ನವದೆಹಲಿ ಜೂ. 7 – ಬರುವ ಜೂನ್ 21ರಿಂದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಉಚಿತವಾಗಿ ಕೊರೊನಾ ಲಸಿಕೆ ಒದಗಿಸಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಇದುವರೆಗೂ ಲಸಿಕೆ ಉತ್ಪಾದಕರಿಂದ ಕೇಂದ್ರ ಸರ್ಕಾರ ಶೇ.50ರಷ್ಟು ಲಸಿಕೆಗಳನ್ನು ಪಡೆಯುತ್ತಿತ್ತು. ಈಗ ರಾಜ್ಯಗಳ ಪಾಲಾದ ಶೇ.25ರಷ್ಟನ್ನು ಕೇಂದ್ರ ಸರ್ಕಾರವೇ ಖರೀದಿಸಿ ರಾಜ್ಯಗಳಿಗೆ ಉಚಿತವಾಗಿ ನೀಡಲು ತೀರ್ಮಾನಿಸಿದೆ.
ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಈ ವಿಷಯ ತಿಳಿಸಿರುವ ಪ್ರಧಾನಿ ಮೋದಿ, ಖಾಸಗಿ ವಲಯದ ಆಸ್ಪತ್ರೆಗಳು ಶೇ.25ರಷ್ಟು ಲಸಿಕೆ ಖರೀದಿಸಬಹುದು. ಆದರೆ, ಪ್ರತಿ ಡೋಸ್ ಲಸಿಕೆಗೆ 150 ರೂ.ಗಳ ಸೇವಾ ಶುಲ್ಕ ಮಾತ್ರ ಪಡೆಯಬೇಕು ಎಂದು ನಿರ್ಬಂಧ ಹೇರಲಾಗಿದೆ.
ಕೇಂದ್ರ ಸರ್ಕಾರ ಇದುವರೆಗೂ 45 ವರ್ಷ ಮೀರಿದವರಿಗೆ ತನ್ನ ಕೋಟಾದಡಿ ಉಚಿತವಾಗಿ ಲಸಿಕೆ ನೀಡುತ್ತಿತ್ತು. ರಾಜ್ಯಗಳ ಕೋಟಾದಲ್ಲಿ 18 ವರ್ಷ ಮೀರಿದವರಿಗೆ ಲಸಿಕೆ ನೀಡಲಾಗುತ್ತಿತ್ತು. ಈಗ 18 ವರ್ಷ ಮೀರಿದ ಎಲ್ಲರೂ ಕೇಂದ್ರ ಸರ್ಕಾರದಿಂದ ಉಚಿತ ಲಸಿಕೆ ಪಡೆಯಲಿದ್ದಾರೆ.
ಅಲ್ಲದೇ, ಖಾಸಗಿ ಆಸ್ಪತ್ರೆಗಳು ನೇರವಾಗಿ ಲಸಿಕಾ ಕಂಪನಿಗಳಿಂದ ಲಸಿಕೆ ಖರೀದಿಸಿ ಜನರಿಗೆ ನೀಡುತ್ತಿವೆ. ಇದಕ್ಕಾಗಿ ಜನರು ಲಸಿಕೆ ದರದ ಜೊತೆಗೆ ಖಾಸಗಿ ಸೇವಾ ಶುಲ್ಕವನ್ನೂ ಪಾವತಿಸಬೇಕಿದೆ.
ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರದ ಲಸಿಕಾ ನೀತಿಯನ್ನು ತರಾಟೆಗೆ ತೆಗೆ ದುಕೊಂಡಿತ್ತು. ರಾಜ್ಯಗಳು ಪ್ರತ್ಯೇಕವಾಗಿ ಲಸಿಕೆ ಖರೀದಿಸಲು ಅವಕಾಶ ಮಾಡಿಕೊಟ್ಟಿ ರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಅದರ ಬೆನ್ನಲ್ಲೇ ಪ್ರಧಾನಿ ಹೊಸ ಲಸಿಕಾ ನೀತಿ ಪ್ರಕಟಿಸಿದ್ದಾರೆ.
