ಕೋವಿಡ್ ಮೂರನೇ ಅಲೆಯ ಬಗ್ಗೆ ಎಚ್ಚರವಾಗಿರೋಣ
ದಾವಣಗೆರೆ, ಜೂ. 7 – ಕೋವಿಡ್-19 ಮೂರನೇ ಅಲೆಯು ಬರುತ್ತಿರುವ ಹಿನ್ನೆಲೆ ಯಲ್ಲಿ ಈ ಸೋಂಕು ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುವುದರಿಂದ ಮಕ್ಕಳ ಬಗೆಗೆ ಹೆಚ್ಚು ಕಾಳಜಿ ಮತ್ತು ಮುಂಜಾ ಗ್ರತೆ ವಹಿಸಬೇಕು. ಮಕ್ಕಳಿದ್ದರೆ ದೇಶ. ಹಾಗಾಗಿ ದೇಶದ ಭಾವಿ ಪ್ರಜೆಗಳನ್ನು ರಕ್ಷಿಸುವ ಕೆಲಸ ಮಾಡೋಣ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಇಂದು ನಡೆದ ಕೋವಿಡ್-19 ಮೂರನೇ ಅಲೆಯಲ್ಲಿ ಮಕ್ಕಳ ಬಗೆಗೆ ಮುಂಜಾಗ್ರತೆ ಸಂಬಂಧ ನಡೆದ ಅಧಿಕಾರಿಗಳು ಹಾಗೂ ವೈದ್ಯರುಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳಿರುವ ಮನೆಗಳ ಪೋಷಕರುಗಳಿಗೆ ಲಸಿಕೆ ಹಾಕಿಸಿ ಮಕ್ಕಳನ್ನು ಕಾಪಾಡಬೇಕು. ಮಕ್ಕಳಲ್ಲಿ ಸೋಂಕು ಹರಡದಂತೆ ಮುಂಜಾಗ್ರತೆಯ ಕ್ರಮಗಳನ್ನು ಪೋಷಕರೇ ತೆಗೆದುಕೊಳ್ಳಬೇಕು. ಮಕ್ಕಳಲ್ಲಿ ಸೋಂಕು ಕಂಡ ಕೂಡಲೇ ಅವರಿಗೆ ಪ್ರಾಥಮಿಕ ಹಂತದಲ್ಲಿ ಪರೀಕ್ಷೆ ಮಾಡಿಸಿ
ಚಿಕಿತ್ಸೆ ನೀಡಬೇಕು. 5 ವರ್ಷಕ್ಕಿಂತ ಕಡಿಮೆಯಿರುವ ವಯಸ್ಸಿನ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಪೌಷ್ಠಿಕತೆ, ಸಕ್ಕರೆ ಕಾಯಿಲೆ,
ಅಸ್ತಮ, ಕಿಡ್ನಿ ಸಮಸ್ಯೆ, ಹೃದಯ ತೊಂದರೆ ಇರುವ ಮಕ್ಕಳನ್ನು ಪಟ್ಟಿ ಮಾಡಿ ಅವರಿಗೆ ಚಿಕಿತ್ಸೆ ನೀಡಿ ಈ ಮಕ್ಕಳ ಬಗೆಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಅಧಿಕಾರಿಗಳು ಮತ್ತು ಪೋಷಕರಿಗೆ ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಈಗಾಗಲೇ ಅಂಗನವಾಡಿ ಮುಖಾಂತರ ವಿವಿಧ ತೊಂದರೆಗಳಿರುವ ಮಕ್ಕಳ ಪಟ್ಟಿ ಮಾಡಲಾಗಿದೆ. ದಾನಿಗಳು ಮಕ್ಕಳಿಗೆ ಅಗತ್ಯವಾದ ವೆಂಟಿಲೇಟರ್ಗಳನ್ನು (ಪಿಐಸಿಯು) ದಾನ ಮಾಡಿದರೆ ಅನುಕೂಲವಾಗುತ್ತದೆ. ದಾವಣಗೆರೆ ಜಿಲ್ಲೆಯ ಸುತ್ತ ಮುತ್ತಲಿನ 4-5 ಜಿಲ್ಲೆಗಳ ಜನರು ಜಿಲ್ಲಾಸ್ಪತ್ರೆಗೆ ಬರುವು ದರಿಂದ ಅವರುಗಳು ಕೂಡ ಮಕ್ಕಳ ವೆಂಟಿಲೇಟರ್ಗ ಳನ್ನು ದಾನಮಾಡಲಿ ಎಂದು ಮನವಿ ಮಾಡಿದರು.
