ಬೆಂಗಳೂರು, ಜೂ. 4 – ಕೋವಿಡ್ ಮುನ್ನೆಚ್ಚರಿಕಾ ಕ್ರಮ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಮೇರೆಗೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿರುವ ಸರ್ಕಾರ, ಎಸ್ಎಸ್ಎ ಲ್ಸಿ ಪರೀಕ್ಷೆ ನಡೆಸಲು ನಿರ್ಧರಿಸಿದ್ದರೂ, ಯಾರನ್ನೂ ಅನುತ್ತೀರ್ಣಗೊಳಿಸದ ತೀರ್ಮಾನಕ್ಕೆ ಸರ್ಕಾರ ಬಂದಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ಕುಮಾರ್, ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ, ಗ್ರೇಡಿಂಗ್ ನೀಡಲಾಗುವುದು ಎಂದರು.
ದ್ವಿತೀಯ ಪರೀಕ್ಷೆ ನಡೆಸಲು ಹೋದರೆ ಕನಿಷ್ಟ 12 ದಿನ ಬೇಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು, ಪೋಷಕರು ಬೇಸರವಾಗುವುದು ಬೇಡ. ಬದಲಾಗಿ ನೀಟ್ ಮತ್ತು ಸಿಇಟಿ ಪರೀಕ್ಷೆಗಳತ್ತ ಹೆಚ್ಚು ಗಮನ ಹರಿಸಿ. ಇಲಾಖೆಯ ಈ ನಿರ್ಧಾರವನ್ನು ಸ್ವಾಗತಿಸದ ವಿದ್ಯಾರ್ಥಿ ಗಳಿಗೆ, ಕೋವಿಡ್-19 ಸೋಂಕು ಕಡಿಮೆ ಯಾದ ನಂತರ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುವುದು ಎಂದವರು ಹೇಳಿದ್ದಾರೆ.
ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗ್ರೇಡಿಂಗ್ ಕೊಡುವುದನ್ನು ಬಿಟ್ಟರೆ ನಮ್ಮ ಬಳಿ ಬೇರೆ ಆಯ್ಕೆಯೇ ಇಲ್ಲ ಎಂದು ತಿಳಿಸಿದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಗಳಿಗೆ ಈ ಬಾರಿ ಎರಡು ಪರೀಕ್ಷೆ ನಡೆಸಲಾಗುವುದು. ವಿಜ್ಞಾನ, ಗಣಿತ ಮತ್ತು ಸಮಾಜವಿಜ್ಞಾನದ ಒಂದು ಪತ್ರಿಕೆ, ಭಾಷೆಗಳಿರುವ ಮತ್ತೊಂದು ಪ್ರಶ್ನೆಪತ್ರಿಕೆ ಇರುತ್ತದೆ. ತಲಾ 120 ಅಂಕಗಳಿದ್ದು ಮೂರು ಗಂಟೆಗಳ ಅವಧಿ ಪರೀಕ್ಷೆ ಇದಾಗಿರುತ್ತದೆ. ಪರೀಕ್ಷೆಗಳನ್ನು ಎರಡು ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ಕೊರೊನಾ ನಿಯಂತ್ರಣಕ್ಕೆ ಬಂದರೆ ಮಾತ್ರ ಎಸ್ಎಸ್ಎಲ್ಸಿ ಪರೀಕ್ಷೆ
ಬೆಂಗಳೂರು, ಜೂ. 4 – ಕೋವಿಡ್ ನಿಯಂತ್ರಣಕ್ಕೆ ಬಂದರೆ ಮಾತ್ರ ಸರಳವಾಗಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾ ಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕು ನಿಯಂತ್ರಣಕ್ಕೆ ಬರದಿದ್ದರೆ, ಪರೀಕ್ಷೆ ನಡೆಸುವುದಿಲ್ಲ. ವಿದ್ಯಾರ್ಥಿ ಗಳನ್ನು ಮುಂದಿನ ತರಗತಿಗೆ ಬಡ್ತಿ ನೀಡಲಾಗುವುದು ಎಂದು ಹೇಳಿದ್ದಾರೆ. ಕೊರೊನಾದ ಎರಡನೇ ಅಲೆ ಇನ್ನೂ ರಾಜ್ಯ, ರಾಷ್ಟ್ರದಲ್ಲಿದೆ. ಇದರಿಂದ ಅನೇಕ ಸಾವು, ನೋವುಗಳು ಉಂಟಾಗಿವೆ. ಮತ್ತೆ 3ನೇ ಅಲೆ ಎದುರಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಪ್ರಧಾನಿ ನರೇಂದ್ರ ಮೋದಿ ಅವರು, ರಾಷ್ಟ್ರಮಟ್ಟದಲ್ಲಿ 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿ, ಬಡ್ತಿ ನೀಡುವ ತೀರ್ಮಾನ ಪ್ರಕಟಿಸಿದ್ದಾರೆ. ಪ್ರಧಾನಿಗಳು ವಿದ್ಯಾರ್ಥಿಗಳ ಸ್ನೇಹದತ್ತ ಕೈಚಾಚಿದ್ದಾರೆ. ಅವರ ದೂರ ದೃಷ್ಟಿ ನಿರ್ಧಾರದಂತೆ ನಾವು ರಾಜ್ಯದಲ್ಲಿ ಇಂತಹ ನಿರ್ಧಾರ ಕೈಗೊಳ್ಳಬೇಕಾಯಿತು. ತಜ್ಞರು ಸರ್ಕಾರಕ್ಕೆ ಸಲಹೆ ಮಾಡಿದ್ದರು. ವಿದ್ಯಾರ್ಥಿಗಳ ದೃಷ್ಟಿಯಿಂದ ಇಂತಹ ತೀರ್ಮಾನ ಅನಿವಾರ್ಯವಾಗಿತ್ತು ಎಂದರು.
ಬುದ್ಧಿ ಭ್ರಮಣೆ, ಐಲು-ಪೈಲು ನಿರ್ಧಾರ
ಪಿಯು ಪರೀಕ್ಷೆ ರದ್ದುಗೊಳಿಸಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುತ್ತಿರುವುದಕ್ಕೆ ಕುಮಾರಸ್ವಾಮಿ ತರಾಟೆ
ಬೆಂಗಳೂರು, ಜೂ.4 – ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಿ, ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಮುಂದಾಗಿರುವುದು ರಾಜ್ಯ ಸರ್ಕಾರದ ಬುದ್ಧಿ ಭ್ರಮಣೆಯ ನಿರ್ಧಾರ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಮತಿಗೆಟ್ಟಂತೆ ವರ್ತಿಸುತ್ತಿರುವ ಶಿಕ್ಷಣ ಸಚಿವರ ಐಲು-ಪೈಲು ನಿರ್ಧಾರ ಕಂಡು ರಾಜ್ಯದ ಜನತೆ ಹಾದಿ ಬೀದಿಯಲ್ಲಿ ನಗಾಡುವಂತಾಗಿದೆ. ಸರ್ಕಾರ ತಕ್ಷಣ ಇಂತಹ ಮತಿ ಹೀನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದಾರೆ. ಪಿಯುಸಿ ಮಕ್ಕಳಿಗೆ ಪರೀಕ್ಷೆ ಇಲ್ಲ. ಎಸ್ಎಸ್ಎಲ್ಸಿ ಮಕ್ಕಳಿಗೆ ಸೀಮಿತ ವಿಷಯಗಳ ಪರೀಕ್ಷೆ ಎಂಬ ಮೊಂಡುತನವನ್ನು ಸರ್ಕಾರ ಕೈಬಿಡಬೇಕು. ಮಕ್ಕಳ ಜೀವದೊಂದಿಗೆ ಚೆಲ್ಲಾಟ ಆಡುವುದನ್ನು ಬಿಟ್ಟು, ಶಿಕ್ಷಣ ಸಚಿವರು ಎಡಬಿಡಂಗಿ ನಿರ್ಧಾರ ತೆಗೆದು ಕೊಂಡಿರುವುದಕ್ಕೆ ಮುಖ್ಯಮಂತ್ರಿಗಳು ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಕ್ಕಳಿಗೆ ಏಕರೂಪ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರಬೇಕು. ಪಿಯುಸಿ ಮಕ್ಕಳಿಗೆ ಪರೀಕ್ಷೆ ಇಲ್ಲ ಎಂದಾದರೆ ಅದು ಅವರಿಗಿಂತ ಕಿರಿಯರಾದ ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೂ ಅನ್ವಯಿಸಬೇಕು ಎಂದಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಿದ್ದಕ್ಕೆ ಪ್ರಧಾನಮಂತ್ರಿಯ ಗುಮ್ಮ ಕಾರಣ. ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷೆ ನಡೆಸಲು ಮುಂದಾಗಿರುವ ಬೃಹಸ್ಪತಿ ಶಿಕ್ಷಣ ಸಚಿವರೋ? ಅಥವಾ ಪೋಷಕರು, ವಿದ್ಯಾರ್ಥಿಗಳ ತಾಳ್ಮೆ ಕೆಣಕುವ ಪರೀಕ್ಷಾ ಮಂತ್ರಿಯೋ ಎಂದು ಅವರು ಹೇಳಿದ್ದಾರೆ.
ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ವಿಷಯದಲ್ಲಿ ಮೌನಿ ಆಗಿರುವ ಶಿಕ್ಷಣ ಸಚಿವರು ಬಿಸಿ ಊಟ ಸಿಗದೆ ಕಂಗಾಲಾಗಿರುವ ಬಡ ವಿದ್ಯಾರ್ಥಿಗಳ ಬಗ್ಗೆ ಮಾತನಾಡುವುದಿಲ್ಲ. ಪರೀಕ್ಷೆಯಲ್ಲಿ ಪಾಸಾಗುವ ಏಳೆಂಟು ಲಕ್ಷ ಮಂದಿ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಅನಾಯಸವಾಗಿ ಸೀಟು ದಕ್ಕಿಸಿಕೊಳ್ಳಲು ವ್ಯವಸ್ಥೆ ಮಾಡುವ ಕಡೆ ಚಿತ್ತ ಹರಿಸಲಿ ಎಂದು ಅವರು ತಿಳಿಸಿದ್ದಾರೆ.
- ಜುಲೈ 3ನೇ ವಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ
- 20 ದಿನ ಮುಂಚೆ ಪರೀಕ್ಷೆ ದಿನಾಂಕ ಘೋಷಣೆ
- ಎಸ್ಎಸ್ಎಲ್ಸಿಗೆ ಎರಡು ಪರೀಕ್ಷೆ
- ವಿಜ್ಞಾನ, ಗಣಿತ, ಸಮಾಜವಿಜ್ಞಾನಕ್ಕೆ ಒಂದು ಪ್ರಶ್ನೆಪತ್ರಿಕೆ, ಭಾಷೆಗಳಿಗೆ ಇನ್ನೊಂದು ಪ್ರಶ್ನೆಪತ್ರಿಕೆ
- ತಲಾ 120 ಅಂಕಗಳಿಗೆ ಮೂರು ಗಂಟೆ ಪರೀಕ್ಷೆ
- ಬಹು ಆಯ್ಕೆಯ ನೇರ – ಸರಳ ಪ್ರಶ್ನೆ
- ಯಾರೂ ಫೇಲ್ ಇಲ್ಲ, ವಿದ್ಯಾರ್ಥಿಗಳಿಗೆ ಎ ಮತ್ತು ಎ+ ಗ್ರೇಡ್
- ಕೋವಿಡ್ ಕಾರಣದಿಂದ ಗೈರಾದರೆ ಪೂರಕ ಪರೀಕ್ಷೆ.
ಜುಲೈ 1ರಿಂದ ಶಾಲಾರಂಭಕ್ಕೆ ಆದೇಶ
ಜೂನ್ 15ರಿಂದ ಪ್ರವೇಶಾತಿ ಆರಂಭ
ಬೆಂಗಳೂರು, ಜೂ.4 – ಜುಲೈ 1ರಿಂದ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಶಾಲಾರಂಭದ ದಿನಾಂಕವನ್ನು ಜೂನ್ 1ರ ಬದಲು ಜುಲೈನಿಂದ ಆರಂಭಿಸಲಾಗುತ್ತಿದೆ.
ಈ ಹಿಂದೆ ಜೂನ್ 15ರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಆರಂಭಿಸಲು ಆದೇಶ ಹೊರಡಿಸಲಾಗಿತ್ತು. ಆದರೆ, ಕೊರೊನಾ ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಶಾಲಾರಂಭದ ದಿನಾಂಕ ಮುಂದೂಡಲಾಗಿದೆ.