ರಾಜ್ಯಗಳಿಗೆ ಲಸಿಕಾ ಕಷ್ಟ ಗೊತ್ತಾಗಿದೆ
ಈ ಹಿಂದೆ ಪ್ರತಿಪಕ್ಷದ ಆಡಳಿತ ಇರುವ ರಾಜ್ಯಗಳು ಲಸಿಕೆಯನ್ನು ವಿಕೇಂದ್ರೀಕರಣಗೊಳಿಸುವಂತೆ ಒತ್ತಾಯಿಸಿದ್ದನ್ನು ಪ್ರಸ್ತಾಪಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಜ್ಯಗಳಿಗೆ ಈಗ ಲಸಿಕೆಯ ಕಷ್ಟ ಗೊತ್ತಾಗಿದೆ ಎಂದಿದ್ದಾರೆ.
ಲಸಿಕೆ ವಿಕೇಂದ್ರೀಕರಣ, ಲಸಿಕೆಯ ವಯೋಮಾನ ಸೇರಿದಂತೆ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗಿತ್ತು. ಮಾಧ್ಯಮದ ಒಂದು ವರ್ಗ ಇದನ್ನು ಅಭಿಯಾನದಂತೆ ನಡೆಸಿತ್ತು ಎಂದು ಪ್ರಧಾನಿ ತಿಳಿಸಿದ್ದಾರೆ.
ಸಾಕಷ್ಟು ಚರ್ಚೆಯ ನಂತರ ಶೇ.25ರಷ್ಟು ಲಸಿಕೆಯನ್ನು ರಾಜ್ಯಗಳಿಗೆ ನೀಡಲು ಮೇ 1ರಿಂದ ತೀರ್ಮಾನಿಸಲಾಯಿತು. ಆದರೆ, ರಾಜ್ಯಗಳಿಗೆ ಇಷ್ಟು ದೊಡ್ಡ ಕಾರ್ಯದ ಕಷ್ಟ ಗೊತ್ತಾಯಿತು. ಎರಡು ವಾರಗಳ ನಂತರ ರಾಜ್ಯಗಳು ಹಿಂದಿನ ವ್ಯವಸ್ಥೆಯೇ ಉತ್ತಮವಾಗಿತ್ತು ಎಂದು ಬಹಿರಂಗವಾಗಿ ಹೇಳಲು ಆರಂಭಿಸಿದವು. ಈ ಬೇಡಿಕೆಯ ಹಿನ್ನೆಲೆಯಲ್ಲಿ, ದೇಶದ ಜನರಿಗೆ ಕಷ್ಟವಾಗಬಾರದು ಎಂದು ಮೇ 1ಕ್ಕೆ ಮುಂಚೆ ಇದ್ದ ವ್ಯವಸ್ಥೆ ವಾಪಸ್ ತರಲಾಗುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.
ದೀಪಾವಳಿವರೆಗೆ ಉಚಿತ ಧಾನ್ಯ
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ದೀಪಾವಳಿವರೆಗೆ ವಿಸ್ತರಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಕೊರೊನಾದ ಈ ಸಂದರ್ಭದಲ್ಲಿ ಸರ್ಕಾರ ಎಲ್ಲ ಬಡವರ ಪರವಾಗಿ ನಿಂತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಇದರಿಂದಾಗಿ ನವೆಂಬರ್ವರೆಗೆ ದೇಶದ 80 ಕೋಟಿ ಜನರು ಪ್ರತಿ ತಿಂಗಳು ಉಚಿತವಾಗಿ ಆಹಾರ ಧಾನ್ಯ ಪಡೆಯಲಿದ್ದಾರೆ.
