ನಗರದಲ್ಲಿ 2ನೇ ಡೋಸ್ ಲಸಿಕೆ ಪಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಶುಕ್ರವಾರ ದಾವಣಗೆರೆಯಲ್ಲಿ ಏರ್ಪಡಾಗಿದ್ದ, ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು ಕೊಡುಗೆ ನೀಡಿರುವ ಉಚಿತ ಕೋವಿಡ್ ಲಸಿಕೆ ವಿತರಣಾ ಅಭಿಯಾನವನ್ನು 2ನೇ ಡೋಸ್ ಲಸಿಕೆ ಪಡೆಯುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿದರು.
ಎಸ್ಸೆಸ್ ಕೊಡುಗೆ ನೀಡಿದ ಲಸಿಕಾ ಶಿಬಿರದ ಉದ್ಘಾಟನೆಯಲ್ಲಿ ಡಿಕೆಶಿ ಟೀಕೆ
ದಾವಣಗೆರೆ, ಜೂ.4- ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದನ್ನೆಲ್ಲಾ ಕೇಳಿದರೂ ಲಸಿಕೆ ನೀಡುವ ವಿಚಾರದಲ್ಲಿ ಜನರನ್ನು ಪರದಾಡುವಂತೆ ಮಾಡಲಾಯಿತು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದರು.
ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಮನೆತನದಿಂದ ಕೊಡುಗೆ ನೀಡಿರುವ ಉಚಿತ ಕೋವಿಡ್ ಲಸಿಕೆ ಶಿಬಿರಕ್ಕೆ ತಾವು 2ನೇ ಹಂತದ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾಭಾರತ 18 ದಿನ ನಡೆಯಿತು, ನಾನು 21 ದಿನದಲ್ಲಿ ಲಸಿಕೆ ತರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಕೊರೊನಾ ಬಂದಾಗ ಚಪ್ಪಾಳೆ ತಟ್ಟಿದೆವು, ದೀಪ ಹಚ್ಚಿದೆವು, ಗಂಟೆ ಬಡಿದೆವು. ಅವರು ಹೇಳಿದ್ದನ್ನೆಲ್ಲಾ ಕೇಳಿದರೂ ಜನರು ಲಸಿಕೆಗಾಗಿ ಪರದಾಡುವಂತಹ ಸ್ಥಿತಿ ಕಂಡರು. ಹೀಗೆ ಸುಳ್ಳು ಮಾತಿನಿಂದ ನಂಬಿಸದೇ ಲಸಿಕೆ ಕೊಟ್ಟು ಜನರ ಪ್ರಾಣ ಉಳಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಲೋಕಸಭೆಯಲ್ಲಿ ಕಾಂಗ್ರೆಸ್ನವರು 30 ರಿಂದ 40 ಜನರಿದ್ದು, ಬಿಜೆಪಿಯವರು 400 ಜನರು ಗೆದ್ದಿದ್ದಾರೆ. ಇಡೀ ದೇಶಕ್ಕೆ ಪ್ರಧಾನಿ ಮೋದಿ ಅವರು ಒಂದು ಶಕ್ತಿ ಕೊಡುತ್ತಾರೆ ಎಂದು ನಂಬಿದ್ದೆವು. ಅದನ್ನು ಉಳಿಸಿಕೊಳ್ಳಲಿಲ್ಲ. ಪ್ರದಾನಿ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಷ್ಟೇ ಏಕೆ ಯಡಿಯೂರಪ್ಪ ಅವರ ಮಂತ್ರಿಗಳ ಮಾತುಗಳನ್ನು ಕೇಳಿದೆವು. ಮುಖ್ಯಮಂತ್ರಿಗಳು 18 ರಿಂದ 44 ವರ್ಷ ವಯಸ್ಸಿನವರೆಗೆ ಲಸಿಕೆ ಕೊಡುತ್ತೇವೆ ಎಂದು ಹೇಳಿದರು. ಆದರೆ, ಅದನ್ನು ಪಡೆಯಲು ಆನ್ಲೈನ್ ನೋಂದಣಿ ಮಾಡುವುದನ್ನು ನಿಲ್ಲಿಸಲಾಗಿದೆ. ಹಾಗಾದರೆ ಈ ಸರ್ಕಾರಗಳಲ್ಲಿ ಲಸಿಕೆ ಇಲ್ಲವಾಗಿದೆ ಎಂದು ಡಿಕೆಶಿ ಗುಡುಗಿದರು.
ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಜನರನ್ನು ಕೊರೊನಾದಿಂದ ತಡೆಯಲು ವ್ಯಾಕ್ಸಿನ್ ನೀಡುವುದು ಮುಖ್ಯವಾಗಿದೆ. ಸರ್ಕಾರದವರು ಇಂದು-ನಾಳೆ ಎಂದು ಹೇಳುತ್ತಿದ್ದರು. ಆದರೆ, ಲಸಿಕೆ ಮಾತ್ರ ಕೊಡಲಿಲ್ಲ. ಆಗ ನಾವು ದಾವಣಗೆರೆಯ ಜನರಿಗೆ ಬೇಕಾಗುವಷ್ಟು ಲಸಿಕೆ ನೀಡಿದರೆ, ಅದರ ಅರ್ಧ ಹಣವನ್ನು ಭರಿಸುವುದಾಗಿ ಹೇಳಿದ್ದೆ. ಅದಕ್ಕೆ ಆಡಳಿತ ಪಕ್ಷದ ಸರ್ಕಾರ ಕಿವಿಕೊಡಲಿಲ್ಲ. ಆದ್ದರಿಂದ ನಾವೇ ಲಸಿಕೆ ತಂದು ಕೊಡಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಕೋವಿಡ್ ಲಸಿಕಾ ಶಿಬಿರದ ಉದ್ಘಾಟನೆಗೂ ಮುನ್ನಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ದುರ್ಗಾಂಬಿಕಾ ದೇವಾಲಯಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ಎಸ್ಸೆಸ್, ಎಸ್ಸೆಸ್ಸೆಂ, ಈಶ್ವರ್ ಖಂಡ್ರೆ ಮತ್ತಿತರರು ಡಿಕೆಶಿ ಜೊತೆಗಿದ್ದರು.
ಎಸ್ಸೆಸ್ ಕಾರ್ಯಕ್ಕೆ ಡಿಕೆಶಿ ಮೆಚ್ಚುಗೆ
ದೇಶ ಸೋಂಕಿನಿಂದ ನಲುಗಿ ಹೋಗಿದೆ. ಆದರೆ, ಸರ್ಕಾರ ಲಸಿಕೆ ಹಾಕಲು ಮೀನಾ ಮೇಷ ಎಣಿಸುತ್ತಿದೆ. ಹೀಗಾಗಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕುಟುಂಬದವರು ತಮ್ಮ ಸ್ವಂತ ಖರ್ಚಿನಲ್ಲಿ ಲಸಿಕೆಯನ್ನು ಉಚಿತವಾಗಿ ಕೊಡಿಸಲು ಮುಂದಾಗಿರುವುದು ನಿಜಕ್ಕೂ ಶ್ಲ್ಯಾಘನೀಯ. ಎರಡನೇ ಡೋಸ್ ಬಂದು ಇಲ್ಲಿ ಹಾಕಿಸಿಕೊಂಡಿದ್ದು ನನ್ನ ಭಾಗ್ಯ. ಶಾಮನೂರು ಶಿವಶಂಕರಪ್ಪ ಅವರು ಪಕ್ಷಾತೀತ ಮತ್ತು ಜಾತ್ಯತೀತವಾಗಿ ಜನರಿಗೆ ಕೋವಿಡ್ ಲಸಿಕೆ ಕೊಡುತ್ತಿರುವುದು ಧರ್ಮದ ಕೆಲಸ. ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ಭಾರತಕ್ಕೆ ಶಾಮನೂರು ಶಿವಶಂಕರಪ್ಪ ಅವರ ಚಿಂತನೆಯೊಂದಿಗೆ ಈ ಕೆಲಸ ಮಾಡಬೇಕಿದೆ, ಇದು ಅವರ ಕರ್ತವ್ಯ.
ಎಷ್ಟೋ ದೊಡ್ಡ ಶ್ರೀಮಂತರನ್ನು ನೋಡಿದ್ದೇನೆ. ಆದರೆ, ಶಾಮನೂರು ಶಿವಶಂಕರಪ್ಪ ತೆಗೆದುಕೊಂಡ ನಿರ್ಣಯ ದೇಶಕ್ಕೇ ಮಾದರಿ. ಎಲ್ಲರಿಗೂ ಹೃದಯ ಶ್ರೀಮಂತಿಕೆ ಬರುವುದಿಲ್ಲ. ಬಿಜೆಪಿಯವರಿಗೆ ಮೊದಲು ಲಸಿಕೆ ಕೊಡುತ್ತೇವೆ, ಬೇರೆ ಧರ್ಮದವರಿಗೂ ಕೊಡುವುದು, ಜೀವ ಉಳಿಸುವುದೇ ನನ್ನ ಧರ್ಮ ಎನ್ನುವುದನ್ನು ಶಾಮನೂರು ಶಿವಶಂಕರಪ್ಪ ಸಾರಿದ್ದು, ಮುಂದಿನ ಜನ್ಮದಲ್ಲಿ ಶಾಮನೂರು ಶಿವಶಂಕರಪ್ಪನವರಂತೆ ಹೃದಯ ಶ್ರೀಮಂತಿಕೆ ಇರುವವರು ಹುಟ್ಟಲಿ ಎಂದು ಶಿವಕುಮಾರ್ ಆಶಿಸಿದರು.
