ದಾವಣಗೆರೆ, ಜೂ.9 – ಕೆನರಾ ಬ್ಯಾಂಕ್ ದೇಶಕ್ಕಾಗಿ ಹಣಕಾಸು ಸೇವೆಯನ್ನು ಸಲ್ಲಿಸುವುದರ ಜೊತೆಗೆ ಸಾಮಾಜಿಕ ಬಾಧ್ಯತೆಯಿಂದ ಸಮಾಜ ಸೇವೆ ಮಾಡುತ್ತಿರುವುದು ಶ್ಲ್ಯಾಘನೀಯ ಎಂದು ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ.ವೀರೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕೆನರಾ ಬ್ಯಾಂಕ್ ವತಿಯಿಂದ ಜಿಲ್ಲಾ ಚಿಗಟೇರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಇಂದು ಆಯೋಜಿಸಿದ್ದ ಕೊರೊನಾ ಸಂತ್ರಸ್ತರಿಗೆ, ಕೊರೊನಾ ವಾರಿಯರ್ಸ್‌ಗಳಿಗೆ ಹಾಗೂ ಕೊರೊನಾ ಸಂತ್ರಸ್ತರ ಪರಿಚಾರಕರಿಗೆ ಉಚಿತ ಆಹಾರ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬ್ಯಾಂಕ್ ಉದ್ಯೋಗಿಗಳೂ ಸಹ ಕೊರೊನಾ ಅಪಾಯದ ಸಂದರ್ಭದಲ್ಲಿಯೂ ತಮ್ಮ ಗ್ರಾಹಕರಿಗೆ ಸೇವೆ ನೀಡುವುದರ ಜೊತೆಗೆ ಸಾಮಾಜಿಕ ಕೈಂಕರ್ಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆನರಾ ಬ್ಯಾಂಕಿನ ಕ್ಷೇತ್ರೀಯ ಕಾರ್ಯಾಲಯದ ವಿಭಾಗೀಯ ಪ್ರಬಂಧಕರಾದ ಜಿ.ಆರ್.ನಾಗರತ್ನ ಮಾತನಾಡಿ, ಕೆನರಾ ಬ್ಯಾಂಕ್ ಕೊರೊನಾ ಸಂತ್ರಸ್ತರಿಗೆ ಮತ್ತು ಆಸ್ಪತ್ರೆಗಳಿಗೆ ಹಲವಾರು ಸಾಲ ಯೋಜನೆಗಳನ್ನೂ ಜಾರಿಗೆ ತಂದಿದೆ. ಇದನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಲು ಮನವಿ ಮಾಡಿದರು.
ನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರಾದ ಶಿವನಗೌಡ ಟಿ ಪಾಟೀಲ್, ಕೆ.ರಾಘವೇಂದ್ರ ನಾಯರಿ, ಕೆನರಾ ಬ್ಯಾಂಕ್ ಹಿರಿಯ ಅಧಿಕಾರಿಗಳಾದ ಎಸ್.ವಿ.ರಾಮಕೃಷ್ಣ ನಾಯ್ಕ್, ಬಿ.ಎ.ಸುರೇಶ್, ಹಂಪಣ್ಣ, ಕೆ.ಶಶಿಕುಮಾರ್, ಕೆ.ವಿಶ್ವನಾಥ ಬಿಲ್ಲವ, ಆರ್.ಆಂಜನೇಯ, ಸಿ.ಪರಶುರಾಮ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.