ಅವಕಾಶದ ಸಮಯದಲ್ಲಿ ನಿಯಮಗಳು ಕಣ್ಮರೆ
ದಾವಣಗೆರೆ, ಜೂ.7- ಅಗತ್ಯ ವಸ್ತು ಗಳ ಖರೀದಿಗೆ ನೀಡಿರುವ ಅವಕಾಶದ ಸಮಯದಲ್ಲಿ ಹೆಚ್ಚಾಗಿ ಕೊರೊನಾ ಮುಂಜಾಗ್ರತಾ ನಿಯಮಗಳನ್ನು ಪಾಲಿಸದೇ, ಉಲ್ಲಂಘಿಸುವುದು ನಗರದಲ್ಲಿ ಕಂಡುಬರುತ್ತಿದೆ. ಇದಕ್ಕೆ ಇಂದು ಬೆಳಿಗ್ಗೆ ಆಗುತ್ತಿದ್ದಂತೆ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದೇ ಸಾಕ್ಷಿಯಾಗಿತ್ತು.
ಕೊರೊನಾ ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತ 14ರವರೆಗೆ ಕಂಪ್ಲೀಟ್ ಲಾಕ್‍ಡೌನ್ ಜಾರಿಗೆ ತಂದಿದ್ದು, ಅಗತ್ಯ ವಸ್ತುಗಳ ಖರೀದಿಗೆ ಇಂದು, 9 ಹಾಗೂ 11ರಂದು ಬೆಳಗ್ಗೆ 6 ರಿಂದ 12ರವರೆಗೆ ಮಾತ್ರ ಕಾಲಾವಕಾಶ ನೀಡಿದೆ. ಈ ಸಮಯದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿನ ದಿನಸಿ ಅಂಗಡಿಗಳು, ತರ ಕಾರಿ, ಸೊಪ್ಪು, ಚಿಕನ್, ಮಟನ್, ಮೀನು, ಮೊಟ್ಟೆ ಸೇರಿದಂತೆ, ಅಗತ್ಯ ವಸ್ತು ಗಳನ್ನು ಖರೀದಿಸಲು ನಾ ಮುಂದು, ತಾ ಮುಂದು ಎನ್ನುವಂತೆ ನಿಂತಿದ್ದರು. ದಿನಸಿ ಅಂಗಡಿಗಳು ಸೇರಿದಂತೆ ಸೂಪರ್ ಮಾರ್ಕೆಟ್, ಪ್ರಾವಿಜನ್ ಸ್ಟೋರ್‍ಗಳ ಮುಂದೆ ಜನರು ಗುಂಪು ಗುಂಪಾಗಿ ನಿಂತಿದ್ದರು.
ಇನ್ನು ಅಂಗಡಿಯವರೂ ಸಹ ತಮ್ಮ ವ್ಯಾಪಾರ ಕೇಂದ್ರಗಳ ಮುಂದೆ ನಿಂತಿದ್ದ ಗ್ರಾಹಕರಿಗೆ ಮಾಸ್ಕ್ ಹಾಕಿಕೊಳ್ಳುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳದೇ ಕೊರೊನಾ ರೋಗದ ಭಯವೇ ಇಲ್ಲದೇ ತಮ್ಮ ಪಾಡಿಗೆ ತಾವು ವ್ಯಾಪಾರ ಮಾಡುವಲ್ಲಿ ನಿರತರಾಗಿದ್ದರು. ಯಾವುದೇ ಕಡೆಗಳಲ್ಲೂ ಸಾಮಾಜಿಕ ಅಂತರ, ಸೋಂಕು ನಿವಾರಕ ದ್ರಾವಣ ಕಂಡು ಬರಲಿಲ್ಲ.
ನಗರಾದ್ಯಂತ ವಾಹನಗಳ ಓಡಾಟ ಜೋರಾಗಿಯೇ ಇತ್ತು. ಕಾರುಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳ ಸಂಚಾರ ಯಾವುದೇ ಅಡೆತಡೆ ಇಲ್ಲದೇ ಸಾಗಿತ್ತು. ಅಂತೆಯೇ ಅಗತ್ಯ ವಸ್ತುಗಳ ಖರೀದಿಗೆ ಜನರು ಕೆ.ಆರ್. ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದರು. ಇದಲ್ಲದೇ ಜಿಲ್ಲಾಡಳಿತ ಜನಸಂದಣಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ ಮಾಡಿ ಸ್ಪಷ್ಟವಾಗಿ ಹೇಳಿಕೆ ನೀಡಿದ್ದರೂ ಸಹ ಜನರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವಿಲ್ಲದೆ ವ್ಯಾಪಾರ ವಹಿವಾಟು ನಡೆಸಿದರು.
ಕೊರೊನಾ ಸೋಂಕಿನ ಕೊಂಡಿ ಕಳಚಲು ಲಾಕ್ ಡೌನ್ ಅಸ್ತ್ರವಾಗಿದ್ದು, ಕೊರೊನಾದಿಂದ ಪಾರಾಗಲು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಎಷ್ಟೇ ಜಾಗೃತಿ ಮೂಡಿಸಿದರೂ, ಕೈ ಮುಗಿದು ಮನವಿ ಮಾಡಿದರೂ, ದಂಡ ವಿಧಿಸಿದರೂ ಸಹ ಜನರ ಮನಸ್ಸು ಇನ್ನೂ ಕರಗಿಲ್ಲ.
ಲಾಕ್‍ಡೌನ್ ಇದ್ದರೂ ಸಹ ಕೊರೊನಾ ಸೋಂಕಿತರ ಸಂಖ್ಯೆ ಮಾತ್ರ ದಿನೇ ದಿನೇ ಏರಿಳಿತವನ್ನು ಕಾಣುತ್ತಿದೆ. ಇದಕ್ಕೆಲ್ಲಾ ಮುಂಜಾಗ್ರತೆ ಪಾಲಿಸದಿರುವುದೇ ಕಾರಣ. ಅವಕಾಶದ ಸಮಯದಲ್ಲಿ ಪ್ರತಿಯೊಂದು ಅಗತ್ಯ ವಸ್ತುಗಳ ಅಂಗಡಿಗಳ ಮುಂದೆ ಜನಜಂಗುಳಿ, ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೇ ಖರೀದಿಗೆ ಮುಗಿಬೀಳುವುದು ಸಾಮಾನ್ಯವಾಗಿದೆ. ಜನರ ಓಡಾಟ ತಪ್ಪಿಲ್ಲ. ಲಾಕ್‍ಡೌನ್ ಸಮಯದಲ್ಲೂ ಏನಾದರೂ ಕುಂಟು ನೆಪ ಹೇಳಿ ರಸ್ತೆಗಿಳಿಯಲಾಗುತ್ತಿದೆ. ಇದು ಅಪಾಯಕಾರಿ ಎಂಬುದನ್ನು ಅರಿತು ಸ್ವಯಂ ಪ್ರೇರಿತರಾಗಿ ಜಾಗೃತಗೊಳ್ಳಬೇಕಿದೆ.