ಜಗಳೂರು, ಜೂ. 6- ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅದರಲ್ಲೂ ಗ್ರಾಮೀಣ ಭಾಗದಲ್ಲಿ ಅತಿ ವೇಗವಾಗಿ ಸೋಂಕು ಹಬ್ಬುತ್ತಿದೆ. ಆದ್ದರಿಂದ ಸಾರ್ವಜನಿಕರು ಜಾಗೃತರಾಗಿ ಇರಬೇಕು ಎಂದು ಜೆ.ಎಮ್.ಎಫ್.ಸಿ ಸಿವಿಲ್ ನ್ಯಾಯಾಧೀಶರಾದ ಜಿ. ತಿಮ್ಮಯ್ಯ ತಿಳಿಸಿದರು.
ತಾಲ್ಲೂಕಿನ ಮೆದಗಿನಕೆರೆ ಹತ್ತಿರವಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ಗೆ ಇಂದು ಭೇಟಿ ಮಾಡಿ, ಕೊರೋನಾ ಸೋಂಕಿತರ ಯೋಗ ಕ್ಷೇಮ ವಿಚಾರಿಸಿದ ನಂತರ ಅವರು ಶಾಲಾ ಆವರಣದಲ್ಲಿ ಸಸಿ ನೆಟ್ಟು ಪತ್ರಕರ್ತರೊಂದಿಗೆ ಮಾತನಾಡಿದರು.
ಅನಾವಶ್ಯಕವಾಗಿ ಯಾರು ರಸ್ತೆಗಿಳಿದು ತಿರುಗಬಾರದು. ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು. ತಮ್ಮ ಕೈಗಳನ್ನು ಸ್ಯಾನಿಟೈಸರ್ ಮತ್ತು ಸಾಬೂನು ಗಳಿಂದ ತೊಳೆದುಕೊಳ್ಳಬೇಕು. ಕೆಮ್ಮು, ಜ್ವರ, ನೆಗಡಿಯಂತಹ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಬೇಕು ಎಂದು ಹೇಳಿದರು.
ಕೋವಿಡ್ ಕೇರ್ ಸೆಂಟರ್ನಲ್ಲಿ ನಿಮಗೆ ಊಟ, ತಿಂಡಿ ಮತ್ತು ಶುದ್ಧ ಕುಡಿಯುವ ನೀರು ಕೊಡಲಾಗುತ್ತಿದೆಯೇ ? ಎಂದು ಕೇಳಿದಾಗ, ಸೋಂಕಿತರು ಸ್ವಾಮಿ ನಮಗೆ ಇಲ್ಲಿ ಎಲ್ಲಾ ಸೌಲಭ್ಯಗಳು ದೊರೆಯುತ್ತಿದ್ದು, ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಸೋಂಕಿತರು ಉತ್ತರಿಸಿದರು.
ಕೋವಿಡ್ ಕೇರ್ ಸೆಂಟರ್ ಸಹಾಯಕ ನೋಡಲ್ ಅಧಿಕಾರಿ ಬಿ.ಮಹೇಶ್ವರಪ್ಪ ಅವರಿಗೆ ಎಲ್ಲರಿ ಗೂ ಸಮಯಕ್ಕೆ ಸರಿಯಾಗಿ ಔಷಧಿ ಮತ್ತು ಮಾತ್ರೆ ಗಳನ್ನು ಕೊಡಿ. ಇಲ್ಲಿನ ಪರಿಸರ ತುಂಬಾ ಚೆನ್ನಾಗಿದೆ. ಬೆಳಿಗ್ಗೆ ಎದ್ದ ತಕ್ಷಣ ವಾಕ್ ಮತ್ತು ಯೋಗ -ಧ್ಯಾನ ಕಡ್ಡಾಯವಾಗಿ ಮಾಡಿಸುವಂತೆ ನಿರ್ದೇಶಿಸಿದರು.
ತಾಲ್ಲೂಕು ಆರೋಗ್ಯಧಿಕಾರಿ ಡಾ. ನಾಗರಾಜ್, ಶಾಲೆಯ ಪ್ರಾಂಶುಪಾಲರಾದ ರೂಪಕಲಾ ಇತರರು ಉಪಸ್ಥಿತರಿದ್ದರು.