ದಾವಣಗೆರೆ ವಿವಿಯಲ್ಲಿ ಸರ್ವಜ್ಞ ಪೀಠ ಉದ್ಘಾಟನೆ ಮತ್ತು ಸರ್ವಜ್ಞನ ವಚನಗಳ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ
ದಾವಣಗೆರೆ, ನ.11- ಪ್ರತಿಯೊಂದು ವಿಚಾರಗಳ ಕುರಿತು ನೇರ, ನಿಷ್ಠೂರ ಮತ್ತು ಪ್ರಖರವಾದ ಅಧ್ಯಾತ್ಮಿಕ ಆಲೋಚನೆಗಳೊಂದಿಗೆ ಜನರಿಗೆ ಮುಟ್ಟುವಂತೆ ವಿಚಾರ ಗಳನ್ನು ಹೇಳಿದ ಸರ್ವಜ್ಞ, ಆದರ್ಶ ಸಮಾಜ ನಿರ್ಮಾಣದ ಪ್ರತಿಪಾದಕ ಎಂದು ಕಲ್ಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ. ಶಿವಗಂಗಾ ರುಮ್ಮಾ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾ ನಿಲಯ ಆವರಣದಲ್ಲಿ ಬುಧ ವಾರ ಏರ್ಪಡಿಸಿದ್ದ ಸರ್ವಜ್ಞ ಪೀಠ ಉದ್ಘಾಟನೆ ಮತ್ತು ಸರ್ವಜ್ಞನ ವಚನಗಳ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ತತ್ವ, ಸಿದ್ಧಾಂತಗಳನ್ನು ಮೀರಿ ವಾಸ್ತವದ ವಿಚಾರಗಳನ್ನು ನಿರ್ಭಿಡೆಯಿಂದ ಹೇಳಿದ ಸರ್ವಜ್ಞ ನಿಜವಾದ ಸಮಾಜವಾದಿ ಎಂದರು.
ಸರ್ವಜ್ಞನ ವಚನಗಳು ಆಧ್ಯಾತ್ಮಿಕ ಚಿಂತನೆಗಳಷ್ಟೇ ಅಲ್ಲ, ಹಲವಾರು ವೈಚಾರಿಕ ವಿಚಾರ ಗಳನ್ನು ತೆರೆದಿಡುತ್ತವೆ. ಸಮಾಜದ ಆಗು ಹೋಗುಗಳನ್ನು ಸಾಂದ ರ್ಭಿಕವಾಗಿ, ಸನ್ನಿವೇಶಕ್ಕೆ ತಕ್ಕಂತೆ ತಿಳಿಸಲಾಗಿದೆ. ಅದರಲ್ಲಿರುವ ಪ್ರತಿ ಯೊಂದು ವಿಚಾರವೂ ಸತ್ಯ ನಿಷ್ಠ, ಸುಂದರ ಸಮಾಜ ನಿರ್ಮಾಣದ ಪರಿಕಲ್ಪನೆಯನ್ನು ಹೊಂದಿವೆ ಎಂದು ತಿಳಿಸಿದರು.
ಮೌಲ್ಯಾಧಾರಿತ ಜೀವನ ಅತಿಮುಖ್ಯ. ಸಮಾಜದಲ್ಲಿ ಸಾ ಮಾಜಿಕ ಮೌಲ್ಯಗಳನ್ನು ಒಳ ಗೊಂಡು ಜೀವನ ನಡೆಸುವ ವ್ಯಕ್ತಿ ಎಲ್ಲರಿಗೂ ಮಾದರಿ. ಆಸ್ತಿ, ಅಂತಸ್ತು, ಐಶ್ವರ್ಯಕ್ಕಿಂತ ವ್ಯಕ್ತಿತ್ವ ಬಹಳ ಮುಖ್ಯ ಎನ್ನುವುದು ಸರ್ವಜ್ಞನ ವಚನಗಳ ಸಾರ. ವ್ಯಕ್ತಿಗೆ ವ್ಯಕ್ತಿತ್ವ ಮುಖ್ಯವೇ ಹೊರತು ಅವನ ಸಂಪತ್ತು ಅಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.
