ದಾವಣಗೆರೆ, ಜೂ.4- ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಯಥಾ ಸಿಎಂ ತಥಾ ಅಧಿಕಾರಿ ಎಂದು ಮೈಸೂರು ಜಿಲ್ಲಾಧಿಕಾರಿ ಹಾಗು ಆಯುಕ್ತರ ವಿಚಾರವಾಗಿ ರಾಜ್ಯದ ಬಿಜೆಪಿ ಸರ್ಕಾರ ಆಡಳಿತದ ವಿರುದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಇಂದಿಲ್ಲಿ ಎಂಬಿಎ ಕಾಲೇಜಿನ ಹೆಲಿಪ್ಯಾಡ್‍ನಲ್ಲಿ ಆಗಮಿಸಿದ್ದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಅಧಿಕಾರಿಗಳ ವಿಷಯದಲ್ಲಿ ಶಾಸಕರು, ಸಚಿವರು ಏನು ಮಾಡುತ್ತಿದ್ದಾರೆ. ಇದನ್ನು ಗಮನಿಸಿದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲ ಎನ್ನುವುದು ಗೊತ್ತಾಗುತ್ತದೆ ಎಂದು ಟೀಕಿಸಿದರು.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೋ ಮಂತ್ರಿ ಸ್ವಾಮಿಗಳಿಗೆ ಸಿಡಿ ತೋರಿಸಲು ಮಠಕ್ಕೆ ಹೋಗಿದ್ದನಂತೆ. ಆ ಮಠದ ಸ್ವಾಮೀಜಿಗಳು ಮಂತ್ರಿಯನ್ನು ಬೈದು ಕಳುಹಿಸಿದ್ದರು. ಯತ್ನಾಳ್ ಹೇಳಿದ್ದಾರಲ್ಲ ಅದೇ ಸಿಡಿ ವಿಚಾರ ಕಣ್ರೀ ಎಂದು ಶಿವಕುಮಾರ್ ಸಿಡಿ ಬಾಂಬ್ ಹಾಕಿದರು.
ಕೊರೊನಾ ಲಸಿಕೆ ಬಗ್ಗೆ ಮಾತನಾಡಿದ ಅವರು, ಲಸಿಕೆ ಹಂಚಿಕೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ವಿಫಲವಾಗಿವೆ. ಮುಖ್ಯಮಂತ್ರಿಗಳು ಲಸಿಕೆ ಕಾರ್ಯಕ್ರಮ ಉದ್ಘಾಟನೆ ಮಾಡಿದ ನಂತರ ನಮ್ಮ ಕಾರ್ಯಕರ್ತರು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದರೂ ಕೂಡ ಆನ್‍ಲೈನ್ ನೋಂದಣಿ ಇಲ್ಲ. ಇದು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಕೇಂದ್ರ ಸರ್ಕಾರದ ವೈಫಲ್ಯವಾಗಿದೆ. ನಾನು ಸತ್ತರೂ ಚಿಂತೆಯಿಲ್ಲ, ಜನರಿಗೋಸ್ಕರ ಏನು ಮಾಡುವುದಕ್ಕೂ ಸಿದ್ಧ ಎಂದರು.
ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಲಸಿಕೆ ನೀಡುತ್ತಿರುವುದರ ಕುರಿತು ಮಾತನಾಡಿದ ಡಿಕೆಶಿ, ಎಸ್ಸೆಸ್ ಅವರ ಈ ಕಾರ್ಯ ದೇಶದ ರಾಜಕಾರಣಿಗಳಿಗೆ ದೊಡ್ಡ ಸಂದೇಶ. ಜೀವ ಉಳಿಸಿ ಎಂದು ಭಿಕ್ಷೆ ಬೇಡುತ್ತಿದ್ದೇವೆ. 100 ಕೋಟಿ ರೂ. ಇಟ್ಟುಕೊಂಡು ಲಸಿಕೆಗಾಗಿ ಸರ್ಕಾರಕ್ಕೆ ಪರ್ಮಿಷನ್ ಕೇಳಿದ್ದೆವು. ಅವರು ಕೊಡಲಿಲ್ಲ.
ಇದೀಗ 1 ಲಕ್ಷ ಜನಕ್ಕೆ ಉಚಿತವಾಗಿ ಶಾಮನೂರು ಕುಟುಂಬ ಲಸಿಕೆ ನೀಡಲು ಮುಂದಾಗಿದೆ. ಲಸಿಕೆಗಾಗಿ 6 ಕೋಟಿಯನ್ನು ನೀಡಿದ್ದಾರೆ. ಲಸಿಕೆಯನ್ನು ಯಾವುದೇ ಜಾತಿ ಭೇದವಿಲ್ಲದೇ ಎಲ್ಲರಿಗೂ ನೀಡಲಾಗುತ್ತಿದೆ. ನಮ್ಮ ಪಕ್ಷದ ಪರವಾಗಿ, ಸಂಸ್ಥೆ ಪರವಾಗಿ ಚಾಲನೆ ನೀಡ ಲಾಗುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಗುಲಾಬ್ ನಬಿ ಆಜಾದ್‍ರವರು ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ ಎಂದರು.
ಈ ವೇಳೆ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡರಾದ ಈಶ್ವರ್ ಖಂಡ್ರೆ, ಸಲೀಂ ಅಹಮ್ಮದ್, ಪಿ.ಟಿ. ಪರಮೇಶ್ವರ್ ನಾಯ್ಕ, ಕೆ.ಸಿ. ಕೊಂಡಯ್ಯ, ಎಸ್.ರಾಮಪ್ಪ, ಹೆಚ್.ಬಿ. ಮಂಜಪ್ಪ, ಡಿ. ಬಸವರಾಜ್ ಇತರರು ಇದ್ದರು.