ಲೋಕಾರ್ಪಣೆಗೆ ಸಿದ್ಧ ನವೀಕೃತ ರೈಲ್ವೇ ನಿಲ್ದಾಣ

ದಾವಣಗೆರೆ, ಮಾ. 18- ಐದು ದಶಕಗಳ ನಂತರ  ದಾವಣಗೆರೆ ರೈಲ್ವೇ ನಿಲ್ದಾಣ ಸುಮಾರು 18.75 ಕೋಟಿ ರೂ.ಗಳ ವೆಚ್ಚದಲ್ಲಿ ನವೀಕೃತಗೊಂಡಿದ್ದು, ಇದೇ ಮಾ.27 ರಂದು ಲೋಕಾರ್ಪಣೆಗೆ ಸಿದ್ಧಗೊಂಡಿದೆ.

ಕರ್ನಾಟಕದ ಹೃದಯಭಾಗದಲ್ಲಿರುವ ದಾವಣಗೆರೆ ರೈಲ್ವೇ ನಿಲ್ದಾಣವು ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಅತಿ ಹೆಚ್ಚು ಆದಾಯ ತಂದು ಕೊಡುವ ಎರಡನೇ ನಿಲ್ದಾಣವಾಗಿದೆ. 

ನಿತ್ಯವೂ ಸುಮಾರು 30 ರೈಲುಗಳು ಇಲ್ಲಿ ಸಂಚರಿಸುತ್ತವೆ. ಸುಮಾರು 15 ಸಾವಿರ ಜನರು ನಿತ್ಯ ದಾವಣಗೆರೆಯಿಂದ ವಿವಿಧ ಭಾಗಗಳಿಗೆ ತೆರಳಲು ರೈಲುಗಳನ್ನು ಬಳಸುತ್ತಿದ್ದಾರೆ.

ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿ ನಗರ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದರೂ ರೈಲ್ವೇ ನಿಲ್ದಾಣ ಮಾತ್ರ ನವೀಕರಣ ಭಾಗ್ಯ ಕಂಡಿರಲಿಲ್ಲ.

ಈ ಹಿಂದೆ ಅವೈಜ್ಞಾನಿಕವಾಗಿ ನಿರ್ಮಾಣ ಗೊಂಡಿದ್ದ ರೈಲ್ವೇ ನಿಲ್ದಾಣ ರಸ್ತೆ ಹಾಗೂ  ಪ್ಲಾಟ್ ಫಾರಂಗಿಂತ ಕೆಳಭಾಗದಲ್ಲಿದ್ದ ಕಾರಣ ಮಳೆಗಾಲ ದಲ್ಲಿ ನಿಲ್ದಾಣದಲ್ಲಿ ನೀರು ತುಂಬಿಕೊಂಡು ಪ್ರಯಾಣಕರಿಗೆ ಸಮಸ್ಯೆ ಉಂಟಾಗುತ್ತಿತ್ತು.

ಮೈಸೂರು, ಹುಬ್ಬಳ್ಳಿ, ಬಳ್ಳಾರಿ ನಿಲ್ದಾಣ ಗಳನ್ನು ಕಂಡ ಸ್ಥಳೀಯರು ನಮ್ಮ ನಿಲ್ದಾಣವೂ ಎಂದು ಈ ರೀತಿ ಉನ್ನತ ದರ್ಜೆಯ ಸ್ಥಾನ ಪಡೆಯಲಿದೆ ಎಂದು ಪ್ರಶ್ನಿಸಿಕೊಳ್ಳುವಂತಾಗಿತ್ತು.

ಆದರೆ ಇದೀಗ ಇದು ನಮ್ಮ ದಾವಣಗೆರೆ ರೈಲ್ವೇ ನಿಲ್ದಾಣ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಷ್ಟು ಸುಂದರವಾಗಿ ನವೀಕೃತಗೊಂಡಿದೆ. ಅಷ್ಟೇ ಅಲ್ಲ, ನಿಲ್ದಾಣದ ಒಳಭಾಗದಲ್ಲಿ ವಿಶ್ರಾಂತಿ ಕೊಠಡಿ, ಕ್ಯಾಂಟೀನ್, ಶೌಚಾಲಯಗಳು ಹೈಟೆಕ್ ಸ್ಪಷ್ಟ ಪಡೆದಿವೆ. ನಿಲ್ದಾಣದ ಹೊರಭಾಗದಲ್ಲಿ ಕಾಂಪೌಂಡ್ ಗೋಡಿ ನಿಲ್ದಾಣದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ರಾತ್ರಿ ವೇಳೆ ಲೈಟಿಂಗ್ ವ್ಯವಸ್ಥೆ ಕಲ್ಪಿಸಿರುವುದು ನೋಡಗರನ್ನು ಮತ್ತಷ್ಟು ಆಕರ್ಷಿಸಲಿದೆ.