ಆಧುನಿಕ ಸಮಾಜದಲ್ಲಿ ಸಂಕಷ್ಟಗಳ ಸರಮಾಲೆ ಹೊತ್ತು ಬದುಕುತ್ತಿರುವ ಮನುಷ್ಯ ತನ್ನತನವನ್ನೇ ಕಳೆದುಕೊಂಡಿದ್ದಾನೆ. ಮನುಷ್ಯ ಸಂಬಂಧಿ ಬಾಂಧವ್ಯ, ಪ್ರೀತಿ ವಿಶ್ವಾಸಗಳಿಗಿಂತ ಹಣ ಗಳಿಕೆಯೇ ಮುಖ್ಯವಾಗಿದೆ. ಆದರೆ ಅದೆಲ್ಲವೂ ಕ್ಷಣಿಕ. ಸಂಬಂಧಗಳನ್ನು ಕಳೆದುಕೊಂಡ ಮೇಲೆ ವ್ಯಕ್ತಿ ನಶ್ವರನಾಗುತ್ತಾನೆ. ಒಬ್ಬಂಟಿತನ ಕಾಡಲು ಶುರುವಾಗುವುದು. ಕಷ್ಟವಿರಲಿ, ಖುಷಿ ಸಂಗತಿಗಳನ್ನೂ ಹಂಚಿಕೊಳ್ಳಲು ಯಾರೂ ಇಲ್ಲದಂತಾಗುತ್ತದೆ. ಅದೇ ಅವನ ಅಂತ್ಯಕ್ಕೆ ದಾರಿ ಎಂಬುದನ್ನು ವೈಜ್ಞಾನಿಕ ವಿಚಾರಗಳು ಈಗ ಖಚಿತಪಡಿಸಿದರೆ, ಅದನ್ನು ಸರ್ವಜ್ಞ 17ನೇ ಶತಮಾನದಲ್ಲಿಯೇ ಹೇಳಿದ್ದು, ಅವರು ಸರ್ವಕಾಲಕ್ಕೂ ಸಲ್ಲುವ ವಿಚಾರವಾದಿಯಾಗಿದ್ದಾರೆ ಎಂದು ವಿವರಿಸಿದರು.
ದಾವಿವಿ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಸರ್ವಜ್ಞ ಎಂಬುವವ ವ್ಯಕ್ತಿಯಲ್ಲ, ವಿಚಾರಗಳ ಶಕ್ತಿ. ಅದ್ಭುತ ಮನೋವಿಜ್ಞಾನಿ. ಅವನ ಸಾಮಾಜಿಕ ಚಿಂತನೆಗಳು, ವೈಚಾರಿಕ ಪ್ರಜ್ಞೆ, ಮಾನವೀಯ ಮೌಲ್ಯಗಳು ಪ್ರಸ್ತುತ ಸಮಾಜಕ್ಕೂ ನಿಕಟ ಎನಿಸುತ್ತವೆ. ಅವರು ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸರ್ವಜ್ಞನ ವಚನಗಳನ್ನು ಕುರಿತ ಸಂಶೋಧನಾ ಲೇಖನಗಳ ಪುಸ್ತಕವನ್ನು ಕುಲಪತಿಗಳು ಮತ್ತು ಪ್ರೊ. ಶಿವಗಂಗಾ ರುಮ್ಮಾ ಬಿಡುಗಡೆ ಮಾಡಿದರು. ಚಿತ್ರದುರ್ಗ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಎಚ್.ವಿಶ್ವನಾಥ ಅವರ ಪುಸ್ತಕ ಕುರಿತು ವಿವರಿಸಿದರು. ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ ಸ್ವಾಗತಿಸಿದರು. ಸಂಯೋಜನಾಧಿಕಾರಿ ಡಾ. ಜಯರಾಮಯ್ಯ ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಂಡಿಕೇಟ್ ಸದಸ್ಯೆ ವಿಜಯಲಕ್ಷ್ಮಿ ಹಿರೇಮಠ, ಕನ್ನಡ ಅಧ್ಯಯನ ವಿಭಾಗದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಕೆ ಉಪಸ್ಥಿತರಿದ್ದರು. ಡಾ. ಮಹಾಂತೇಶ ಪಾಟೀಲ ಅತಿಥಿಗಳನ್ನು ಪರಿಚಯಿಸಿದರು. ಡಾ. ವಿಜಯಕುಮಾರ ಎಚ್.ಜಿ. ವಂದಿಸಿದರು. ಡಾ. ಭೀಮಾಶಂಕರ ಜೋಶಿ ಕಾರ್ಯಕ್ರಮ ನಿರೂಪಿಸಿದರು.