ಕನ್ನಡ ಕೊಳಕು ಭಾಷೆ ಎಂದ ಗೂಗಲ್ ಶೋಧ

ಬೆಂಗಳೂರು, ಜೂ. 3 – ಕನ್ನಡ ಭಾರತದ ಅತ್ಯಂತ ಕೊಳಕು ಭಾಷೆ ಎಂದು ಗೂಗಲ್ ಶೋಧದಲ್ಲಿ ತಿಳಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

ಗೂಗಲ್‌ನಲ್ಲಿ ಭಾರತದ ಅತ್ಯಂತ ಕೊಳಕು ಭಾಷೆ ಯಾವುದು ಎಂದು ಶೋಧಿಸಿದಾಗ ಕನ್ನಡ ಎಂಬ ಉತ್ತರ ಸಿಗುತ್ತಿತ್ತು. ಈ ಬಗ್ಗೆ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.  ಈ ಬಗ್ಗೆ ಕ್ಷಮೆ ಯಾಚಿಸಿರುವ ಗೂಗಲ್, ಗೂಗಲ್‌ನ ಶೋಧ ನನ್ನ ನಿಲುವನ್ನು ತಿಳಿಸುವುದಿಲ್ಲ ಎಂದು ಹೇಳಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಗೂಗಲ್‌ಗೆ ಕಾನೂನು ನೋಟಿಸ್ ಕಳಿಸಲಾಗಿದೆ ಎಂದಿದ್ದಾರೆ.

ನಂತರ ಟ್ವಿಟ್ಟರ್ ಮೂಲಕ ತನ್ನ ಹೇಳಿಕೆ ನೀಡಿರುವ ಲಿಂಬಾವಳಿ, ಕನ್ನಡ ಹಾಗೂ ಕನ್ನಡಿಗರಿಗೆ ಗೂಗಲ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಕನ್ನಡಕ್ಕೆ 2,500 ವರ್ಷಗಳ ಇತಿಹಾಸವಿದೆ. ಕನ್ನಡ ಶತಮಾನಗಳಿಂದ ಕನ್ನಡಿಗರ ಹೆಮ್ಮೆಯಾಗಿದೆ ಎಂದವರು ತಿಳಿಸಿದ್ದಾರೆ. 

ಈ ಬಗ್ಗೆ ಹೇಳಿಕೆ ನೀಡಿರುವ ಗೂಗಲ್ ವಕ್ತಾರರು, ಶೋಧ ಎಲ್ಲಾ ಕಾಲದಲ್ಲೂ ಪರಿಪೂರ್ಣವಾಗಿರುವುದಿಲ್ಲ. ಕೆಲವೊಮ್ಮೆ ನಿರ್ದಿಷ್ಟ ಶೋಧಕ್ಕೆ ಅಚ್ಚರಿ ತರುವ ರೀತಿಯ ಉತ್ತರಗಳು ಸಿಗುತ್ತವೆ ಎಂದಿದ್ದಾರೆ.

ಇದು ಪರಿಪೂರ್ಣವಲ್ಲ. ಆದರೆ, ನಾವು ವಿಷಯ ಗಮನಕ್ಕೆ ಬಂದ ತಕ್ಷಣ ಕ್ರಮ ತೆಗೆದುಕೊಂಡಿದ್ದೇವೆ. ನಿರಂತರವಾಗಿ ನಮ್ಮ ಶೋಧ ವಿಧಾನ ಸುಧಾರಣೆ ಮಾಡುತ್ತೇವೆ. ಶೋಧದ ಫಲಿತಾಂಶ ಗೂಗಲ್ ನಿಲುವನ್ನು ತಿಳಿಸುವುದಿಲ್ಲ. ಇದರಿಂದ ಉಂಟಾಗಿರುವ ತಪ್ಪು ಕಲ್ಪನೆ ಹಾಗೂ ಭಾವನೆಗಳಿಗೆ ನೋವಾಗಿರುವುದಕ್ಕೆ ವಿಷಾದಿಸುವುದಾಗಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ  ಸರಣಿ ಟ್ವೀಟ್ ಮೂಲಕ ಗೂಗಲ್ ಬೇಜವಾಬ್ದಾರಿ ವರ್ತನೆ ಬಗ್ಗೆ ಆಕ್ಷೇಪಿಸಿದ್ದಾರೆ.

error: Content is protected !!