ಪಾರ್ಕಿಂಗ್ ಜಾಗ ವಿಸ್ತರಣೆಯಾಗಲಿದೆ: ರೈಲ್ವೇ ನಿಲ್ದಾಣದ ಮುಂಭಾಗ ಇರುವ ಗಉಪ ವಿಭಾಗಾಧಿಕಾರಿಗಳ ಕಚೇರಿ ಬಳಿಯ 1600 ಚದರಡಿ ಜಾಗ ಇಲಾಖೆಗೆ ದೊರೆತಿದ್ದು, ಮುಂದಿನ ಹಂತದಲ್ಲಿ ಈ ಜಾಗವನ್ನು  ಪಾರ್ಕಿಂಗ್ ಸ್ಥಳವನ್ನಾಗಿ ವಿಸ್ತರಿಸಲಿದೆ.

ಸಂಸದರ ವಿಶೇಷ ಕಾಳಜಿ: ನಿಲ್ದಾಣದ ನವೀಕರಣ ಕಾಮಗಾರಿ ಆರಂಭದಿಂದ ಇದೀಗ ಲೋಕಾರ್ಪಣೆಗೊಳ್ಳುವ ಹಂತದವರೆಗೆ ಸಂಸದ ಜಿ.ಎಂ. ಸಿದ್ದೇಶ್ವರ ಅವರ  ವಿಶೇಷ ಕಾಳಜಿ ತೋರಿಸುತ್ತಿದ್ದಾರೆ ಎನ್ನಬಹುದು. 

2 ಬಾರಿ ಕೇಂದ್ರ ರೈಲ್ವೇ ಸಚಿವರೊಂದಿಗೆ ಕಾಮಗಾರಿ ವೀಕ್ಷಿಸಿರುವ ಸಂದರು, ಮತ್ತೊರೆಡು ಬಾರಿ ತಾವೇ ಪ್ರತ್ಯೇಕವಾಗಿ ಕಾಮಗಾರಿ ವೀಕ್ಷಿಸಿ ಅಧಿಕಾರಿಗಳಿಗೆ ಚಾಟಿ ಬೀಸಿ ಕಾಮಗಾರಿ ಶೀಘ್ರ ಪೂರ್ಣಗೊಳ್ಳುವಂತೆ ಮಾಡಿದ್ದ ಹಿನ್ನೆಲೆಯಲ್ಲಿ ಶೀಘ್ರ ಸಾರ್ವಜನಿಕ ಸೇವೆಗೆ ನಿಲ್ದಾಣ ಲಭ್ಯವಾಗಲಿದೆ.

ಉದ್ಘಾಟನೆಗೂ ಮುನ್ನವೇ ಪ್ರಸಿದ್ಧಿ: ನಿಲ್ದಾಣ ಇನ್ನೂ ಉದ್ಘಾಟನೆಗೊಳ್ಳುವ ಮೊದಲೇ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಿದ್ಧಿ ಪಡೆಯುತ್ತಿದೆ.

ನಿಲ್ದಾಣದ ಮುಂಭಾಗದಲ್ಲಿರುವ `ಐ ಲವ್‌ಯೂ ದಾವಣಗೆರೆ’ ಎಂಬ ಲೋಗೋ ಹಾಗೂ ಬೃಹತ್ ಧ್ವಜ ಸ್ಥಂಭ ಮತ್ತು ನಿಲ್ದಾಣ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಜನತೆ, ನಮ್ಮ ದಾವಣಗೆರೆ ನಮ್ಮ ಹೆಮ್ಮೆ ಎಂಬ ಶೀರ್ಷಿಕೆಯಡಿ ಹಂಚಿಕೊಳ್ಳುತ್ತಿದ್ದಾರೆ.

ಸದ್ಯ ಗಡಿಯಾರ ಕಂಬದ ರಸ್ತೆಯ ರೈಲ್ವೇ ದ್ವಾರದ ಬಳಿ ಕೆಲವೊಂದು ಅಂಗಡಿಗಳು ಅಡಚಣೆಯಾಗಿವೆ. ಈ ಅಂಗಡಿಗಳನ್ನು ತೆರವು ಮಾಡಿಸಿಕೊಡುವಂತೆ ರೈಲ್ವೆ ಇಲಾಖೆ ಪಾಲಿಕೆಗೆ ಮನವಿ ಮಾಡಿದೆ. ಆದರೆ ಪಾಲಿಕೆ ಈಗಾಗಲೇ ಮಳಿಗೆ ಮಾಲೀಕರಿಗೆ ಕರಾರು ಮಾಡಿಕೊಟ್ಟಿದ್ದು, ಮುಗಿಯುವರೆಗೂ ಕಾದು, ನಂತರ ಕರಾರು ನವೀಕರಣ ಮಾಡದೆ, ಮಳಿಗೆ ತೆರವುಗೊಳಿಸಲು ನಿರ್ಧರಿಸಿದೆ.


ಲೋಕಾರ್ಪಣೆಗೆ ಸಿದ್ಧ ನವೀಕೃತ ರೈಲ್ವೇ ನಿಲ್ದಾಣ - Janathavaniಕೆ.ಎನ್. ಮಲ್ಲಿಕಾರ್ಜುನ ಮೂರ್ತಿ,
[email protected]

error: Content is protected !!