ಎಸ್ಸೆಸ್ ಮನುಕುಲ ಉಳಿಸುತ್ತಿದ್ದಾರೆ
ಕೊರೊನಾ ಸೋಂಕಿಗೆ ಔಷಧಿ ಇನ್ನೂ ಬಂದಿಲ್ಲ, ಲಸಿಕೆವೊಂದೇ ಪರಿಹಾರ. ಶಾಮನೂರು ಶಿವಶಂಕರಪ್ಪ ಅವರು ಪಕ್ಷಾತೀತವಾಗಿ ಜನರಿಗೆ ಕೋವಿಡ್ ಲಸಿಕೆ ಯನ್ನು ಉಚಿತವಾಗಿ ಕೊಡುತ್ತಿರುವುದು ನೋಡಿದರೆ ಮನುಕುಲ ಉಳಿಸುತ್ತಿದ್ದಾರೆ. ಅವರ ಸೇವಾ ಮನೋಧರ್ಮಕ್ಕೆ ಇದು ಸಾಕ್ಷಿ. ಭಾರತವೇ ಹೆಮ್ಮ ಪಡುವಂತಾಗಿದೆ.
– ಈಶ್ವರ್ ಖಂಡ್ರೆ, ಕಾರ್ಯಾಧ್ಯಕ್ಷರು, ಕೆಪಿಸಿಸಿ
ಸರ್ಕಾರದಿಂದ ಬಡವರಿಗೆ ಉಚಿತ ಲಸಿಕೆಗೆ ಒತ್ತಾಯ
ಸರ್ಕಾರದಲ್ಲಿನ ಮಂತ್ರಿ, ಶಾಸಕರಿಗೆ ಕೋವಿಡ್ ಲಸಿಕೆ ಸರಳವಾಗಿ ಸಿಗುತ್ತದೆ. ಆದರೆ, ಈ ದೇಶದ ಎಲ್ಲಾ ಬಡವರಿಗೆ ಉಚಿತ ವಾಗಿ ಕೋವಿಡ್ ಲಸಿಕೆಯನ್ನು ಸರ್ಕಾರ ಹಾಕ ಬೇಕು ಅನ್ನುವುದು ಕಾಂಗ್ರೆಸ್ ಪಕ್ಷದ ಚಿಂತನೆ, ಸಂಕಲ್ಪ ಮತ್ತು ಒತ್ತಾಯವಾಗಿದೆ. ಸರ್ಕಾರ ಇದಕ್ಕೆ ಗಮನ ಹರಿಸುತ್ತಿಲ್ಲ. ಹೀಗಾಗಿ, ರಾಜ್ಯ ಪಾಲರನ್ನು ಭೇಟಿ ಮಾಡಿ, ಎಲ್ಲರಿಗೂ ಲಸಿಕೆ ನೀಡಬೇಕು ಎಂದು ಒತ್ತಾಯ ಮಾಡುತ್ತೇವೆ.
– ಡಿ.ಕೆ. ಶಿವಕುಮಾರ್
ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಮಾತನಾಡಿ, ತಮ್ಮ ತಂದೆ ಶಿವಶಂಕರಪ್ಪ ಅವರು ಜನರಿಗೆ ಲಸಿಕೆ ಕೊಡುವುದಾಗಿ ಘೋಷಣೆ ಮಾಡಿದ್ದರು. ನಂತರ ತಾನು ವ್ಯಾಕ್ಸಿನ್ ಕಂಪನಿಗಳೊಂದಿಗೆ ಮಾತುಕತೆ ನಡೆಸಿ, ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸಹಕಾರದಿಂದ ಮೊದಲ ಹಂತದಲ್ಲಿ 10 ಸಾವಿರ ಡೋಸ್ ಲಸಿಕೆ ನೀಡುತ್ತಿದ್ದು, ಇದೇ ದಿನಾಂಕ ಜೂನ್ 10 ರಂದು ಮತ್ತೆ 50 ಸಾವಿರ ಡೋಸ್ ಲಸಿಕೆ ಬರಲಿದೆ. ಇಂದು ಸಾಂಕೇತಿಕವಾಗಿ ಲಸಿಕೆ ಶಿಬಿರಕ್ಕೆ ಚಾಲನೆ ನೀಡಿದ್ದು, ನಾಳೆಯಿಂದ ನಗರದ ಐದು ಕಡೆಗಳಲ್ಲಿ ಉಚಿತ ಲಸಿಕೆಯನ್ನು ವಾರ್ಡುವಾರು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಲೀಂ ಅಹ್ಮದ್, ವಿಧಾನ ಪರಿಷತ್ ಸದಸ್ಯರಾದ ಯು.ಬಿ. ವೆಂಕಟೇಶ್, ಕೆ.ಸಿ. ಕೊಂಡಯ್ಯ, ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಮುಖಂಡರಾದ ಸಚಿನ್ ಮಿಗಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಪ್ರಸಾದ ನಿಲಯದಲ್ಲಿ ಇಂದು ಮಧ್ಯಾಹ್ನ ಈ ಕಾರ್ಯಕ್ರಮ ಏರ್ಪಾಡಾಗಿತ್ತು. ಕೋವಿಡ್ ಲಸಿಕಾ ಶಿಬಿರದ ಉದ್ಘಾಟನೆಗೂ ಮುನ್ನಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ದುರ್ಗಾಂಬಿಕಾ ದೇವಾಲಯಕ್ಕೆ ತೆರಳಿ ದೇವಿಯ ದರ್ಶನ ಪಡೆದರು.