ದಾವಣಗೆರೆ, ಜೂ. 7 – ಜಿಲ್ಲೆಯಲ್ಲಿ ಪ್ರತಿದಿನ 6 ಸಾವಿರ ಕೊರೊನಾ ಟೆಸ್ಟ್ಗಳನ್ನು ಮಾಡಬೇಕು ಹಾಗೂ ಕೊರೊನಾ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೊರೊನಾ ನಿಯಂತ್ರಣ ಕುರಿತು ಜಿಲ್ಲಾಡಳಿತ ಭವನದಲ್ಲಿ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ರಾಜ್ಯ ಸರ್ಕಾರ ಜಿಲ್ಲೆಗೆ ಪ್ರತಿದಿನ 4,700 ಟೆಸ್ಟ್ಗಳ ಗುರಿ ನೀಡಿದೆ. ಜಿಲ್ಲೆಯಲ್ಲಿ 6 ಸಾವಿರ ಟೆಸ್ಟ್ಗಳ ಗುರಿ ಇರಲಿ ಎಂದ ವರು ಹೇಳಿದರು.
ಕೊರೊನಾ ಸೋಂಕಿನ ಸರಪಳಿ ತುಂಡರಿಸಲು ಟೆಸ್ಟ್ ಸಂಖ್ಯೆ ಹೆಚ್ಚಿಸ ಬೇಕಿದೆ. ಇದಕ್ಕಾಗಿ ಸರ್ಕಾರ 4,736 ಟೆಸ್ಟ್ಗಳ ಗುರಿ ನಿಗದಿಪಡಿಸಿದೆ. ಪ್ರಸಕ್ತ 3,500 ಟೆಸ್ಟ್ ಮಾತ್ರ ಮಾಡಲಾಗುತ್ತಿದೆ, ಟೆಸ್ಟಿಂಗ್ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳಿವೆ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ. 23 ಕ್ಕಿಂತ ಹೆಚ್ಚಾಗಿಯೇ ಇದೆ. ಇದು ಕನಿಷ್ಟ ಶೇ. 5 ಕ್ಕಿಂತಲೂ ಕಡಿಮೆಯಾಗುವುದು ಅತಿ ಅವಶ್ಯಕ ವಾಗಿದೆ ಎಂದು ಸಚಿವರು ಹೇಳಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಟೆಸ್ಟ್ ಮಾಡುವ ಪ್ರಯೋಗ ತಂತ್ರಜ್ಞರಿಗೆ ಪ್ರೋತ್ಸಾಹಧನ ನೀಡುವುದಾಗಿ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಿಗದಿತ ಗುರಿಗಿಂತಲೂ ಹೆಚ್ಚು ಹೆಚ್ಚು ಕೋವಿಡ್ ಟೆಸ್ಟ್ ಕೈಗೊಳ್ಳಲಾಗುವುದು ಎಂದರು.
ದಾವಣಗೆರೆ ತಾಲ್ಲೂಕಿನಲ್ಲಿ 800ಕ್ಕೂ ಹೆಚ್ಚು ಕೊರೊನಾ ಸೋಂಕಿತರು ಈಗಲೂ ಹೋಂ ಐಸೋಲೇಷನ್ನಲ್ಲಿ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಭೈರತಿ, ಸೋಂಕು ತಡೆಗಾಗಿ ಹೋಂ ಐಸೋಲೇಷನ್ ತಡೆಯಬೇಕು ಎಂದು ತಿಳಿಸಿದರು.
ಭತ್ತ ಖರೀದಿ ಕೇಂದ್ರ ತೆರೆದಿದ್ದು ಉಸ್ತುವಾರಿ ಸಚಿವರಿಗೇ ಗೊತ್ತಿಲ್ಲ !
ದಾವಣಗೆರೆ, ಜೂ. 7 – ಭತ್ತ ಖರೀದಿ ಕೇಂದ್ರ ಸದ್ಯದಲ್ಲೇ ತೆರೆಯುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರು ತಿಂಗಳಿನಿಂದ ಹೇಳುತ್ತಲೇ ಬರುತ್ತಿದ್ದಾರೆ. ಆದರೆ, ಖರೀದಿ ಕೇಂದ್ರ ತೆರೆದಿರುವುದಷ್ಟೇ ಅಲ್ಲದೇ, ನೋಂದಣಿ ಪ್ರಕ್ರಿಯೆಯೂ ಮುಗಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ!
ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ಜೊತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಭೈರತಿ, ಖರೀದಿ ಕೇಂದ್ರಕ್ಕೆ ಹಲವು ಬಾರಿ ಪ್ರಯತ್ನ ಆಗಿದೆ. ಕೊರೊನಾ ಬಗ್ಗೆ ನಿಗಾ ವಹಿಸುತ್ತಿರುವುದರಿಂದ ಕೇಂದ್ರ ತೆರೆಯುವುದು ತಡವಾಗಿದೆ ಎಂದರು.