ಈ ಯೋಜನೆಯ ಅನ್ವಯ ಪ್ರತಿ ವ್ಯಕ್ತಿಗೆ 5 ಕೆಜಿ ಉಚಿತ ಆಹಾರ ಧಾನ್ಯ ನೀಡಲಾಗುತ್ತದೆ. ಇದು ಪ್ರಸಕ್ತ ಪಡಿತರ ಮೂಲಕ ನೀಡಲಾಗುತ್ತಿರುವ ಆಹಾರ ಧಾನ್ಯಕ್ಕೆ ಹೆಚ್ಚುವರಿಯಾಗಿದೆ.
ವೈರಸ್ ವಿರುದ್ಧ ಲಸಿಕೆ ಗುರಾಣಿ ಇದ್ದಂತೆ ಎಂದು ಹೇಳಿರುವ ಪ್ರಧಾನಿ, ಮುಂಬರುವ ದಿನಗಳಲ್ಲಿ ದೇಶದಲ್ಲಿ ಲಸಿಕೆ ಪೂರೈಕೆ ಗಣನೀಯ ವಾಗಿ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.
ಬೇರೆ ದೇಶಗಳ ಕಂಪನಿಗಳಿಂದಲೂ ಲಸಿಕೆ ಪಡೆಯುವ ಪ್ರಕ್ರಿಯೆ ಚುರುಕುಗೊಳಿಸಲಾಗು ತ್ತಿದೆ ಎಂದು ಮೋದಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಕೊರೊನಾದಿಂದ ಮಕ್ಕಳ ಮೇಲೆ ಪರಿಣಾಮವಾಗುವ ಬಗ್ಗೆ ಕೆಲ ಪೋಷಕರು ಕಳವಳ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ ರುವ ಅವರು, ಈ ದಿಸೆಯಲ್ಲಿ ಎರಡು ಲಸಿಕೆಗಳನ್ನು ಮಕ್ಕಳ ಮೇಲೆ ಪ್ರಯೋಗಕ್ಕೆ ಒಳಪಡಿಸಲಾಗುತ್ತಿದೆ ಎಂದಿದ್ದಾರೆ.
ಮೂಗಿನ ಮೂಲಕ ಸ್ಪ್ರೇ ಮಾಡಿ ನೀಡುವ ಲಸಿಕೆಯ ಸಂಶೋಧನೆ ನಡೆಯುತ್ತಿದೆ. ಇದು ಯಶಸ್ವಿಯಾದರೆ, ಭಾರತದ ಲಸಿಕಾ ಅಭಿಯಾನಕ್ಕೆ ಮಹತ್ವದ ಉತ್ತೇಜನ ಸಿಗಲಿದೆ ಎಂದವರು ಹೇಳಿದ್ದಾರೆ.
ಲಸಿಕೆ ವೈರಸ್ ವಿರುದ್ಧ ಗುರಾಣಿ ಎಂದಿರುವ ಮೋದಿ, ದೇಶದಲ್ಲಿ ನಡೆಸಿರುವ ಪ್ರಯತ್ನಗಳ ಕಾರಣದಿಂದಾಗಿ ಮುಂಬರುವ ದಿನಗಳಲ್ಲಿ ಲಸಿಕೆ ಲಭ್ಯತೆ ಗಣನೀಯವಾಗಿ ಹೆಚ್ಚಾಗಲಿದೆ ಎಂದಿದ್ದಾರೆ.
ಭಾರತ ಅತಿ ಕಡಿಮೆ ಸಮಯದಲ್ಲಿ ಎರಡು ಲಸಿಕೆಗಳನ್ನು ಉತ್ಪಾದಿಸುತ್ತಿದೆ. 23 ಕೋಟಿಗೂ ಹೆಚ್ಚು ಜನರು ಈಗಾಗಲೇ ಲಸಿಕೆ ಪಡೆದಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಕೊರೊನಾ ಮಹಾಮಾರಿ ಎದುರಿಸಲು ಸಮರೋಪಾದಿಯಲ್ಲಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಹಲವಾರು ಹಂತಗಳಲ್ಲಿ ಕೊರೊನಾ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ಅಗತ್ಯ ಔಷಧಿಗಳ ಉತ್ಪಾದನೆ ಹೆಚ್ಚಿಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ.