ಕೋವಿಡ್‌ ನಿಯಂತ್ರಿಸಲು ಪಕ್ಷಾತೀತ ಕೆಲಸ ನಿರ್ವಹಿಸಬೇಕು

ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಕರೆ

ದಾವಣಗೆರೆ, ಜೂ.3- ಎಲ್ಲರೂ ಪಕ್ಷ ಭೇದ ಮರೆತು ಒಟ್ಟಾಗಿ ಸೇರಿ ಮಹಾಮಾರಿ ಕೊರೊನಾ ನಿಯಂತ್ರಿಸುವಲ್ಲಿ ಮುಂದಾಗಬೇಕೆಂದು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್‌ ಯುವ ಜನತೆಗೆ ಕರೆ ನೀಡಿದರು.

ತರಳಬಾಳು ಸೇವಾ ಸಮಿತಿ ಹಾಗೂ ಶಿವಸೈನ್ಯ ಯುವಕರು ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಕೊರೊನಾ ಸೋಂಕಿತರು, ಕೊರೊನಾ ವಾರಿಯರ್ಗಳಿಗೆ ಸಲ್ಲಿಸುತ್ತಿರುವ ದಾಸೋಹ ಸೇವೆಯ ಸಿದ್ಧತೆ ಪರಿಶೀಲಿಸಿದ ನಂತರ ಅವರು ಮಾತನಾಡಿದರು.

ಕೊರೊನಾ ನಿಯಂತ್ರಣ ಕಾರ್ಯದಲ್ಲಿ ಯಾವುದೇ ರಾಜಕಾರಣ ಮಾಡದೇ ನಿಸ್ವಾರ್ಥ ಸೇವೆ ಅಗತ್ಯ. ಇಂತಹ ಪುಣ್ಯದ ಕೆಲಸದಲ್ಲಿ ತೊಡಗಿರುವ ಶಿವಸೈನ್ಯ ಕಾರ್ಯಕರ್ತರು ಪ್ರಶಂಸಾರ್ಹರು. ಇಂತಹ ಸೇವಾ ಕಾರ್ಯಕ್ಕೆ ತಮ್ಮ ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು.

ಕೋವಿಡ್‌ ನಿಯಂತ್ರಣಕ್ಕೆ ಬರುವ ವರೆಗೆ ದಾಸೋಹ ಸೇವೆ ನಿರಂತರವಾಗಿ ನಡೆಯಲಿ. ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಗಳ ಮಾರ್ಗದರ್ಶನದಲ್ಲಿ ಶಿವಸೈನ್ಯ ಪಡೆ ನಡೆಸುತ್ತಿರುವ ದಾಸೋಹ ಸೇವಾ ಕಾರ್ಯ ಶ್ಲ್ಯಾಘನೀಯ ಎಂದು ಹೇಳಿದರು.

ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಯಾವ ಆಸ್ಪತ್ರೆಯಲ್ಲೂ ಬೆಡ್‌ಗಳು ಸಿಗದೆ ರೋಗಿಗಳು ಪರದಾಡುವಂತಾಗಿದೆ. ಸಾವುಗಳು ಸಹ ಹೆಚ್ಚಾಗುತ್ತಿವೆ. ಆದರೆ ಮಾಧ್ಯಮಗಳಲ್ಲಿ ವಾಸ್ತವ ಮಾಹಿತಿ ನೀಡುತ್ತಿಲ್ಲ ಎಂದು ತಿಳಿಸಿದರು.

ದಾವಣಗೆರೆ ಹೊರ ವಲಯದ ಸುಸಜ್ಜಿತ ಹಾಸ್ಟೆಲ್‌ ನಿರ್ಮಾಣ ಕಾರ್ಯ ದಲ್ಲಿ ಶಾಸಕ ಡಾ. ಶಾಮನೂರು ಶಿವಶಂಕ ರಪ್ಪ ಅವರ ಕೊಡುಗೆ ಪ್ರಮುಖವಾದುದು. 5 ಕೋಟಿ  ರೂ.ಗಳು ಕಾಂಗ್ರೆಸ್‌ ವತಿಯಿಂದ ತಮ್ಮ ತಂದೆಯು ಒಂದೂವರೆ ಕೋಟಿ ರೂ.ಗಳನ್ನು ವೈಯಕ್ತಿಕ ದೇಣಿಗೆ ನೀಡಿರುವುದನ್ನು ಸ್ಮರಿಸಿದರು. 

ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ : 18 ವರ್ಷ ಮೇಲ್ಪಟ್ಟ ಎಲ್ಲರೂ ಸಹ ಲಸಿಕೆ ಪಡೆದುಕೊಳ್ಳುವಂತೆ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್‌ ಮನವಿ ಮಾಡಿದರು.

ಲಸಿಕೆ ಪಡೆದರೆ ಸಾವಿನ ದವಡೆ ಯಿಂದ ಪಾರಾಗಬಹುದು. ಆಕ್ಸಿಜನ್‌, ವೆಂಟಿಲೇಟರ್‌ ಮಟ್ಟಕ್ಕೆ ಹೋಗುವುದನ್ನು ತಪ್ಪಿಸುತ್ತದೆ ಎಂದರು.

ತರಳಬಾಳು ಸಂಸ್ಥೆಯಿಂದ ಕೋವಿಡ್‌ ಕೇರ್‌ ಸೆಂಟರ್‌ :
ತರಳಬಾಳು ವಿದ್ಯಾಸಂಸ್ಥೆಯ ಹಾಸ್ಟೆಲ್‌ ಗಳು ಕೋವಿಡ್‌ ಕೇರ್‌ ಸೆಂಟರ್‌ ಆಗಿ ಪರಿವರ್ತನೆ ಮಾಡಿ ಕೊರೊನಾ ಸೋಂಕಿತರ ರಕ್ಷಣೆೆಗೆ ನಿಂತಿರುವ ತರಳಬಾಳು ಶ್ರೀಗಳ ಕಾರ್ಯ ಸ್ತುತ್ಯಾರ್ಹ ಎಂದು ಹೇಳಿದರು.

ಕಸಾಪ ತಾಲ್ಲೂಕು ಅಧ್ಯಕ್ಷ ಬಿ. ವಾಮದೇವಪ್ಪ ಅವರು ಮಾತನಾಡಿ, ಶಾಮನೂರು ಮಲ್ಲಿಕಾರ್ಜುನ್ ಸಚಿವರಾಗಿದ್ದ ಅವಧಿಯಲ್ಲಿನ ಸಾಧನೆ ಹಾಗೂ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಸೇವಾ ಕಾರ್ಯಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.

ಕಾಂಗ್ರೆಸ್‌ ಮುಖಂಡರಾದ ಹನುಮನಹಳ್ಳಿ ನಾಗೇಂದ್ರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್‌, ಕಾಂಗ್ರೆಸ್‌ ಯುವ ಮುಖಂಡರಾದ ಮಾಗಾನಹಳ್ಳಿ ಬಿ.ಕೆ. ಪರಶುರಾಂ, ಬೇತೂರು ಕರಿಬಸಪ್ಪ, ಶಿವಸೈನ್ಯ ಪದಾಧಿಕಾರಿಗಳಾದ ಹೆಮ್ಮನಬೇತೂರು ಶಶಿಧರ್‌, ಮೆಳ್ಳೆಕಟ್ಟೆ ಶ್ರೀನಿವಾಸ್‌, ಪ್ರಭು ಕಾವಲಹಳ್ಳಿ, ಮಾಗನೂರು ಉಮೇಶ್‌ ಗೌಡ್ರು, ಲಿಂಗರಾಜ್‌ ಅಗಸನಕಟ್ಟೆ, ಧನ್ಯಕುಮಾರ್‌ ಎಲೇಬೇತೂರು, ಸತೀಶ್‌ ಸಿರಿಗೆರೆ, ಶಿವಕುಮಾರ್‌ ಕೊರಟಿಕೆರೆ, ಮತ್ತಿತರರಿದ್ದರು.

ಇದೇ ವೇಳೆ ಶಾಮನೂರು ಮಲ್ಲಿಕಾರ್ಜುನ್‌ ಅವರನ್ನು ಶಶಿಧರ್‌ ಹೆಮ್ಮನಬೇತೂರು ಅಭಿನಂದಿಸಿದರು.

error: Content is protected !!