ದಾವಣಗೆರೆ, ಜೂ.3- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಕೊರೊನಾ ಸೋಂಕಿನಿಂದ ಪಾರು ಮಾಡುವ ಸಲುವಾಗಿ ತಮ್ಮ ಸ್ವಂತ ಹಣದಲ್ಲಿ ಕ್ಷೇತ್ರದ ಜನರಿಗೆ ಉಚಿತವಾಗಿ ಲಸಿಕೆ ನೀಡಲು ಮುಂದಾಗಿದ್ದು, ಉತ್ತರ ಕ್ಷೇತ್ರದ ಜನರಿಗೂ ಲಸಿಕೆ ನೀಡುವ ವಾಗ್ದಾನದಂತೆ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೆಜ್ಜೆ ಇಟ್ಟಿದ್ದು, ಆ ಮುಖೇನ ಎಸ್ಸೆಸ್ ಮತ್ತು ಎಸ್ಸೆಸ್ಸೆಂ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿದ್ದಾರೆ.
ನನ್ನ ಕ್ಷೇತ್ರದ ಜನರಿಗೆ ಸರ್ಕಾರ ವ್ಯಾಕ್ಸಿನ್ ನೀಡಬೇಕು. ಅದಕ್ಕೆ ತಗಲುವ ವೆಚ್ಚದ ಅರ್ಧ ಹಣವನ್ನು ಭರಿಸುವುದಾಗಿ ಎಸ್ಸೆಸ್ ಹೇಳಿದ್ದರು. ದಕ್ಷಿಣ ಅಷ್ಟೇ ಅಲ್ಲ ಉತ್ತರ ಕ್ಷೇತ್ರದ ಜನರಿಗೂ ಸ್ವಂತ ಹಣದಲ್ಲಿ ಲಸಿಕೆ ಹಾಕಿಸುವುದಾಗಿ ಎಸ್ಸೆಸ್ಸೆಂ ವಾಗ್ದಾನ ಮಾಡಿದ್ದರು.
ಅಂತೆಯೇ ಪ್ರಥಮಾದ್ಯತೆ ಮೇರೆಗೆ ಜೂನ್ 4 ರಿಂದ ದಕ್ಷಿಣ ಕ್ಷೇತ್ರದ ಜನರಿಗೆ ಉಚಿತವಾಗಿ ಲಸಿಕೆ ಹಾಕುವ ಮುಖೇನ ಲಸಿಕಾ ಶಿಬಿರಕ್ಕೆ ಚಾಲನೆ ಸಿಗಲಿದೆ. 2-3 ದಿನಗಳಲ್ಲಿ ಉತ್ತರ ಕ್ಷೇತ್ರದಲ್ಲಿ ಲಸಿಕೆ ಭಾಗ್ಯ ಸಿಗಲಿದೆ.
ಈ ಬಗ್ಗೆ ಇಂದು ಎಸ್ಸೆಸ್ ಮತ್ತು ಎಸ್ಸೆಸ್ಸೆಂ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಎಸ್ಸೆಸ್ ಮಾತನಾಡಿ, ನನ್ನ ಕ್ಷೇತ್ರದ ಜನರಿಗೆ ಲಸಿಕೆ ಹಾಕಲು ತಗಲುವ ವೆಚ್ಚದ ಅರ್ಧ ಹಣವನ್ನು ಭರಿಸುವುದಾಗಿ ಹೇಳಿದ್ದೆ. ಇದುವರೆವರೆಗೂ ಈ ವಿಚಾರವಾಗಿ ಸರ್ಕಾರದಿಂದ ಯಾವುದೇ ಉತ್ತರ ಬಾರದ ಹಿನ್ನಲೆಯಲ್ಲಿ ನಾನು ಈ ಹಿಂದೆ ಘೋಷಣೆ ಮಾಡಿದಂತೆ ಕ್ಷೇತ್ರದ ಜನರಿಗೆ ಲಸಿಕೆ ನೀಡಲು ಮುಂದಾಗಿದ್ದೇನೆ ಎಂದು ತಿಳಿಸಿದರು.
