ಮುಂಜಾನೆ ಎರಡು ತಾಸು ಮಳೆ ನಂತರ ಮಾರುಕಟ್ಟೆಯಲ್ಲಿ ಹೆಚ್ಚಿದ ವಹಿವಾಟು
ದಾವಣಗೆರೆ, ಜೂ.3- ನಗರದಲ್ಲಿ ಗುರುವಾರ ಮುಂಜಾನೆ ಸುಮಾರು ಎರಡು ತಾಸು ಸುರಿದ ವರುಣ ಮಾರಾಟ ಹಾಗೂ ಖರೀದಿ ಭರಾಟೆಗೆ ತುಸು ಬ್ರೇಕ್ ಹಾಕಿದಂತಾಗಿತ್ತು.
ಜಿಲ್ಲೆಯಲ್ಲಿ ಪೂರ್ಣ ಲಾಕ್‌ಡೌನ್ ನಡುವೆ ಇಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಬೆಳಿಗ್ಗೆ ಮಳೆ ಸುರಿದಿದ್ದರಿಂದ ವ್ಯಾಪಾರ ವಹಿವಾಟಿಗೆ ತುಸು ಅಡಚಣೆಯಾಯಿತಾದರೂ ನಂತರ ನಿಧಾನವಾಗಿ ಕೊಡು-ಕೊಳ್ಳುವಿಕೆ ಆರಂಭವಾಯಿತು.
ರಿಟೇಲ್ ಹಾಗೂ ಹೋಲ್‌ಸೇಲ್ ಖರೀದಿದಾದರರು ಬೆಳಿಗ್ಗೆಯೇ ಮಾರುಕಟ್ಟೆಗೆ ದಾಂಗುಡಿ ಇಟ್ಟಿದ್ದರು. ಕೆಲ ಕಿರಾಣಿ ಅಂಗಡಿ ಮಾಲೀಕರು ವಸ್ತುಗಳನ್ನು ಅನ್‌ಲೋಡ್ ಮಾಡಿಕೊಳ್ಳುತ್ತಲೇ ಮಾರಾಟವನ್ನೂ ಮಾಡುತ್ತಿದ್ದರು.
ಇತ್ತ ಜನರೂ ಸಹ ದಿನಸಿ ಅಂಗಡಿ ಹಾಗೂ ಅಡುಗೆ ಎಣ್ಣೆ ಅಂಗಡಿಗಳಿಗೆ ಮುಗಿ ಬಿದ್ದು ವಸ್ತುಗಳನ್ನು ಖರೀದಿಸಿದರು. ಕಳೆದ ಸೋಮವಾರ ನೂಕು ನುಗ್ಗಲಿನಿಂದಾಗಿ ಸಂಚಾರದಲ್ಲಿ ವ್ಯತ್ಯಯವಾಗಿದ್ದರಿಂದ ಈ ಬಾರಿ ಪೊಲೀಸರು ಬೆಳಿಗ್ಗೆಯೇ ಆಗಮಿಸಿ ವಾಹನ ಸಂಚಾರ ಸುಗಮವಾಗಿ ಸಾಗಲು ಕ್ರಮ ಕೈಗೊಂಡಿದ್ದರು. ಒಂದು ಬದಿ ಮಾತ್ರ ವಾಹನಗಳನ್ನು ಪಾರ್ಕ್ ಮಾಡಲು ಪೊಲೀಸರು ಅವಕಾಶ ಕಲ್ಪಿಸಿದ್ದರು. ಬೇಕಾ ಬಿಟ್ಟಿ ನಿಲ್ಲಿಸಿದ್ದ ವಾಹನಗಳ ಮಾಲೀಕರಿಗೆ ದಂಡದ ಬಿಸಿ ತೋರಿಸಿದರು. ಪರಿಣಾಮ ಅಷ್ಟಾಗಿ ಸಂಚಾರದಲ್ಲಿ ವ್ಯತ್ಯಯವಾಗಲಿಲ್ಲ.
ಆದರೆ ಮಾರುಕಟ್ಟೆಯಲ್ಲಿ ಕೊಳ್ಳುವವರ ವಾಹನಗಳು ಹಾಗೂ ವಸ್ತುಗಳನ್ನು ತಂದ ವಾಹನಗಳು ಏಕಕಾಲದಲ್ಲಿಯೇ ಹೆಚ್ಚಾಗಿದ್ದರಿಂದ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು.
ಕೆಲವು ಅಂಗಡಿಗಳು ಬೆಳಿಗ್ಗೆ 6 ಗಂಟೆಗೂ ಮೊದಲೇ ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸಿ, ಮಧ್ಯಾಹ್ನ 12 ಗಂಟೆ ಸಮೀಪಿಸುತ್ತಿದ್ದಂತೆ ಎಲ್ಲಾ ವ್ಯವಹಾರಗಳನ್ನು ಸ್ಥಗಿತಗೊಳಿಸಿದರು.
ಇಂದೂ ಸಹ ಅಡುಗೆ ಎಣ್ಣೆ, ಹೋಲ್‌ಸೇಲ್ ಕಾಂಡಿಮೆಂಟ್ಸ್ ಅಂಗಡಿಗಳ ಮುಂದೆ ಗ್ರಾಹಕರು ಸರದಿಯಲ್ಲಿ ನಿಂತು ಖರೀದಿಸಿದರು. ದಿನಸಿ ಅಂಗಡಿಗಳಲ್ಲಿ ಕೆಲಸ ವಸ್ತುಗಳು ಸ್ಟಾಕ್ ಇಲ್ಲ ಎನ್ನುತ್ತಿದ್ದುದು ಕಂಡು ಬಂತು. ಎಲ್ಲೆಡೆ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಬಿತ್ತನೆ ಬೀಜ, ಗೊಬ್ಬರ ಖರೀದಿಸುತ್ತಿದ್ದರು.
ರಸ್ತೆಯಲ್ಲಿ ನೀರು : ಸುಮಾರು ಎರಡು ತಾಸು ಒಂದೇ ಸಮನೆ ಸುರಿದ ಮಳೆಯಿಂದಾಗಿ ರೈಲ್ವೇ ನಿಲ್ದಾಣದ ಪಕ್ಕ ಹಾಗೂ ಎಪಿಎಂಸಿ ಬಳಿಯ ರೈಲ್ವೇ ಕೆಳ ಸೇತವೆಗಳಲ್ಲಿ ನೀರು ತುಂಬಿಕೊಂಡ ಪರಿಣಾಮ ರೈಲ್ವೇ ಹಳಿಯಿಂದ ಈಚೆ ಬರುವವರು ಹಾಗೂ ಆಚೆ ಹೋಗುವವರು ಮೇಲ್ಸೇತುವೆಗಳನ್ನು ಬಳಸಿ ಬರಬೇಕಾಯಿತು.
ಬಾರ್‌ಗಳೂ ರಶ್ : ಬೆಳಿಗ್ಗೆಯೇ ಮದ್ಯಪ್ರಿಯರು ಬಾರ್‌ಗಳಗೆ ಆಗಮಿಸಿದ್ದ ಪರಿಣಾಮ ಬಹುತೇಕ ಬಾರ್‌ಗಳು ಮದ್ಯಪ್ರಿಯರಿಂದ ತುಂಬಿದ್ದವು. ಕೆಲಕಡೆ ಸರದಿಯಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದರು.
ಆಯುಕ್ತರ ಸಂಚಾರ: ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಹಾಗೂ ಸಿಬ್ಬಂದಿಗಳು ಮುಂಜಾನೆ ಮಾರುಕಟ್ಟೆಯಲ್ಲಿ ಸಂಚರಿಸಿ ಸಾಮಾಜಿಕ ಅಂತರದಿಂದ ವ್ಯವಹಾರ ನಡೆಸುವಂತೆ ಸೂಚಿಸಿದರು. ನಿಯಮ ಉಲ್ಲಂಘಿಸಿದ ಅಂಗಡಿಗಳಿಗೆ ದಂಡ ವಿಧಿಸಿದರು.
ಅಡುಗೆ ಎಣ್ಣೆ ಮಾರಾಟ ಮಾಡುವ ರೇಣುಕಾ ಎಂಟರ್ ಪ್ರೈಸಸ್ ಮಾಲೀಕರು ನಮಗೆ ಎಣ್ಣೆ ಸರಕು ಹೊತ್ತು ತರುವ ಲಾರಿಗಳಿಗೆ ರಾತ್ರಿ ಆನ್ ಲೋಡ್ ಮಾಡಲು ಅವಕಾಶ ವಿಲ್ಲ. ಜನ ಎಷ್ಟು ಹೇಳಿದರು ಕೇಳುವುದಿಲ್ಲ. ದಿನಸಿ ವಸ್ತುಗಳನ್ನು ಹೊತ್ತು ತರುವ ಲಾರಿಗಳ ಸರಕು ಇಳಿಸಲು ಜಿಲ್ಲಾಡಳಿತ ಅವಕಾಶ ನೀಡಬೇಕು ಎಂದು ಪಾಲಿಕೆ ಆಯುಕ್ತರ ಬಳಿ ಕೆಲ ವರ್ತಕರು ಮನವಿ ಮಾಡಿದರು.
ಲಯನ್ ವಾಹನ, ಪಾಲಿಕೆಯ ಕಸ ವಿಲೇವಾರಿ ಆಟೋಗಳು ಕಾರ್ಯಾಚರಣೆಯಲ್ಲಿ ಇದ್ದವು. ಪದೇ ಪದೇ ಮಾತು ಕೇಳದ ತರಕಾರಿ ಮಾರುವ ಗಾಡಿಗಳನ್ನು ಪಾಲಿಕೆ ವಶಕ್ಕೆ ಪಡೆಯಲಾಯಿತು.
ಸಿಟಿ ಡಿವೈಎಸ್‍ಪಿ ನಾಗೇಶ್ ಐತಾಳ್, ಸಿಪಿಐ ಗಜೇಂದ್ರಪ್ಪ, ಉತ್ತರ ಸಂಚಾರಿ ಪಿಎಸ್‍ಐ ಇಮ್ರಾನ್, ಪೌರ ಕಾರ್ಮಿಕರು, ಸಿಬ್ಬಂದಿಗಳು ಮಾರುಕಟ್ಟೆ ಪ್ರದೇಶದಲ್ಲಿ ಅನಾನುಕೂಲವಾಗದಂತೆ ನೋಡಿಕೊಂಡರು.