ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಬಾಲಕರ ನಿಲಯದಲ್ಲಿ ‘ತರಳಬಾಳು ಕೋವಿಡ್ ಕೇರ್ ಸೆಂಟರ್’ ಉದ್ಘಾಟನೆ
3ನೇ ಮಹಾಯುದ್ಧದೋಪಾದಿಯಲ್ಲಿ ಅಪ್ಪಳಿಸಿದ ಕೊರೊನಾ
– ತರಳಬಾಳು ಜಗದ್ಗುರುಗಳ ಆತಂಕ
ಸಿರಿಗೆರೆ, ಜೂ.2- ಕೋವಿಡ್ ಎರಡನೇ ಅಲೆ ರೈತ, ವೈದ್ಯರು, ಸಾಹಿತಿ, ಶಿಕ್ಷಕರು, ಮಕ್ಕಳು ಹೀಗೆ ಎಲ್ಲಾ ವರ್ಗದ ಜನರ ಬದುಕನ್ನು ಕಸಿದುಕೊಂಡಿದೆ. ಕೋವಿಡ್-19 ಕೇರ್ ಸೆಂಟರ್ಗೆ ಭೇಟಿ ನೀಡುವುದರಿಂದ ನಿಮ್ಮ ಆರೋಗ್ಯವೂ ಸಹ ಸುಧಾರಿಸುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಇಲ್ಲಿನ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಬಾಲಕರ ನಿಲಯದಲ್ಲಿ ‘ತರಳಬಾಳು ಕೋವಿಡ್ ಕೇರ್ ಸೆಂಟರ್’ ಉದ್ಘಾಟಿಸಿ ಅವರು ಮಾತನಾಡಿದರು.
ಆರೈಕೆ ಕೇಂದ್ರಕ್ಕೆ ಸೇರ್ಪಡೆಗೊಳ್ಳುವುದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತೆ. ಅಲ್ಲಿ ವೈದ್ಯರು, ಶುಶ್ರೂಷಕರು ಆತ್ಮಸ್ಥೈರ್ಯ ತುಂಬುವುದರ ಜತೆಯಲ್ಲಿ ಆರೋಗ್ಯದ ಕಾಳಜಿಗೆ ಸ್ಪಂದಿಸುತ್ತಾರೆ. ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಸಮಾಜಮುಖಿ ಕೆಲಸದ ವೇಳೆಯಲ್ಲಿ ಬಿಡುವು ಮಾಡಿಕೊಂಡು ಕೋವಿಡ್-19 ಸೋಂಕಿತರ ಆರೈಕೆಗಾಗಿ ಪೋನ್ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿ, ಧೈರ್ಯ ತುಂಬುತ್ತಿರುವುದು ಸಂತೋಷ ತಂದಿದೆ ಎಂದರು.
ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅನಿರೀಕ್ಷಿತ ಭೇಟಿ ನೀಡಿದ ಗೃಹ ಸಚಿವರು ಹಾಗೂ ಕೃಷಿ ಸಚಿವರು ತರಳಬಾಳು ಕೋವಿಡ್-19 ಸೆಂಟರ್ನ ಉದ್ಘಾಟನೆ ಮಾಡುವುದರೊಂದಿಗೆ ಸೋಂಕಿತರಿಗೆ ಧೈರ್ಯ, ಆತ್ಮವಿಶ್ವಾಸ ಬಂದಿದೆ ಎಂದರೆ ತಪ್ಪಾಗಲಾರದು ಎಂದರು.
ಇಬ್ಬರೂ ಸಚಿವರಲ್ಲಿ ಗೃಹ ಸಚಿವರು ಎಲ್ಲರನ್ನೂ ಒಂದು ರೀತಿ ಬಂಧನದಲ್ಲಿಟ್ಟಿದ್ದಾರೆ. ಆದರೆ ಕೃಷಿ ಸಚಿವರು ಕೋವಿಡ್ ಸಮಯದಲ್ಲಿ ಧಾರಾಳವಾಗಿ ಎಲ್ಲಾ ಕೆಲಸ ಮಾಡಿಕೊಳ್ಳಲು ಮುಕ್ತ ಅವಕಾಶ ಮಾಡಲು ಕೊಟ್ಟಿದ್ದಾರೆ ಎಂದು ಭಾವಿಸುತ್ತೇವೆ. ಕೊರೊನಾ ನಗರ, ಗ್ರಾಮೀಣ ಎಲ್ಲಾ ಸಾರ್ವಜನಿಕರ ಬದುಕನ್ನು ಕಸಿದುಕೊಳ್ಳುವುದರ ಜೊತೆಗೆ ಮಕ್ಕಳನ್ನು ತಬ್ಬಲಿಗಳನ್ನಾಗಿ ಮಾಡಿದೆ. ಇದು ಒಂದು ರೀತಿ 3ನೆಯ ಮಹಾಯುದ್ದದೋಪಾದಿಯಲ್ಲಿ ಬಂದು ಅಪ್ಪಳಿಸಿದೆ ಎಂದು ಅಭಿಪ್ರಾಯಿಸಿದರು.
