ಮಾರುಕಟ್ಟೆಯಲ್ಲಿ ‘ಸಾಮಾನ್ಯ’ವಾದ ವಹಿವಾಟು

ಒತ್ತಡವಿಲ್ಲದೇ ಖರೀದಿ ನಡೆಸಿದ ನಾಗರಿಕರು

ದಾವಣಗೆರೆ, ಜೂ. 9 – ಕಳೆದ ಎರಡು ವಾರಗಳಿಂದ ಏರಿಳಿತ ಕಾಣುತ್ತಿದ್ದ ನಗರದ ಮಾರುಕಟ್ಟೆ ಹಾಗೂ ದಿನಸಿ ಮಾರಾಟ ಬುಧವಾರದಂದು ಸಾಮಾನ್ಯದತ್ತ ಮರಳಿದ ಲಕ್ಷಣಗಳು ಕಂಡು ಬಂದಿವೆ.

ಈ ಹಿಂದೆ ಕೊರೊನಾ ತಡೆಯುವ ಸಲುವಾಗಿ ವಾರದಲ್ಲಿ ಒಂದು ದಿನ ಮಾತ್ರ ಖರೀದಿಗೆ ಅವಕಾಶ ಕೊಟ್ಟಿದ್ದ ಕಾರಣ, ಖರೀದಿಗೆ ಅವಕಾಶ ಕೊಟ್ಟಾಗ ಮಾರುಕಟ್ಟೆಯಲ್ಲಿ ತೀವ್ರ ನೂಕು ನುಗ್ಗಲು ಉಂಟಾಗಿತ್ತು. ನಂತರ ಜಿಲ್ಲಾಡಳಿತ ವಾರದಲ್ಲಿ ಮೂರು ದಿನ ಖರೀದಿಗೆ ಅವಕಾಶ ಕೊಟ್ಟಿದ್ದಲ್ಲದೇ, ಮಧ್ಯಾಹ್ನ 12 ಗಂಟೆಯವರೆಗೆ ಬಿಡುವು ನೀಡಿದ್ದು, ಜನ ನಿರಾಳರಾಗಲು ನೆರವಾಗಿದೆ.

ಬುಧವಾರದಂದು ಮಾರು ಕಟ್ಟೆ ವಲಯ ಹಾಗೂ ಜನ ವಸತಿ ಪ್ರದೇಶಗಳಲ್ಲಿ ಜನರು ಖರೀದಿಗಾಗಿ ಹಿಂದಿನ ಮಾದರಿಯಲ್ಲಿ ನೂಕು ನುಗ್ಗಲು ನಡೆಸಲಿಲ್ಲ. ಕಳೆದ ಸೋಮವಾರ ಖರೀದಿಗೆ ಅವಕಾಶವಾಗಿತ್ತಲ್ಲದೇ, ಮತ್ತೆ ಶುಕ್ರವಾರ ಖರೀದಿಗೆ ಅವಕಾಶ ಇತ್ತು. ಹೀಗಾಗಿ §ಸಾಮಾನ್ಯ’ ರೀತಿಯಲ್ಲೇ ಖರೀದಿ ನಡೆಯಿತು.

ಜನರು ಸಮಾಧಾನವಾಗಿ ಖರೀದಿ ಮಾಡುತ್ತಿದ್ದಾರೆ. ಹಿಂದಿನಂತೆ ಒತ್ತಡದಿಂದ ಬರುತ್ತಿಲ್ಲ. ವ್ಯಾಪಾರ ಸಾಮಾನ್ಯ ದಿನಗಳ ರೀತಿಯಲ್ಲಿ ನಡೆದಿದೆ ಎಂದು ಹಲವಾರು ವರ್ತಕರು ತಿಳಿಸಿದ್ದಾರೆ.

ಅನಿಶ್ಚಿತತೆ ಹಿನ್ನೆಲೆಯಲ್ಲಿ ಕೆಲವರು ಆತಂಕದಿಂದ ವಾರಕ್ಕೆ – ತಿಂಗಳಿಗಾಗುವಷ್ಟು ದಿನಸಿ ಖರೀದಿಸಿದ್ದಾರೆ. ಹೀಗಾಗಿ ಈಗ ದಿನಸಿ ಖರೀದಿಗೆ ಅಷ್ಟಾಗಿ ಒತ್ತಡವಿಲ್ಲ ಎಂದು ದಿನಸಿ ಅಂಗಡಿಯ ಉಮೇಶ್ ತಿಳಿಸಿದ್ದಾರೆ.

ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದುಡಿಮೆಯೂ ಕಡಿಮೆ ಇದೆ. ಇದೂ ಸಹ ಮಾರುಕಟ್ಟೆಯಲ್ಲಿ ಖರೀದಿ ಉತ್ಸಾಹ ಕಡಿಮೆ ಆಗಲು ಕಾರಣವಾಗಿದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.

error: Content is protected !!