ದಾವಣಗೆರೆ, ಆ.4- ರಾಜ್ಯದ ಮಧ್ಯ ಕರ್ನಾಟಕದ ಜಿಲ್ಲೆ ಎಂದೇ ಹೆಸರಾಗಿರುವ ದಾವಣಗೆರೆ ಜಿಲ್ಲೆಗೆ ಈ ಬಾರಿಯೂ ಸಹ ಸಚಿವ ಸ್ಥಾನ ಇಲ್ಲದೆ ಬೇರೆ ಜಿಲ್ಲೆಯ ಸಚಿವರುಗಳ ಆಸರೆಯಲ್ಲಿ ಜೀವನ ಸಾಗಿಸುವ ಸ್ಥಿತಿ ಮುಂದುವರೆದಿರುವ ಬಗ್ಗೆ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ರಾಜ್ಯ ಸದಸ್ಯರು ಕೆ.ಎಲ್.ಹರೀಶ್ ಬಸಾಪುರ ಅವರು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇದ್ದರೂ, ಲೋಕಸಭೆಗೆ ಸತತ ನಾಲ್ಕು ಬಾರಿ ಇದೇ
ಪಕ್ಷದಿಂದ ಜಿಲ್ಲೆಯ ಜನರು ಆರಿಸಿ ಕಳಿಸುತ್ತಿದ್ದರೂ, ವಿಧಾನ ಪರಿಷತ್, ನಗರ ಪಾಲಿಕೆ, ಜಿಲ್ಲಾ ಪಂಚಾಯತ್ ಎಂದು ಬಂದ ಬಂದ ಚುನಾವಣೆಗಳಲ್ಲಿ ಅಭಿಮಾನದಿಂದ ಜಿಲ್ಲೆಯ ಜನ ಬಿಜೆಪಿ ಪಕ್ಷಕ್ಕೆ ಮತ ನೀಡುತ್ತಿದ್ದರೂ ಸಹ ಬಿಜೆಪಿಯ ವರಿಷ್ಠರು ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡದೆ ಜಿಲ್ಲೆಯ ಜನತೆಗೆ ಅವಮಾನಿಸಿದ್ದಾರೆ ಎಂದರೆ ತಪ್ಪಾಗಲಾರದು.
ಜಾತಿ ಸಮೀಕರಣ ವ್ಯವಸ್ಥೆಯಿಂದ ಎಸ್.ಎ. ರವೀಂದ್ರನಾಥ್, ಮಾಡಾಳ್ ವಿರೂಪಾಕ್ಷಪ್ಪ, ಎಸ್.ವಿ.ರಾಮಚಂದ್ರಪ್ಪ ಅವರಿಗೆ ಸಚಿವ ಸ್ಥಾನ ತಪ್ಪಿದ್ದರೆ, ಪ್ರಥಮ ಬಾರಿ ಎಂದು ಮಾಯಕೊಂಡದ ಲಿಂಗಣ್ಣನವರಿಗೆ ಸಚಿವ ಸ್ಥಾನ ತಪ್ಪಿತು ಎನ್ನಲಾಗುತ್ತಿದೆ.
ಆದರೆ, ಸಚಿವರಾಗುವ ಎಲ್ಲಾ ರೀತಿಯ ಅವಕಾಶಗಳಿದ್ದರೂ ಎಂ.ಪಿ. ರೇಣುಕಾಚಾರ್ಯ ಅವರ ವೈಯಕ್ತಿಕ ತಪ್ಪಿನಿಂದ ಜಿಲ್ಲೆಗೆ ಸಚಿವ ಸ್ಥಾನ ತಪ್ಪಿದೆ ಎನ್ನಲಾಗುತ್ತಿದೆ. ಅಂತಿಮವಾಗಿ ಜಿಲ್ಲೆಗೆ ಸಚಿವ ಸ್ಥಾನ ತಪ್ಪಿದ್ದಂತೂ ಸತ್ಯ.
ಪಕ್ಷದ ಶಾಸಕರು ಪಕ್ಷದ ಅಭಿಮಾನದಿಂದ ಅಥವಾ ನಾಯಕರ ಭಯದಿಂದ ತಮಗೆ ಆದ ಅವಮಾನವನ್ನು ಸಹಿಸಿಕೊಳ್ಳುತ್ತಾರೆ ಎಂದುಕೊಳ್ಳೋಣ.
ಆದರೆ, ಇಷ್ಟೆಲ್ಲಾ ಸ್ಥಾನ ಗೆಲ್ಲಲು ಮಹತ್ತರ ಪಾತ್ರವಹಿಸಿದ ಜಿಲ್ಲೆಯನ್ನೇ ಮರೆತಾಗ ಜಿಲ್ಲೆಯ ಜನರು ಇಂತಹ ಅವಮಾನವನ್ನು ಸಹಿಸಿಕೊಳ್ಳಲು ಸಾಧ್ಯವೇ ? ಎಂದು ಅವರು ಪ್ರಶ್ನಿಸಿದ್ದಾರೆ.