ದಾವಣಗೆರೆ, ಜೂ. 6 – ಕೊರೊನಾ ಕಾಲದಲ್ಲಿ ಪೆಟ್ರೋಲ್ ಬೆಲೆ ಶತಕ ಭಾರಿಸಿದೆ. ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪೆಟ್ರೋಲ್ ಮಾರಾಟ ದರ ಲೀಟರ್ಗೆ 100.17 ರೂ.ಗಳಿಗೆ ತಲುಪಿದೆ. ಡೀಸೆಲ್ ದರ 92.83 ರೂ.ಗಳಿಗೆ ತಲುಪಿದೆ.
ತೈಲ ದರವಷ್ಟೇ ಅಲ್ಲದೇ ಎಣ್ಣೆ, ಮೊಟ್ಟೆ, ಬೇಳೆಯಂತಹ ಆಹಾರ ವಸ್ತುಗಳು, ಕಬ್ಬಿಣ – ಸಿಮೆಂಟ್ ಮುಂತಾದ ಉತ್ಪಾದನಾ ಸರಕು ಗಳು, ಪೇಪರ್, ಜವಳಿ, ಲೋಹ… ಹೀಗೆ ಹತ್ತು ಹಲವು ವಸ್ತುಗಳ ಬೆಲೆಗಳು ಏರುಮುಖವಾಗಿವೆ.
ಕೊರೊನಾದ ಮೊದಲ ಅಲೆಯ ವೇಳೆಗೆ ತೈಲ ಬೆಲೆ ಇಳಿಮುಖವಾಗಿತ್ತು. ಆದರೆ, ಎರಡನೇ ಅಲೆ ವೇಳೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಕಾಣುತ್ತಿದೆ. ಜೊತೆಗೆ ಕೇಂದ್ರ ಸರ್ಕಾರ ಹೇರಿದ ತೆರಿಗೆಯೂ ಸೇರಿಕೊಂಡಿದೆ. ಡೀಸೆಲ್ ಬೆಲೆ ಏರಿಕೆ ಹಲವಾರು ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತಿದೆ.
ಕೊರೊನಾ ನಿರ್ಬಂಧಗಳ ಕಾರಣ ದಿಂದಾಗಿ ಉತ್ಪಾದಕರಿಂದ ಹಿಡಿದು ಗ್ರಾಹಕರೆ ಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೆಡೆ ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಆದಾಯ ಕುಸಿದಿದ್ದರೆ, ಬೆಲೆ ಏರಿಕೆ ಗಾಯದ ಮೇಲೆ ಬರೆ ಹಾಕುತ್ತಿದೆ.
ಡೀಸೆಲ್ ಸಹ ಶತಕದತ್ತ
ನವದೆಹಲಿ, ಜೂ. 7 – ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂ.ಗಳ ಗಡಿ ದಾಟಿದ ಬೆನ್ನಲ್ಲೇ, ಡೀಸೆಲ್ ಬೆಲೆ ಸಹ ಶತಕ ಭಾರಿಸುವತ್ತ ಸಾಗಿದೆ. ರಾಜಸ್ಥಾನದಲ್ಲಿ ಡೀಸೆಲ್ ಬೆಲೆ ಲೀಟರ್ಗೆ 100 ರೂ.ಗಳ ಹತ್ತಿರ ಬಂದಿದೆ.
ಸೋಮವಾರ ಪೆಟ್ರೋಲ್ ಬೆಲೆಯನ್ನು ಲೀಟರ್ಗೆ 28 ಪೈಸೆ ಹಾಗೂ ಡೀಸೆಲ್ ಬೆಲೆಯನ್ನು 27 ಪೈಸೆ ಹೆಚ್ಚಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತಿಳಿಸಿವೆ.
ಮೇ 4ರ ನಂತರ 21 ಬಾರಿ ತೈಲ ಬೆಲೆ ಹೆಚ್ಚಿಸಲಾಗಿದೆ. ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಾಖಲೆ ಹಂತದಲ್ಲಿ ಮುಂದುವರೆದಿದೆ.ಈಗ ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿ ಡೀಸೆಲ್ ಬೆಲೆ ಲೀಟರ್ಗೆ 99.24 ರೂ.ಗಳ ಹಂತಕ್ಕೆ ಬಂದಿದೆ. ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 106.39 ರೂ.ಗಳಾಗಿದೆ. ಪಾಕಿಸ್ತಾನದ ಗಡಿ ಸಮೀಪದಲ್ಲಿರುವ ಈ ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದೇಶದಲ್ಲೇ ಅತಿ ಹೆಚ್ಚಾಗಿದೆ.
ವಿಶ್ವದಾದ್ಯಂತ ಆರ್ಥಿಕ ಪರಿಸ್ಥಿತಿ ಚೇತರಿಕೆಯ ಆಶಾಭಾವನೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಹೆಚ್ಚಳವಾಗುತ್ತಿದೆ. ಕಚ್ಚಾ ತೈಲದ ಬೆಲೆ ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ಬ್ಯಾರಲ್ಗೆ 72 ಡಾಲರ್ಗಳ ಹಂತಕ್ಕೆ ಬಂದಿದೆ.
ಕಚ್ಚಾ ತೈಲ ಕಾರಣದಿಂದ ಪೆಟ್ರೋಲ್ ಬೆಲೆ ಏರಿಕೆ
ಅಹಮದಾಬಾದ್, ಜೂ. 7 – ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದರಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಕಚ್ಚಾ ತೈಲದ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ಗೆ 70 ಡಾಲರ್ಗಳಿಗೂ ಹೆಚ್ಚಾಗಿದೆ. ಇದೇ ತೈಲ ಬೆಲೆ ಏರಿಕೆಗೆ ಕಾರಣ. ಭಾರತಕ್ಕೆ ಅಗತ್ಯವಾಗಿರುವ ತೈಲದ ಶೇ.80 ರಷ್ಟು ವಿದೇಶದಿಂದ ಬರುತ್ತಿದೆ ಎಂದವರು ಹೇಳಿದ್ದಾರೆ.
ಸಿಎಂಐಇ ವರದಿಯ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.97ರಷ್ಟು ಜನರು ಯಾವುದೇ ಆದಾಯ ಏರಿಕೆ ಕಂಡಿಲ್ಲ. ಕಳೆದ ವರ್ಷ ಕೊರೊನಾ ಸಮಯದಲ್ಲಿ ಕುಸಿದ ಆದಾಯ ಇನ್ನೂ ಏರುಮುಖವಾಗಿಲ್ಲ. ಇದು ಜನರ ಖರೀದಿ ಸಾಮರ್ಥ್ಯ ಕುಸಿಯುವಂತೆ ಮಾಡಿದೆ.
ರಿಸರ್ವ್ ಬ್ಯಾಂಕ್ನ ಗ್ರಾಹಕರ ವಿಶ್ವಾಸ ಸೂಚ್ಯಂಕದ ಪ್ರಕಾರ, ದೇಶದಲ್ಲಿ ಜನರ ವಿಶ್ವಾಸ ಕುಸಿಯುತ್ತಿದೆ. ಜಗತ್ತಿನ ಅತಿ ದೊಡ್ಡ ಕೊರೊನಾ ವೈರಸ್ ಅಲೆ ಅಪ್ಪಳಿಸಿದ ನಂತರ, ಮಾರ್ಚ್ ತಿಂಗಳಲ್ಲಿ ಶೇ.53.1ರಷ್ಟಿದ್ದ ಗ್ರಾಹಕರ ವಿಶ್ವಾಸ, ಈಗ ಶೇ.48.5ಕ್ಕೆ ಕುಸಿದಿದೆ.
ಉದ್ಯೋಗ ಹಾಗೂ ಆರ್ಥಿಕ ಪರಿಸ್ಥಿತಿಯ ಬಗ್ಗೆ ಜನರಿಗೆ ಕಳವಳ ಇದೆ. ಹೀಗಾಗಿ ದಿನ ಬಳಕೆ ಹೊರತಾದ ವಸ್ತುಗಳ ಬೇಡಿಕೆ ಈ ಹಿಂದೆ ಯೇ ಕಡಿಮೆಯಾಗಿತ್ತು. ಈಗ ದಿನಬಳಕೆ ವಸ್ತುಗಳ ಖರೀದಿಗೂ ಜನ ಹಿಂದೆ ಮುಂದೆ ನೋಡುವಂತಾಗಿದೆ ಎಂದು ಆರ್.ಬಿ.ಐ. ವರದಿ ತಿಳಿಸಿದೆ.
ಹಣದುಬ್ಬರದ ಕಾರಣದಿಂದಾಗಿ ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ಕಡಿಮೆ ಮಾಡಿಲ್ಲ. ಇದರಿಂದಾಗಿ ಉತ್ಪಾದನಾ ವಲಯ ಸಾಲಕ್ಕೆ ಹೆಚ್ಚಿನ ಬಡ್ಡಿ ತೆರಬೇಕಿದೆ. ಉತ್ಪನ್ನಗಳಿಗೆ ಬೇಡಿಕೆಯೂ ಕಡಿಮೆಯಾಗಿರುವುದು, ಬಡ್ಡಿ ದರ ಹೆಚ್ಚಾಗಿರುವುದು ಮತ್ತು ಮುಂದಿನ ದಿನಗಳ ಅನಿಶ್ಚಿತತೆ ಉತ್ಪಾದನಾ ವಲಯವನ್ನು ಚಿಂತೆಗೆ ದೂಡಿದೆ.
ಗ್ರಾಹಕರಿಂದ ಹಿಡಿದು ಉತ್ಪಾದಕರವರೆಗೆ ಸಂಕಷ್ಟ ಎದುರಿಸುತ್ತಿರುವ ದಿನಗಳಿಂದ ಆರ್ಥಿಕತೆ ಮಂದವಾಗಿದೆ. ಇದೆಲ್ಲದರ ನಡುವೆ ಜನರು, ಅಚ್ಛೇ ದಿನ್ ಬದಲು ಸಾಮಾನ್ಯ ದಿನ ಕಂಡರೂ ಸಾಕು ಎಂದು ಪರಿತಪಿಸುವಂತಾಗಿದೆ.