ನಾನು ಮಾಡಿದ್ದ ವಾಗ್ದಾನದ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಆದರೂ ಇದನ್ನೆಲ್ಲಾ ಬದಿಗೊತ್ತಿ ಕೊಟ್ಟ ಮಾತಿನಂತೆ ಜನರು ಕೊರೊನಾದಿಂದ ಸಂಕಷ್ಟ ಅನುಭವಿಸಬಾರದು ಎಂದು ಲಸಿಕೆ ಆಯೋಜನೆ ಮಾಡಿದ್ದು, ಮೊದಲ ಹಂತದಲ್ಲಿ 10 ಸಾವಿರ ಡೋಸ್ ಲಸಿಕೆ ಹಾಕಲಾಗುವುದು. ನಾಳೆ ದಿನಾಂಕ 4ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ನಗರದೇವತೆ ದುರ್ಗಾಂಬಿಕಾ ದೇವಾಲಯದ ಮುಂಭಾಗದಲ್ಲಿರುವ ದಾಸೋಹ ಮಂದಿರದಲ್ಲಿ ಲಸಿಕೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಸದಸ್ಯರಾದ ಯು.ಬಿ. ವೆಂಕಟೇಶ್, ಕೆ.ಸಿ. ಕೊಂಡಯ್ಯ ಮತ್ತಿತರರು ಭಾಗವಹಿಸಲಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಬರುತ್ತಿಲ್ಲ ಎಂದರು.
ಸರ್ಕಾರ ಮಾಡಬೇಕಿದ್ದನ್ನು ಮಾಡಿದ್ದೇವೆ: ಆರಂಭದಲ್ಲಿ ಖಾಸಗಿಯಾಗಿ ಲಸಿಕೆ ಕೊಡುತ್ತಿರಲಿಲ್ಲ. ಆದರೆ ನಾವು ಮನವೊಲಿಸಿ ಲಸಿಕೆ ಪಡೆದಿದ್ದೇವೆ. ಆಡಳಿತ ಪಕ್ಷ ಮಾಡಬೇಕಾದ ಕೆಲಸವನ್ನು ನಾವು ಮಾಡಿದ್ದೇವೆ ಆ ಮುಖೇನ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ.
ಪ್ರಾರಂಭಿಕವಾಗಿ 10 ಸಾವಿರ ಕೋವಿಶೀಲ್ಡ್ ಡೋಸ್ ಲಸಿಕೆ ಬಂದಿದ್ದು, ಇನ್ನೂ ವಾರ ಅಥವಾ 10 ದಿನಗಳ ಲ್ಲಿ 50 ಸಾವಿರ ಡೋಸ್ ಬರಲಿದೆ. ಈಗಾಗಲೇ 60 ಸಾವಿರ ಲಸಿಕೆಯ ನಾಲ್ಕು ಕೋಟಿ ವೆಚ್ಚವನ್ನು ಕಂಪೆನಿಗಳಿಗೆ ನೀಡಲಾಗಿದೆ. ಪಾಲಿಕೆ ಸದಸ್ಯರು ಇರಲಿ, ಬಿಡಲಿ ಕಾಂಗ್ರೆಸ್ ನಾಯಕರು, ಮುಖಂಡರು, ಕಾರ್ಯಕರ್ತರು ಒಗ್ಗೂಡಿ ಜನರಿಗೆ ಲಸಿಕೆ ಹಾಕಿಸಲು ಶ್ರಮಿಸುವರು. ಮೊದಲಿಗೆ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊಡಲಾಗುವುದು. ನಂತರದಲ್ಲಿ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡುವ ಬಗ್ಗೆ ಯೋಚಿಸಲಾಗುವುದು.
– ಎಸ್.ಎಸ್. ಮಲ್ಲಿಕಾರ್ಜುನ್
ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ಬಹಳವೆಂದರೆ ಮೂರುವರೆ ಸಾವಿರ ಕೋಟಿ ರೂ ಖರ್ಚಾಗಬಹುದು. ಯಾವುದಾದರೂ ಯೋಜನೆಯ ಹಣವನ್ನು ಇದಕ್ಕೆ ಉಪಯೋಗಿಸಬಹುದಿತ್ತು ಎಂದರು.