ಎಲ್ಲಾ ರಾಷ್ಟ್ರಗಳಿಗೆ ಕೊರೊನಾ ಒಂದೇ ವೈರಿಯಾಗಿದೆ. ನಮ್ಮ ಶಿವ ಸೈನ್ಯದ ಶಿಷ್ಯರು ಮೊಟ್ಟ ಮೊದಲು ತರಳಬಾಳು ಸೇವಾ ಸಮಿತಿ ರಚಿಸಿ ಕೋವಿಡ್ ಸೋಂಕಿತರಿಗೆ ಊಟದ ವ್ಯವಸ್ಥೆಯನ್ನು ಕಡಿಮೆ ದಿವಸಗಳಿಗೆ ಮಾಡಿಕೊಂಡಿದ್ದರು. ಅದನ್ನು ಸದಾಕಾಲ ಅವರನ್ನು ಆರೈಕೆ ಮಾಡುವ ತನಕ ಹಸಿವನ್ನು ನೀಗಿಸಲಿ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡುತ್ತಾ, ತರಳಬಾಳು ಶ್ರೀಗಳು ಕೊರೊನಾ ರೋಗಿಗಳ ಆರೋಗ್ಯದ ಕಡೆ ಗಮನವಿರಿಸಿ ಕೋವಿಡ್ ಸೋಂಕಿತರು, ವೈದ್ಯರು, ಪೋಲಿಸರು, ಆಶಾಕಾರ್ಯತೆರ್ಯರಿಗೆ ಪ್ರತಿನಿತ್ಯ ದಾಸೋದ ವ್ಯವಸ್ಥೆ ಮಾಡಿದ್ದಾರೆ. ವಿಶೇಷವಾಗಿ ಸೋಂಕಿತರ ಆರೋಗ್ಯದ ಕಡೆ ಗಮನವಿರುಸುವುದರ ಜೊತೆಯಲ್ಲಿ ಸದಾ ಅವರ ಆರೋಗ್ಯದ ಬಗ್ಗೆ ವಿಚಾರಿಸಿ, ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಹರಿಹರ, ದಾವಣಗೆರೆ, ಸಿರಿಗೆರೆ, ಬೆಂಗಳೂರು ಕಡೆಗಳಲ್ಲಿ ಸುಮಾರು ದಿನನಿತ್ಯ 500ರಿಂದ 800 ಸೋಂಕಿತರಿಗೆ ಹಾಗೂ ಸೇವಾ ಕಾರ್ಯಕರ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸಮಿತಿಯ ಸದಸ್ಯರುಗಳು ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಮೈನ್ಸ್ ಸಂಸ್ಥೆಯಿಂದ ಕೊಡುಗೆ ನೀಡಿದ ಪರಿಕರಗಳನ್ನು ನೀಡಿ ಉದ್ಘಾಟಿಸಲಾಯಿತು. ಆಸ್ಪತ್ರೆಯ ಹೊರಭಾಗದ ಕಾಂಪೌಂಡ್ಗೆ 50ಲಕ್ಷದ ಅನುದಾನದಡಿಯಲ್ಲಿ ಗುದ್ದಲಿ ಪೂಜೆ, ಅಂಬುಲೆನ್ಸ್ ವಾಹನಕ್ಕೆ ಚಾಲನೆ ನೀಡಿದರು. ಹೊಸದಾಗಿ ತರಳಬಾಳು ಕೋವಿಡ್ ಕೇರ್ ಸೆಂಟರ್ ಉದ್ಘಾಟನೆಗೊಂಡಿತು. ಕೇರ್ ಸೆಂಟರ್ನಲ್ಲಿ ಒಟ್ಟು 60ಜನರ ತಪಾಸಣೆಗೆ ಸಿದ್ಧವಾಗಿದೆ.
ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಶಾಸಕ ಎಂ.ಚಂದ್ರಪ್ಪ, ಸಂಸದ ಎ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಡಾ.ಕೆ.ನಂದಿನಿ ದೇವಿ, ತಹಶೀಲ್ದಾರ್ ವೆಂಕಟೇಶಯ್ಯ, ಕಂದಾಯ ಅಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು, ಗ್ರಾಮಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳು, ಆಶಾಕಾರ್ಯಕತೆಯರು ಇದ್ದರು.
ಇಆರ್ಎಂ ಗ್ರೂಪ್ಸ್ ಮಾಲಿಕರಾದ ಆರ್.ಪ್ರವೀಣ್ ಚಂದ್ರ ಇವರ ಕೊಡುಗೆ: ರೆಫ್ರಿಜರೇಟರ್, ಜನರೇಟರ್, 20ಹಾಸಿಗೆ, ಇಸಿಜಿ ಉಪಕರಣ, ಆಕ್ಸಿಜನ್ ಕಾನ್ರಂಟ್ರೇಟರ್, 8ಪಲ್ಸ್ಆಕ್ಸೀಮೀಟರ್, ಗೀಸರ್, ಡ್ರಿಂಕಿಂಗ್ ವಾಟರ್ ಹೀಟರ್, ಬೆಡ್ಶೀಟ್ 100, ಸರ್ಜಿಕಲ್ ಹ್ಯಾಂಡ್ ಗ್ಲೌಸ್ 2000, ಸ್ಯಾನಿಟೈಸರ್ ಗಳನ್ನು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ.