರು.