ಮಹರ್ಷಿ ವಾಲ್ಮೀಕಿ ತತ್ವಾದರ್ಶಗಳು ಎಲ್ಲರಿಗೂ ಮಾದರಿ

ಜಗಳೂರಿನ ಶಾಸಕ ಎಸ್.ವಿ. ರಾಮಚಂದ್ರ

ಜಗಳೂರು, ನ.12- ಜೀವನದಲ್ಲಿ ಆಸ್ತಿ,  ಅಂತಸ್ತು ಮಾಡುವ ಬದಲು ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಮುಂದೆ ಅವರು  ಕುಟುಂಬಕ್ಕೆ ಆಸರೆಯಾಗಿ ನಿಲ್ಲುತ್ತಾರೆ ಎಂದು ಶಾಸಕ ಎಸ್.ವಿ. ರಾಮಚಂದ್ರ  ಹೇಳಿದರು. 

ತಾಲ್ಲೂಕಿನ ಹೊಸಹಟ್ಟಿ ಗ್ರಾಮದಲ್ಲಿ ಗುರುವಾರ  ವಾಲ್ಮೀಕಿ ಯುವಕರ ಸಂಘದಿಂದ  ಹಮ್ಮಿಕೊಂಡಿದ್ದ  ವಾಲ್ಮೀಕಿ ಜಯಂತ್ಯುತ್ಸವ ಹಾಗೂ ನೂತನ ವಾಲ್ಮೀಕಿ ಮಹರ್ಷಿ ಪುತ್ಥಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಆದಿಯಲ್ಲಿ ಮಹರ್ಷಿ ವಾಲ್ಮೀಕಿ ಒಬ್ಬ ಬೇಟೆಗಾರನಾಗಿದ್ದರೂ ತಾನೂ ಮಾಡುತ್ತಿರುವುದು ಹಿಂಸೆ ಎಂದು ಅರಿತು, ತಪಸ್ಸು ಮಾಡಿದರು. ನಂತರ   ರಾಮಾಯಣ ಮಹಾ ಕಾವ್ಯವನ್ನು ರಚಿಸಿ, ಜಗತ್ತಿಗೇ ಮಹರ್ಷಿ ಎನಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ತಪ್ಪು ದಾರಿಗಳನ್ನು ಬಿಟ್ಟು, ಶಿಕ್ಷಣವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು. 

ಜೀವನದಲ್ಲಿ ಎಷ್ಟೇ ಕಷ್ಟ, ನೋವು ಬಂದರೂ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಕೆಲಸಕ್ಕೆ ಹಾಕುವುದು  ಬೇಡ, ಸರ್ಕಾರ  ಎಲ್ಲಾ ಬಡ ಮಕ್ಕಳಿಗೆ   ಉಚಿತ ಶಿಕ್ಷಣ, ವಸತಿ  ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು  ಎಂದು ತಿಳಿಸಿದರು. 

ವಕೀಲ ಮರೇನಹಳ್ಳಿ ಬಸವರಾಜ್ ಮಾತನಾಡಿ,  ಡಾ. ಬಿ.ಆರ್.  ಅಂಬೇಡ್ಕರ್  ಭಾರತ ಸಂವಿಧಾನವನ್ನು ಬರೆಯದೇ ಹೋಗಿದ್ದರೆ ದಲಿತರು, ಹಿಂದುಳಿದವರು ನೆಮ್ಮದಿಯ ಬದುಕು ರೂಪಿಸಿಕೊಳ್ಳುವುದು ಕನಸಿನ ಮಾತಾಗಿತ್ತು. ತಾವು ನೋವುಂಡರೂ ಎಲ್ಲರಿಗೂ ಸಮಾನತೆಯಿಂದ  ಬದುಕಲು ದಾರಿ ತೋರಿಸಿದ್ದಾರೆ. ಅವರನ್ನು ಮನೆ, ಮನಗಳಲ್ಲೂ ಪೂಜಿಸಬೇಕು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಅಣಬೂರು ಕೊಟ್ರೇಶ್ ಮಾತನಾಡಿ, ಮಹಾನ್ ದಾರ್ಶನಿಕರ ಜಯಂತಿಗಳನ್ನು ಕೇವಲ ಒಂದು ದಿನಕ್ಕೆ ಸೀಮಿತ ಮಾಡಿಕೊಳ್ಳದೇ  ಪ್ರತಿ ದಿನ ಅವರ ಜೀವನದ  ಚರಿತ್ರೆಗಳನ್ನು ಓದಿ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. 

ದೊಣೆಹಳ್ಳಿ ಗ್ರಾ.ಪಂ. ಅಧ್ಯಕ್ಷರಾದ ಜಿ.ಟಿ. ರೋಜಾ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.  ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಎಂ.ಜಿ. ಸಿದ್ಧಲಿಂಗಪ್ಪ, ಗುರುಮೂರ್ತಿ, ರಾಜು, ಜಯ್ಯಣ್ಣ, ವಿಎಸ್‍ಎಸ್‍ಎನ್ ಅಧ್ಯಕ್ಷ  ಬಿಸ್ತುವಳ್ಳಿ ಬಾಬು, ನೌಕರರ ಸಂಘದ  ಮಾಜಿ ಕಾರ್ಯದರ್ಶಿ ಬಿ.ಆರ್. ಚಂದ್ರಪ್ಪ, ಮುಖಂಡರಾದ  ವೀರೇಶ್ ಇನ್ನಿತರರಿದ್ದರು.

error: Content is protected !!