ಬಾಕಿ ವೇತನ ಪಾವತಿಸಲು ಒತ್ತಾಯ

ಹರಿಹರದಲ್ಲಿ ಬಿಸಿಯೂಟ ತಯಾರಕರ ಪ್ರತಿಭಟನೆ

ಹರಿಹರ, ಆ.3- ಬಿಸಿಯೂಟ ತಯಾರಿಕರಿಗೆ ಕೂಡಲೇ ಜೂನ್ ಮತ್ತು ಜುಲೈ ತಿಂಗಳ ವೇತನವನ್ನು ನೀಡುವುದರ ಜೊತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಎಐಟಿಯುಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್ ವತಿಯಿಂದ ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ಅವರಿಗೆ ಮನವಿ ಅರ್ಪಿಸಿದರು.

ಈ ವೇಳೆ ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಆವರಗೆರೆ ಚಂದ್ರು ಮಾತನಾಡಿ, ರಾಜ್ಯದಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಯಡಿಯಲ್ಲಿ ಅನುದಾನಿತ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಬಿಸಿಯೂಟ ತಯಾರಕರಾಗಿ ಕೆಲಸ ನಿರ್ವಹಿಸು ತ್ತಿರುವ ಅಡುಗೆಯವರಿಗೆ ಸರ್ಕಾರ ಮುಖ್ಯ ಅಡುಗೆಯವರಿಗೆ 2700 ಮತ್ತು ಸಹಾಯಕ ಅಡುಗೆಯವರಿಗೆ 2600 ರೂಪಾಯಿ ನೀಡಲಾಗುತ್ತಿದೆ.

ಬೆಲೆ ಏರಿಕೆಯಿಂದಾಗಿ ಜೀವನ ನಿರ್ವಹಣೆ ಮಾಡುವುದು ತುಂಬಾ ಕಷ್ಟವಾಗಿದೆ. ಅವರುಗಳ ವೇತನ ಹೆಚ್ಚಿಸುವ ಮೂಲಕ ಕಳೆದ ಜೂನ್ ಮತ್ತು ಜುಲೈ ತಿಂಗಳ ಬಾಕಿ ವೇತನವನ್ನು ನೀಡುವಂತೆ ಮನವಿ ಮಾಡಿದರು.

ಉತ್ತರ ಪ್ರದೇಶದ ಅಲಹಾಬಾದ್‌ ಹೈಕೋರ್ಟ್ ಕಳೆದ ವರ್ಷ ಆದೇಶಿಸಿರುವ ತೀರ್ಪಿನಂತೆ ಇಲ್ಲಿಯೂ ಕನಿಷ್ಠ ವೇತನ ನೀಡಬೇಕು. ಕೊರೊನಾ ಪರಿಹಾರವಾಗಿ 5000 ಸಾವಿರ ರೂ.  ಲಾಕ್‌ಡೌನ್‌ ಪರಿಹಾರ ನೀಡಬೇಕು. 60 ವರ್ಷ ಆದವರನ್ನೂ ಮುಂದುವರೆಯಲು ಅವಕಾಶ ನೀಡಬೇಕು. 

ಮೇಲ್ವಿಚಾರಣೆಯನ್ನು ಎಸ್‌ಡಿಎಂಸಿ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ವಹಿಸದೇ ಶಿಕ್ಷಣ ಇಲಾಖೆಯ ಅಡಿಯಲ್ಲಿ ಆಗುವಂತೆ ನಿಯಮ ರೂಪಿಸಬೇಕು. ಮತ್ತು ಕೆಲಸವನ್ನು ಖಾಯಂಗೊಳಿಸಿ ಶಾಸನಾತ್ಮಕ ಸವಲತ್ತುಗಳನ್ನು ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಯನ್ನು ಪೂರೈಸಲು ಸರ್ಕಾರ ಮುಂದಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರುದ್ರಮ್ಮ ಬೆಳಲಗೆರೆ, ಜ್ಯೋತಿ ಲಕ್ಷ್ಮಿ, ಮಂಜುಳಾ, ಮಂಗಳಾ, ಗುತ್ತೆಮ್ಮ, ರಾಧಮ್ಮ, ಸಾಕಮ್ಮ, ರಮೇಶ್, ರೇಖಾ, ಕೊಟ್ಟಮ್ಮ, ಸರಸ್ವತಿ, ಸುನೀತಾ, ಚೆನ್ನಮ್ಮ, ಗೌರಮ್ಮ, ಸಾಕಮ್ಮ, ಶಾಂತಮ್ಮ, ಜಯಮ್ಮ, ಶಂಷಾದ್‌ ಬಾನು, ಜಯಶ್ರೀ, ಸರೋಜ ಇನ್ನಿತರರಿದ್ದರು.

error: Content is protected !!