ಹರಪನಹಳ್ಳಿ : ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸದ ಸಿದ್ದೇಶ್ವರ ವ್ಯಾಕುಲತೆ
ಹರಪನಹಳ್ಳಿ, ಜೂ.6- ನಾಗರಿಕತೆ ಬೆಳೆದಂತೆ ಅರಣ್ಯ ನಾಶದಿಂದಾಗಿ ಆಮ್ಲಜನಕದ ಕೊರತೆಯುಂಟಾಗಿ, ಕೃತಕ ಆಕ್ಸಿಜನ್ ಮೊರೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಹಿಂಭಾಗದಲ್ಲಿ ಜಿ. ಮಲ್ಲಿಕಾರ್ಜನಪ್ಪ, ಶ್ರೀಮತಿ ಹಾಲಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿದ ನಂತರ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಟ್ಟು ಅವರು ಮಾತನಾಡಿದರು.
ಭೂಮಿಯಲ್ಲಿ ಕೆಲ ಸೂಕ್ಷ್ಮ ಜೀವಿಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಜೀವಕೋಶಗಳಿಗೆ ಸತತವಾಗಿ ಆಮ್ಲಜನಕದ ಸರಬರಾಜು ಇಲ್ಲದಿದ್ದರೆ ಅವುಗಳ ಕೆಲಸ ನಿಂತುಹೋಗುತ್ತದೆ. ಈ ವರ್ಷ ಹೆಚ್ಚು ಹೆಚ್ಚು ಮರಗಿಡಗಳನ್ನು ಬೆಳೆಸಿ ಮಾಲಿನ್ಯದ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಿ ನಮ್ಮ ಸುತ್ತಲಿನ ಪರಿಸರವನ್ನು ಪುನಶ್ಚೇತನಗೊಳಿಸಬೇಕಾಗಿದೆ ಎಂದರು.
ಶಾಸಕ ಜಿ. ಕರುಣಾಕರ ರೆಡ್ಡಿ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಇಂದು ಗಿಡಮರಗಳು ನಾಶವಾಗುತ್ತಿದ್ದು, ರೈತರು ಸೇರಿದಂತೆ ಎಲ್ಲಾ ವರ್ಗದ ಜನರು ಗಿಡಗಳನ್ನು ನೆಟ್ಟು ಲಾಲನೆ ಪಾಲನೆ ಮಾಡಬೇಕಾದ ಅಗತ್ಯತೆ ಇದೆ. ಮನೆ ಮುಂದೆ ಜಾಗ ಇರುವವರು ಕಡ್ಡಾಯವಾಗಿ ಗಿಡಮರಗಳನ್ನು ಬೆಳೆಸಬೇಕು. ಜಾಗವಿಲ್ಲದವರು ಆಕ್ಸಿಜನ್ ಉತ್ಪಾದಿಸುವಂತಹ ಒಳಾಂಗಣ ಸಸ್ಯಗಳನ್ನು ಬೆಳೆಸಿ, ಆಮ್ಲಜನಕವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಲಯ ಅರಣ್ಯಾಧಿಕಾರಿ ಡಿ. ಭರತ್ ಮಾತನಾಡಿ, ಪ್ರತಿಯೊಬ್ಬರು ಒಂದು ಗಿಡ ನೆಟ್ಟು ಸಾಕಿದರೆ ಪರಿಸರ ರಕ್ಷಣೆ ಮಾಡಿದಂತಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟಿ, ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ, ಜಿಲ್ಲಾ ಬಿಜೆಪಿ ಎಸ್.ಟಿ. ಘಟಕದ ಕಾರ್ಯದರ್ಶಿ ಆರ್. ಲೋಕೇಶ್, ತಾಲ್ಲೂಕು ಪಂಚಾಯ್ತಿ ಸದಸ್ಯ ಟಿ. ನಾಗರಾಜಪ್ಪ, ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ, ತಹಶೀಲ್ದಾರ್ ನಂದೀಶ, ವೈದ್ಯಾಧಿಕಾರಿ ಪಿ.ಕೆ. ವೆಂಕಟೇಶ್, ಆಸ್ಪತ್ರೆ ಮುಖ್ಯ ವೈದ್ಯ ಡಾ. ಶಿವಕುಮಾರ್, ಸಿಪಿಐ ನಾಗರಾಜ ಎಂ. ಕಮ್ಮಾರ, ಪಿಎಸ್‍ಐ ಪ್ರಕಾಶ್, ಪುರಸಭಾ ಮುಖ್ಯಾಧಿಕಾರಿ ನಾಗರಾಜನಾಯ್ಕ್, ಮುಖಂಡರಾದ ಆರುಂಡಿ ನಾಗರಾಜ, ರಾಘವೇಂದ್ರಶೆಟ್ಟಿ, ಎಂ. ಸಂತೋಷ, ಅರಣ್ಯ ಇಲಾಖೆಯ ರಾಥೋಡ್, ಯು.ಪಿ. ನಾಗರಾಜ, ಎಂ. ಸಂತೋಷ್ ಇನ್ನಿತರರಿದ್ದರು.