ಶಾಲೆಯ ಮೊದಲ ಅವಧಿ ಜುಲೈ 1ರಿಂದ ಅಕ್ಟೋಬರ್ 9ರವರೆಗೆ ಇರಲಿದೆ. ರಜೆಯ ನಂತರ ಎರಡನೇ ಅವಧಿ ಅಕ್ಟೋಬರ್ 21ರಿಂದ ಏಪ್ರಿಲ್ 30ರವರೆಗೆ ಇರಲಿದೆ.
ಈ ಹಿನ್ನೆಲೆಯಲ್ಲಿ ಶಾಲಾ ಪ್ರವೇಶವನ್ನು ಜೂನ್ 15ರಿಂದ ಆರಂಭಿಸಿ, ಆಗಸ್ಟ್ 31ರ ಒಳಗೆ ಪೂರ್ಣಗೊಳಿಸಲು ರಾಜ್ಯ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಭೌತಿಕವಾಗಿ ಶಾಲೆ ಆರಂಭಿಸಲು ಸಾಧ್ಯವಾಗದೇ ಇದ್ದರೆ ದೂರದರ್ಶನ, ರೇಡಿಯೋ, ಆನ್ಲೈನ್ ಮತ್ತಿತರೆ ಮಾರ್ಗಗಳ ಮೂಲಕ ಪಾಠಗಳನ್ನು ಕೈಗೊಳ್ಳಲು ಸೂಚನೆ ನೀಡಲಾ ಗಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಕೊರೊನಾ ಪರಿಸ್ಥಿತಿ ಗಮನಿಸಿ, ಆನ್ಲೈನ್ ಅಥವಾ ಭೌತಿಕ ತರಗತಿಗಳನ್ನು ನಡೆಸುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಪೋಷಕರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಹೇಳಿದರು.
ಖಾಸಗಿ ಶಾಲೆಗಳ ಶುಲ್ಕ ನಿಗದಿಗೆ ಸಂಬಂಧಿಸಿದ ವಿವಾದ ಹೈಕೋರ್ಟ್ ಮುಂದೆ ಇದೆ. ಅಲ್ಲಿ ಸರ್ಕಾರದ ಪರ ವಾದವನ್ನು ಮಂಡಿಸಲಾಗಿದೆ. ನ್ಯಾಯಾಲಯ ಶೀಘ್ರ ತೀರ್ಪು ನೀಡಿದಲ್ಲಿ ಎಲ್ಲಾ ಗೊಂದಲಗಳಿಗೆ ಉತ್ತರ ದೊರೆಯಲಿದೆ ಎಂದವರು ಹೇಳಿದ್ದಾರೆ.
ಕಳೆದ ಬಾರಿ 9ನೇ ತರಗತಿಯ ಪರೀಕ್ಷೆಯೂ ನಡೆದಿಲ್ಲ. ಅದರ ಆಧಾರದ ಮೇಲೆ ಅಂಕಗಳನ್ನು ನೀಡಲು ಸಾಧ್ಯವಾಗದ ಕಾರಣ, ಎಸ್ಸೆಸ್ಸೆಲ್ಸಿಗೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದೂ ಹೇಳಿದರು.ಪರೀಕ್ಷೆಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳಿ ದ್ದು, ನೇರ ಮತ್ತು ಸರಳವಾಗಿರುತ್ತವೆ. ಪ್ರತಿ ವಿಷಯಕ್ಕೆ 40 ಅಂಕಗಳಿರುತ್ತವೆ. ಅಂದರೆ, ಒಂದು ಪತ್ರಿಕೆ 120 ಅಂಕಗಳಿಗೆ ಇದ್ದು, ಮೂರು ಗಂಟೆ ಸಮಯ ನೀಡಲಾಗುತ್ತದೆ ಎಂದರು.
ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗ ಸೇರಿದಂತೆ ಯಾವುದೇ ಕೋರ್ಸ್ ತೆಗೆದುಕೊಳ್ಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಪರೀಕ್ಷೆ ನಡೆಸಲಾಗುತ್ತಿದೆ. ಯಾರನ್ನೇ ಆಗಲಿ ಅನುತ್ತೀರ್ಣಗೊಳಿಸುವ ಉದ್ದೇಶವಿಲ್ಲ. ಎ, ಎ+ ಗ್ರೇಡ್ ನೀಡಲಾಗುತ್ತದೆ ಎಂದರು.
ಕೋವಿಡ್ ಕಾರಣದಿಂದ ಗೈರಾಗಿದ್ದರೆ ಅಂತಹ ಮಕ್ಕಳಿಗೆ ಮಾತ್ರ ಪೂರಕ ಪರೀಕ್ಷೆ ನಡೆಸಲಾಗುತ್ತದೆ ಎಂದೂ ತಿಳಿಸಿದರು.
ಜುಲೈ 3ನೇ ವಾರದಲ್ಲಿ ಎಸ್ಎಸ್ಎ ಲ್ಸಿ ಪರೀಕ್ಷೆ ನಡೆಸಲು ತೀರ್ಮಾನಿಸ ಲಾಗಿದೆ. 20 ದಿನ ಮುಂಚಿತವಾಗಿ ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗುವುದು. 6 ಸಾವಿರ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಈ ಬಾರಿ ದುಪ್ಪಟ್ಟು ಕೇಂದ್ರಗಳಲ್ಲಿ ಪರೀಕ್ಷೆ ಮಾಡುತ್ತೇವೆ. ಒಂದು ಕೊಠಡಿಯಲ್ಲಿ 10-12 ವಿದ್ಯಾರ್ಥಿಗಳನ್ನು ಕೂರಿಸಿ ಪರೀಕ್ಷೆ ನಡೆಸುತ್ತೇವೆ.
ಪರೀಕ್ಷೆಯಲ್ಲಿ ಯಾರನ್ನೂ ಅನುತ್ತೀರ್ಣ ಮಾಡುವುದಿಲ್ಲ. ಮೊದಲೇ ಮಾದರಿ ಪ್ರಶ್ನೆ ಪತ್ರಿಕೆಯನ್ನು ನೀಡುತ್ತೇವೆ. ಅದನ್ನು ನೋಡಿಕೊಂಡು ಸಿದ್ಧತೆ ಮಾಡಿಕೊಳ್ಳಿ. ಒತ್ತಡವಾಗಲಿ, ಆತಂಕವಾಗಲೀ ಬೇಡ. ಅತ್ಯಂತ ಸರಳ ಹಾಗೂ ನೇರ ಪ್ರಶ್ನೆಗಳನ್ನಷ್ಟೇ ಕೇಳಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಒಂದು ಡೆಸ್ಕ್ಗೆ ಒಬ್ಬ ವಿದ್ಯಾರ್ಥಿಯನ್ನು ಕೂರಿಸುತ್ತೇವೆ. ಪರೀಕ್ಷೆ ಬರೆಯುವ ಎಲ್ಲರಿಗೂ ಎನ್95 ಮಾಸ್ಕ್ ನೀಡುತ್ತೇವೆ. ಮಾದರಿ ಪ್ರಶ್ನೆಪತ್ರಿಕೆ ಶಾಲೆಗಳಿಗೆ ಕಳಿಸಲು ವ್ಯವಸ್ಥೆ ಆಗಿದೆ. ವೆಬ್ಸೈಟ್ನಲ್ಲೂ ಮಾದರಿ ಪ್ರಶ್ನೆಪತ್ರಿಕೆ ಹಾಕಲಾಗುವುದು. ಪರೀಕ್ಷೆಯಲ್ಲಿ ಯಾರನ್ನೂ ಫೇಲ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುರಕ್ಷತಾ ದೃಷ್ಟಿಯಿಂದ ಪರೀಕ್ಷಾ ಕೊಠಡಿಗಳಿಗೆ ಬರುವ ಮೇಲ್ವಿಚಾರಕರು ಎರಡು ಡೋಸ್ ಲಸಿಕೆ ಪಡೆದಿರುವುದನ್ನು ಕಡ್ಡಾಯ ಮಾಡಲಾಗಿದೆ. ಇದಕ್ಕಾಗಿ ನಿಯಮ ರೂಪಿಸಿದ್ದೇವೆಂದು ಹೇಳಿದರು.