ಪಾಟೀಲ್ ಅವರು ಮಾತನಾಡಿ, ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸಲು ನೋಂದಣಿಗೆ ಸಮಯ ಮುಗಿದಿದೆ. ಸಮಯ ವಿಸ್ತರಿ ಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿ ಮಾತ ನಾಡಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಇಲಾಖೆಯ ಅಧಿಕಾರಿ ಯೊಬ್ಬರು, ಈಗಾಗಲೇ ಜಿಲ್ಲೆಯಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ನೋಂದಣಿ ಅವಧಿ ಮೇ 5ರಂದು ಮುಕ್ತಾಯಗೊಂಡಿದ್ದು, ಆ ವೇಳೆಗೆ ಮೂವರು ಮಾತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದರು.
ಖರೀದಿ ಕೇಂದ್ರ ತೆರೆದಿದ್ದರೆ ಅದು ಸಚಿವರಿಗೆ ಗೊತ್ತಿರಲಿಲ್ಲವೇ? ಸಚಿವರಿಗೇ ಗೊತ್ತಿರದೇ ಇದ್ದರೆ ರೈತರಿಗೆ ಹೇಗೆ ತಿಳಿಯುತ್ತದೆ? ಯಾರಿಗೂ ತಿಳಿಯದ ರೀತಿಯಲ್ಲಿ ಖರೀದಿ ಕೇಂದ್ರ ತೆರೆದಿದ್ದು ಯಾವ ರೀತಿ? ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ.
ಈಗಲೂ ಪ್ರತಿದಿನ 400ರಷ್ಟು ಕೊರೊನಾ ಸೋಂಕಿತರು ಕಂಡು ಬರುತ್ತಿದ್ದಾರೆ, ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಸೋಂಕು ಹಾಗೂ ಸಾವುಗಳ ತಡೆಗೆ ಕ್ರಮ ತೆಗೆದುಕೊಳ್ಳಬೇಕು. ಗ್ರಾಮಾಂತರದಲ್ಲಿ ಹೆಚ್ಚು ಸೋಂಕಿತರು ಕಂಡು ಬರುತ್ತಿದ್ದು, ಆ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಜಿಲ್ಲೆಗೆ ಬರುತ್ತಿರುವ ಲಸಿಕೆಗಳನ್ನು ಹೆಚ್ಚು ಕೇಂದ್ರಗಳ ಮೂಲಕ ವಿತರಿಸಲಾಗುತ್ತಿದೆ. ನಗರದಲ್ಲಿ 9 ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು 9 ಹೆಚ್ಚುವರಿ ಕೇಂದ್ರಗಳ ಮೂಲಕ ನೀಡಲಾಗಿದೆ. ದಾವಣಗೆರೆ ನಗರ ಹಾಗೂ ಗ್ರಾಮಾಂತರಲ್ಲಿ ಒಂದೇ ದಿನ 7,600 ಲಸಿಕೆ ನೀಡಲಾಗಿದೆ. ಈಗ ಬಂದಿರುವ 10 ಸಾವಿರ ಲಸಿಕೆಗಳಲ್ಲಿ ಬಹಳಷ್ಟನ್ನು ಒಂದೇ ದಿನದಲ್ಲಿ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಭೆಗೆ ಮಾಹಿತಿ ನೀಡಿದ ಡಿ.ಹೆಚ್.ಒ. ಡಾ. ನಾಗರಾಜ್, ಜಿಲ್ಲೆಯಲ್ಲಿ 18 ವರ್ಷದೊಳಗಿನ 7 ಲಕ್ಷ ಮಕ್ಕಳಿದ್ದಾರೆ. ಮೂರನೇ ಅಲೆ ಬಂದರೆ, ಇವರಿಗೆ ಶೇ.10ರಷ್ಟು ಮಕ್ಕಳಿಗೆ ಸೋಂಕು ಸಾಧ್ಯತೆ ಇದೆ. ಇವರಿಗೆ 250 ಬೆಡ್ಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಜುಲೈ ಅಂತ್ಯದ ವೇಳೆಗೆ ಮೂರನೇ ಅಲೆ ಸಾಧ್ಯತೆ ಇದ್ದು, ಈ ಬಗ್ಗೆ ಕ್ರಮ ವಹಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ್, ಮಾಡಾಳ್ ವಿರುಪಾಕ್ಷಪ್ಪ, ಪ್ರೊ. ಲಿಂಗಣ್ಣ, ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.