ಸರ್ಕಾರ ಬೆಳೆಗಳಿಗೆ ಬೆಂಬಲ ಬೆಲೆ ನೀಡದೇ ರೈತರನ್ನು ತುಳಿಯುತ್ತಿದೆ

ಮಲೇಬೆನ್ನೂರಿನ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಶಾಸಕ ರಾಮಪ್ಪ

ಮಲೇಬೆನ್ನೂರು, ಜೂ.13- ಇಲ್ಲಿನ ಕುಂಬಳೂರು ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸರ್ವೀಸ್ ಸ್ಟೇಷನ್ ಮುಂಭಾಗ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಸಿರುವುದನ್ನು ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ಎಸ್.ರಾಮಪ್ಪ ಮಾತನಾಡಿ, ಸಾಮಾನ್ಯ ಜನರ, ರೈತರ ಹಿಡಿ ಶಾಪಕ್ಕೆ ಗುರಿಯಾಗಿರುವ ಕೇಂದ್ರದ ಬಿಜೆಪಿ ಸರ್ಕಾರ ಕೂಡಲೇ ತೊಲಗಬೇಕು. `ಅಚ್ಛೇ ದಿನ್’ ಎಲ್ಲಿದೆ ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳುವುದನ್ನು ಬಿಟ್ಟು ಬೇರೆ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ತೈಲ ಬೆಲೆಗಳನ್ನು ಗಗನಕ್ಕೆ ಏರಿಸಿರುವ ಕೇಂದ್ರ ಸರ್ಕಾರ, ರೈತ ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಬೆಂಬಲ ಬೆಲೆ ನೀಡದೇ ರೈತರನ್ನು ತುಳಿಯುತ್ತಿದೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಯನ್ನು ಕೂಡಲೇ ಇಳಿಕೆ ಮಾಡಬೇಕು. ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಅವರು ಒತ್ತಾಯಿಸಿದರು.

ಜಿ.ಪಂ. ಮಾಜಿ ಸದಸ್ಯರೂ, ವಕೀಲರೂ ಆದ ಎಂ.ನಾಗೇಂದ್ರಪ್ಪ ಮಾತನಾಡಿ, ಸಮರ್ಥ ಆಡಳಿತ ನಿರ್ವಹಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ಮೋದಿ ಅವರು ಹಿಟ್ಲರ್ ಸಂಸ್ಕೃತಿ ಹೊಂದಿ ದ್ದಾರೆ. ಬಿಜೆಪಿ ಸರ್ಕಾರ ತೊಲಗಿಸಲು ಜನ ಚುನಾವಣೆಗಾಗಿ ಕಾಯುತ್ತಿದ್ದಾರೆ ಎಂದರು.

ಎಪಿಎಂಸಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಜಾಫರ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಕೆ.ಪಿ.ಗಂಗಾಧರ್, ಮುಖಂಡ ಹಕ್ಕೀಂಸಾಬ್, ಯುವ ಮುಖಂಡರಾದ ನಯಾಜ್ ದಾದಾಪೀರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಭೋವಿ ಕುಮಾರ್, ಹಳ್ಳಿಹಾಳ್ ಚಂದ್ರಶೇಖರ್, ಯಲವಟ್ಟಿ ಕೊಟ್ರೇಶ್ ನಾಯ್ಕ ಮಾತನಾಡಿ, ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನು ಖಂಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬೀದ್ ಅಲಿ ಮಾತನಾಡಿ, ಸೋಮವಾರ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ತಾ.ಪಂ. ಮಾಜಿ ಅಧ್ಯಕ್ಷ ಆದಾಪುರ ವೀರಭದ್ರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಬೆಳ್ಳೂಡಿ ನರೇಂದ್ರ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕುಂಬಳೂರು ವಾಸುದೇವಮೂರ್ತಿ, ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಭೋವಿ ಶಿವು, ಪುರಸಭೆ ಮಾಜಿ ಸದಸ್ಯರಾದ ಎ.ಆರೀಫ್ ಅಲಿ, ದಾದಾವಲಿ, ಫಕೃದ್ದೀನ್, ಪಿ.ಆರ್.ಕುಮಾರ್, ಯುನೂಸ್, ಫಾಜಿಲ್, ಆಕ್ಸರ್ ಅಲಿ, ಅಲ್ತಾಫ್, ರಹೀಮುಲ್ಲಾ, ಆದಾಪುರ ಹನುಮಂತಪ್ಪ, ರಹೀಮುಲ್ಲಾ ದರವೇಶ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ಬೆಳ್ಳೂಡಿಯಲ್ಲಿ ಪೆಟ್ರೋಲ್ ಬಂಕ್ ಎದುರು ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಶಾಸಕ ರಾಮಪ್ಪ, ಎಂ.ನಾಗೇಂದ್ರಪ್ಪ, ಬೆಳ್ಳೂಡಿ ಬಸವರಾಜ್, ನರೇಂದ್ರ, ಸಂತೋಷ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

error: Content is protected !!