ಆ.15ರ ಒಳಗೆ ಆಕ್ಸಿಜನ್ ಘಟಕಗಳಿಗೆ ಚಾಲನೆ

ದಾವಣಗೆರೆ, ಆ 2 – ಬರುವ ಆಗಸ್ಟ್ 15ರ ಒಳಗೆ ಜಿಲ್ಲಾದ್ಯಂತದ ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಚಾಲನೆಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಚಿಗಟೇರಿ ಆಸ್ಪತ್ರೆಯಲ್ಲಿ ಪ್ರತಿ ನಿಮಿಷಕ್ಕೆ 3,000 ಲೀಟರ್ ಆಕ್ಸಿಜನ್ ಉತ್ಪಾದಿಸುವ ಒಟ್ಟು ಮೂರು ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಇದರ ಜೊತೆಗೆ ಮಕ್ಕಳ ಐ.ಸಿ.ಯು. ಘಟಕವನ್ನೂ ಸಿದ್ಧ ಪಡಿಸಲಾಗುತ್ತಿದೆ. ಇವೆರಡೂ ಆಗಸ್ಟ್ 15ರ ಒಳಗೆ ಸಿದ್ಧವಾಗಲಿವೆ ಎಂದರು.

ನಿಮಿಷಕ್ಕೆ 2,000 ಲೀಟರ್ ಆಕ್ಸಿಜನ್ ಉತ್ಪಾದಿಸುವ ಎರಡು ಘಟಕಗಳನ್ನು ಪಿಎಂ ಕೇರ್ಸ್ ನಿಧಿ ಯಿಂದ ಒದಗಿಸಲಾಗಿದೆ. ಇನ್ನೊಂದನ್ನು ಪೆಟ್ರೋನೆಟ್ ಕಂಪನಿ ಪೂರೈಸಿದೆ. ಇದರ ಜೊತೆಗೆ ಇಎಸ್‌ಐ ಆಸ್ಪತ್ರೆ ಯಲ್ಲಿ 500 ಲೀಟರ್ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಕೊರೊನಾ ಮೂರನೇ ಅಲೆ ಎದುರಿಸಲು ಜಿಲ್ಲಾದ್ಯಂತ ಅಗತ್ಯ ಮಾನವ ಸಂಪನ್ಮೂಲ, ವೈದ್ಯಕೀಯ ಉಪಕರಣ ಹಾಗೂ ಸೌಲಭ್ಯಗಳನ್ನು ಉನ್ನತೀಕರಣ ಮಾಡ ಲಾಗುತ್ತಿದೆ. ಆಕ್ಸಿಜನ್ ಘಟಕಗಳಿಗೆ ಬೇಕಾದ ಜನರೇಟರ್, ಟ್ರಾನ್ಸ್‌ಫಾರ್ಮರ್ ಮತ್ತಿತರೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

ಸಿ.ಜಿ. ಆಸ್ಪತ್ರೆಯಲ್ಲಿರುವ 6,000 ಲೀಟರ್ ಆಕ್ಸಿಜನ್ ಟ್ಯಾಂಕ್‌ನಿಂದ ಸಿಲಿಂಡರ್ ಬಳಸಿ ಆಕ್ಸಿಜನ್ ಪೂರೈಸಲಾಗುತ್ತಿತ್ತು. ಮಂಗಳವಾರದಿಂದ ನೇರವಾಗಿ ಆಕ್ಸಿಜನ್ ಪೂರೈಸಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ ಆಕ್ಸಿಜನ್ ಉಳಿತಾಯವಾಗಲಿದೆ ಎಂದರು.

 ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್, ಸಿ.ಜಿ. ಆಸ್ಪತ್ರೆ ಆರ್‌ಎಂಒ ಡಾ. ಮಂಜುನಾಥ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!