ಈಗಾಗಲೇ 3 ನೇ ಅಲೆ ಎದುರಿಸಲು ಅಗತ್ಯವಾದ ಮಾನವ ಸಂಪನ್ಮೂಲಗಳನ್ನು ಸಿದ್ದಪಡಿಸಿಕೊಳ್ಳಲಾಗು ತ್ತಿದೆ. ತಾಲ್ಲೂಕು ಕೇಂದ್ರಗಳಲ್ಲಿ ಅಗತ್ಯ ಸ್ಟಾಫ್ ನರ್ಸ್, ಮಕ್ಕಳ ತಜ್ಞರು, ಮೂಲಸೌಕರ್ಯ, ಅಗತ್ಯ ಔಷಧಿಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ದುರ್ಬಲ ಮಕ್ಕಳ ಪಟ್ಟಿ ತಯಾರು ಮಾಡಿ ಇವರುಗಳಿಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಜಿ.ಪಂ ಸಿಇಒ ಡಾ.ವಿಜಯ ಮಹಾಂತೇಶ್ ದಾನಮ್ಮನವರ್ ಮಾತನಾಡಿ, ವಿವಿಧ ಖಾಯಿಲೆಗಳಿಂದ ಬಳಲುತ್ತಿರುವ ಮಕ್ಕಳನ್ನು ಸರ್ವೇ ಮಾಡಿದ ಪಟ್ಟಿ ನಮ್ಮಲಿದ್ದರೆ ಅಂತಹವರುಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡಿ ಅವರ ಬಗೆಗೆ ಕಾಳಜಿ ವಹಿಸಬಹುದು. ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವ ಮುನ್ನವೇ ತಾಯಂದಿರಿಗೆ ತರಬೇತಿ ನೀಡಿದರೆ ತಾಯಯಂದಿರು ಮಗುವನ್ನು ಸೂಕ್ತ ರೀತಿಯಲ್ಲಿ ಆರೈಕೆ ಮಾಡಬಹುದು ಎಂದು ಸಲಹೆ ನೀಡಿದರು.
ಡಿಹೆಚ್ಒ ಡಾ. ನಾಗರಾಜ್ ಮಾತನಾಡಿ, ಮೂರನೇ ಅಲೆ ಹಿನ್ನೆಲೆಯಲ್ಲಿ ಪರಿಣಿತರು, ತಜ್ಞ ವೈದ್ಯರು, ಮಕ್ಕಳ ತಜ್ಞರು, ವಿವಿಧ ಕಾಲೇಜು, ಮೆಡಿಕಲ್ಗಳ ವೈದ್ಯಾಧಿಕಾರಿಗಳು ಸಭೆ ನಡೆಸುತ್ತಿದ್ದು, ಆರೋಗ್ಯ ಇಲಾಖೆಯಿಂದ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಡಿಮೆ ಸೋಂಕಿರುವ ಮಕ್ಕಳನ್ನು ತಾಲ್ಲೂಕು ಮಟ್ಟದಲ್ಲಿಯೇ ಗುಣಪಡಿಸಲು ಸಾಧ್ಯವಿರುತ್ತದೆ. ಗಂಭೀರವಾದ ಪ್ರಕರಣಗಳಾದರೆ ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಕರೆತರಲು ಸೂಚಿಸಬಹುದಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ನೋಡೆಲ್ ಅಧಿಕಾರಿ ಪ್ರಮೋದ್ ನಾಯ್ಕ್, ವೈದ್ಯಾಧಿಕಾರಿಗಳಾದ ಡಾ. ಕಾಳಪ್ಪ, ಡಾ.ಪ್ರಸಾದ್, ಡಾ.ರಮೇಶ್, ಡಾ. ಮೋಹನ್ ಮರುಳಯ್ಯ, ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್, ಆರ್ಸಿಹೆಚ್ ಡಾ.ಮೀನಾಕ್ಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್ಕುಮಾರ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.