ದಾವಣಗೆರೆ, ಜೂ.3- ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿ, ಜೀವಗಳನ್ನು ಉಳಿಸಲು ಆಗ್ರಹಿಸಿ ರಾಜ್ಯವ್ಯಾಪಿ ಎಲ್ಲಾ ಎಡ ಪಕ್ಷಗಳಿಂದ ಆನ್‍ಲೈನ್ ಜನಾಂದೋಲನದ ನಡೆಸಲಾಯಿತು.
ರಾಜ್ಯವ್ಯಾಪಿ ಎಡ ಪಕ್ಷಗಳ ಕರೆಯ ಮೇರೆಗೆ ದಾವಣಗೆರೆಯಲ್ಲಿ ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷವು ಆನ್‍ಲೈನ್ ಚಳುವಳಿ ನಡೆಸಿತು.
ದೇಶದಲ್ಲಿ ಕೋವಿಡ್ 2ನೇ ಅಲೆ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳು ಮುನ್ಸೂಚನೆ ನೀಡಿದ್ದರೂ ಯಾವುದೇ ಕ್ರಮ ಕೇಂದ್ರ ಸರ್ಕಾರ ಕೈಗೊಳ್ಳಲಿಲ್ಲ. ಬದಲಿಗೆ ದ್ವೇಷದ ರಾಜಕೀಯ ಮಾಡುತ್ತಾ ಕಾಲಹರಣ ಮಾಡಿದೆ ಎಂದು ಎಸ್‍ಯುಸಿಐ ಆಕ್ರೋಶ ವ್ಯಕ್ತಪಡಿಸಿದೆ.
ಆಸ್ಪತ್ರೆಗಳು, ಹಾಸಿಗೆ, ಐಸಿಯು, ವೆಂಟಿಲೇಟರ್, ಆಮ್ಲಜನಕ, ಔಷಧಿ, ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿಗಳ ತೀವ್ರ ಕೊರತೆ ದೇಶವನ್ನು ಕಾಡುತ್ತಿದೆ. ಲಕ್ಷಾಂತರ ಮಂದಿ ಸಾಯುತ್ತಿದ್ದಾರೆ. ಇದಲ್ಲದೇ 2ನೇ ಅಲೆಯ ಆರ್ಭಟ ನಡೆಯುತ್ತಿರುವಾಗಲೇ 3ನೇ ಅಲೆಯು ಅಪಾಯದ ಕರೆಗಂಟೆ ಹೊಡೆಯಲಾರಂಭಿಸಿದೆ. ಹಾಗಾಗಿ ಇನ್ನು ಹೆಚ್ಚಿನ ವಿನಾಶವನ್ನು ತಡೆಯಲು ಅಗತ್ಯ ಬಿದ್ದರೆ, ಮಿಲಿಟರಿಯನ್ನು ಬಳಸಿಕೊಂಡು ತಕ್ಷಣವೇ ಸಮಾರೋಪಾದಿಯಲ್ಲಿ ವಿವಿಧ ಕ್ರಮಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದೆ.
ನಗರಗಳ ಎಲ್ಲಾ ವಾರ್ಡ್‍ಗಳಲ್ಲಿ, ಪಟ್ಟಣ ಗಳಲ್ಲಿ, ಪಂಚಾಯಿತಿಗಳಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಿ. ಎಲ್ಲಾ ಆಸ್ಪತ್ರೆಗಳಲ್ಲೂ ಅವಶ್ಯಕ ಸಂಖ್ಯೆಯ ಹಾಸಿಗೆಗಳು, ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿಗಳಿರಬೇಕು ಮತ್ತು ಬೇಕಾದಷ್ಟು ಆಮ್ಲಜನಕ, ವೆಂಟಿಲೇಟರ್, ಔಷಧಿಗಳ ಉಚಿತ ಸರಬರಾಜು ಇರಬೇಕು. ಎಲ್ಲಾ ಸೈನಿಕರ ಆಸ್ಪತ್ರೆಗಳನ್ನು ನಾಗರಿಕರ ಚಿಕಿತ್ಸೆಗೆ ತೆರೆದಿಡಿ. ಸಾರ್ವತ್ರಿಕ ಉಚಿತ ಲಸಿಕೆ ನೀಡಿ. ಔಷಧಿ, ಆಮ್ಲಜನಕ ಇತ್ಯಾದಿಗಳ ಕಾಳ ಸಂತೆಯನ್ನು ತಡೆಗಟ್ಟಿ ಎಂದು ಆಗ್ರಹಿಸಿದೆ.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ, ಮಂಜುನಾಥ್ ಕುಕ್ಕುವಾಡ, ತಿಪ್ಪೇಸ್ವಾಮಿ ಅಣಬೇರು, ಮಧು ತೊಗಲೇರಿ, ಪರಶುರಾಮ್, ಭಾರತಿ, ಪುಷ್ಪಾ, ಸರಸ್ವತಿ, ಪ್ರಕಾಶ್, ಗುರು, ಶಶಿಕುಮಾರ್, ಮಮತ, ಕಾವ್ಯ ಇನ್ನಿತರರು ಪಾಲ್ಗೊಂಡಿದ್ದರು.