ಬಿಜೆಪಿ, ಕಾಂಗ್ರೆಸ್ ಪಕ್ಷ ಎನ್ನದೇ ಪಕ್ಷಾತೀತವಾಗಿ ಎಲ್ಲ ಜನರಿಗೂ ಲಸಿಕೆ ನೀಡಲಾಗುವುದು. ಇಂತಹ ಪ್ರಯೋಗ ರಾಜ್ಯದಲ್ಲಿ ಅಲ್ಲ, ದೇಶದಲ್ಲಿ ಮೊಟ್ಟ ಮೊದಲ ಪ್ರಯೋಗ ಆಗಿದೆ ಎಂದು ಮಲ್ಲಿಕಾರ್ಜುನ್ ತಿಳಿಸಿದರು.
ಮೊದಲಿಗೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಐದು ವಾರ್ಡ್ಗಳು ಸೇರಿ ಒಂದು ಲಸಿಕಾ ಕೇಂದ್ರದಲ್ಲಿ ಲಸಿಕೆ ಹಾಕಲಾಗುವುದು. 2-3 ದಿನಗಳಲ್ಲಿ ಅಲ್ಲಿಯೂ ಉತ್ತರ ವಿಧಾನಸಭಾ ಕ್ಷೇತ್ರಕ್ಕೂ ಲಸಿಕೆ ನೀಡಲಾಗುವುದು. ಬೂತ್ ಮತ್ತು ವಾರ್ಡ್ವಾರು ಲಸಿಕೆ ಹಾಕಲಾಗುವುದು ಎಂದರು.
ನಮ್ಮ ವೈದ್ಯಕೀಯ ಕಾಲೇಜುಗಳಲ್ಲಿರುವ ವೈದ್ಯರು, ನರ್ಸ್ಗಳು ಮತ್ತು ಸ್ವಯಂ ಸೇವಕರ ತಂಡವೇ ಲಸಿಕೆ ನೀಡುವ ಕಾರ್ಯದಲ್ಲಿ ಭಾಗವಹಿಸಲಿದೆ. ಸರ್ಕಾರದಿಂದ ಈಗಾಗಲೇ ನೀಡಲಾಗುತ್ತಿರುವ ಲಸಿಕೆಯನ್ನು ಹಾಕಿಸಿಕೊಂಡವರ, ಹಾಕಿಸಿಕೊಳ್ಳಬೇಕಾದವರ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ. ಲಸಿಕೆ ಪಡೆಯದವರನ್ನು ಗುರುತಿಸಿ ನೀಡಲಾಗುತ್ತದೆ. ಸರ್ಕಾರದ ಆಪ್ ಬಳಸಿಕೊಳ್ಳಲಾಗುವುದು. ಜಿಲ್ಲಾಡಳಿತ, ಆರೋಗ್ಯ ಇಲಾಖೆಯೊಂದಿಗೆ ಚರ್ಚೆ ನಡೆಸಿದ್ದೇವೆ ಎಂದು ವಿವರಿಸಿದರು.
ಶೀಘ್ರವೇ ಹಣ ನೀಡಿದವರಿಗೂ ಲಸಿಕೆ: ಈಗಾಗಲೇ ನಾವುಗಳು ಹಣ ಕೊಡುತ್ತೇವೆ. ನಮಗೆ ಲಸಿಕೆ ಕೊಡಿ ಎಂದು ಹಣ ಇದ್ದವರು ಮನವಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಎಸ್.ಎಸ್. ಹೈಟೆಕ್ ಆಸ್ಪತ್ರೆ, ಬಾಪೂಜಿ ಆಸ್ಪತ್ರೆಯಲ್ಲಿ ಲಸಿಕೆ ಕೊಡಲಾಗುವುದು. ಅದು ಯಾವಾಗ ಪ್ರಾರಂಭ ಮಾಡುತ್ತೇವೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಆದರೆ, ಸದ್ಯದಲ್ಲೇ ಲಸಿಕೆ ನೀಡುತ್ತೇವೆ ಎಂದು ಮಲ್ಲಿಕಾರ್ಜುನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್. ಬಸವಂತಪ್ಪ, ಪಾಲಿಕೆ ಸದಸ್ಯ ಚಮನ್ ಸಾಬ್, ದಕ್ಷಿಣ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಮುಖಂಡ ಮಾಲತೇಶ್ ರಾವ್ ಜಾಧವ್, ಕುರುಡಿ ಗಿರೀಶ್, ಹರೀಶ್ ಬಸಾಪುರ ಸೇರಿದಂತೆ ಇತರರು ಇದ್ದರು.