ದಾವಣಗೆರೆ, ಜೂ.4- ಕೆನರಾ ಬ್ಯಾಂಕ್ ವತಿಯಿಂದ ಜಿಲ್ಲಾಸ್ಪತ್ರೆಗೆ ಹಿರಿಯ ನಾಗರಿಕರ ಮತ್ತು ವಿಶೇಷ ಚೇತನ ರೋಗಿಗಳ ಅನುಕೂಲ ಕ್ಕಾಗಿ 10 ಗಾಲಿ ಕುರ್ಚಿಗಳನ್ನು ಹಾಗೂ 10 ಆಕ್ಸಿಮೀಟರ್‌ಗಳನ್ನು ಇಂದು ಕೊಡುಗೆಯಾಗಿ ನೀಡಲಾಯಿತು.
ಕೆನರಾ ಬ್ಯಾಂಕಿನ ದಾವಣಗೆರೆಯ ಕ್ಷೇತ್ರೀಯ ಕಾರ್ಯಾಲಯದ ಸಹಾಯಕ ಮಹಾ ಪ್ರಬಂಧಕ ಹೆಚ್.ರಘುರಾಜ ಅವರು ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಘುರಾಜ ಅವರು, ಕೊರೊನಾ ವೈರಸ್ಸನ್ನು ನಿರ್ಮೂಲನೆ ಮಾಡಲು ವೈದ್ಯಕೀಯ ಕ್ಷೇತ್ರ ದಿಂದ ಮಾತ್ರ ಸಾಧ್ಯ. ಆದ್ದರಿಂದ ವೈದ್ಯಕೀಯ ಕ್ಷೇತ್ರವನ್ನು ಉನ್ನತೀಕರಿಸುವುದು ಪ್ರಸ್ತುತ ಸನ್ನಿವೇಶದಲ್ಲಿ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಈ ರೀತಿಯ ಕೊಡುಗೆಗಳನ್ನು ನೀಡುತ್ತಿದೆ. ಜೊತೆಗೆ ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ಘಟಕ ನಿರ್ಮಾಣಕ್ಕಾಗಿ `ಕೆನರಾ ಜೀವನ್ ರೇಖಾ’ ಎನ್ನುವ ಯೋಜನೆಯಲ್ಲಿ 2 ಕೋಟಿಯವರೆಗೆ ಸಾಲ ಸೌಲಭ್ಯ ಲಭ್ಯವಿದೆ.
ಕೊರೊನಾ ಸಂತ್ರಸ್ತರಿಗೆ ಚಿಕಿತ್ಸಾ ವೆಚ್ಚವನ್ನು ಭರಿಸಲು 25000 ರೂ. ದಿಂದ 5 ಲಕ್ಷ ರೂ. ವರೆಗೆ `ಕೆನರಾ ಸುರಕ್ಷಾ’ ಸಾಲ ಯೋಜನೆ, ಹಾಗೆಯೇ ಆಸ್ಪತ್ರೆಗಳ ಗುಣಮಟ್ಟ ಹಾಗೂ ಸೌಲಭ್ಯ ಹೆಚ್ಚಿಸಲು ಆಸ್ಪತ್ರೆಗಳಿಗೆ ವಿಶೇಷ ಸಾಲ ಸೌಲಭ್ಯ `ಕೆನರಾ ಚಿಕಿತ್ಸಾ’ ಯೋಜನೆ ಜಾರಿಗೆ ಬಂದಿದೆ. ಇದರಲ್ಲಿ 50 ಕೋಟಿ ರೂ. ತನಕ ಸಾಲವನ್ನು ಪಡೆಯ ಬಹುದು. ಇದನ್ನು ಆಸ್ಪತ್ರೆಗಳನ್ನು ಕಟ್ಟಿಸಲು, ಬೆಡ್ ಸಾಮರ್ಥ್ಯ ಹೆಚ್ಚಿಸಲು, ಆಮ್ಲಜನಕ ಉತ್ಪಾದನಾ ಫಟಕಗಳನ್ನು ನಿರ್ಮಿಸಲು, ವೆಂಟಿಲೇಟರ್ ಸೌಲಭ್ಯಗಳನ್ನು ಅಳವಡಿಸಿ ಕೊಳ್ಳಲು ಹಾಗೂ ಇನ್ನಿತರೆ ವೈದ್ಯಕೀಯ ಸೌಲಭ್ಯಗಳಿಗಾಗಿ ವಿನಿಯೋಗಿಸಬಹುದು. ಖಾಸಗಿ ಆಸ್ಪತ್ರೆಗಳು ಈ ಸೌಲಭ್ಯಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಅತ್ಯುತ್ಕೃಷ್ಟ ವೈದ್ಯಕೀಯ ಸೇವೆಯನ್ನು ನೀಡುವಂತೆ ಮನವಿ ಮಾಡಿದರು.
ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಸುಶ್ರುತ್ ಡಿ.ಶಾಸ್ತ್ರಿ, ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಮಂಜುನಾಥ ಪಾಟೀಲ್, ಕೆನರಾ ಬ್ಯಾಂಕ್ ವಿಭಾಗೀಯ ಪ್ರಬಂಧಕರಾದ ಜಿ.ಆರ್.ನಾಗರತ್ನ, ಕೆ.ರಾಘವೇಂದ್ರ ನಾಯರಿ, ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳಾದ ವಿನಯ್ ಕುಮಾರ್, ಸುಭಾಷ್, ಶಿವಣ್ಣ, ಆಶಾ ಕಾಂಬ್ಳೆ, ಕೆನರಾ ಬ್ಯಾಂಕ್ ಹಿರಿಯ ಅಧಿಕಾರಿಗಳಾದ ಆರ್.ಶ್ರೀನಿವಾಸ್, ಬಿ.ಎ.ಸುರೇಶ್, ರಾಮಕೃಷ್ಣ ನಾಯ್ಕ್, ಹಂಪಣ್ಣ, ಕೆ.ವಿಶ್ವನಾಥ್ ಬಿಲ್ಲವ, ಎಂ.ಎಂ.ಸಿದ್ದವೀರಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.