ಜಗಳೂರು : ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎಸ್. ವಿ. ರಾಮಚಂದ್ರಪ್ಪ ಕರೆ
ಜಗಳೂರು, ಜೂ.2- ತಾಲ್ಲೂಕಿನಲ್ಲಿ ಈ ವರ್ಷ ಉತ್ತಮವಾಗಿ ಮಳೆಯಾಗುತ್ತಿದ್ದು, ರೈತರಿಗೆ ಬಿತ್ತನೆ ಬೀಜ ಮತ್ತು ಗೊಬ್ಬರದ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಎಸ್.ವಿ. ರಾಮಚಂದ್ರಪ್ಪ ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಇಂದು ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕೇಂದ್ರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ರೈತರು ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ಬಿತ್ತನೆ ಮಾಡಬಾರದು. ಅಧಿಕೃತವಾದ ಮತ್ತು ಗುಣಮಟ್ಟದ ಬಿತ್ತನೆ ಬೀಜಗಳನ್ನು ಉಪಯೋಗಿಸಬೇಕು. ಬೀಜ ಮಾರಾಟಗಾರರು ಹಾಗೂ ಕಂಪನಿಯವರು ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕರು ಎಚ್ಚರಿಕೆ ನೀಡಿದರು.
ಸಾಕಷ್ಟು ಪ್ರಮಾಣದಲ್ಲಿ ಬೀಜ, ಗೊಬ್ಬರ ದಾಸ್ತಾನು ಮಾಡಲು ಕೃಷಿ ಇಲಾಖೆ ಕ್ರಮ ಕೈಗೊಂಡಿದ್ದು, ರೈತರು ಬಿತ್ತನೆ ಬೀಜ ಹಾಗೂ ಗೊಬ್ಬರ ದೊರಕುವ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ರೈತರು ಮುಖಕ್ಕೆ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಬಿತ್ತನೆ ಬೀಜ ಮತ್ತು ಗೊಬ್ಬರವನ್ನು ಖರೀದಿ ಮಾಡಬೇಕು . ಅಧಿಕೃತವಾಗಿ ಕೃಷಿ ಇಲಾಖೆಯಿಂದ ವಿತರಣೆ ಮಾಡುವ ಬಿತ್ತನೆ ಬೀಜವನ್ನು ಉಪಯೋಗಿಸಬೇಕು. ರೈತರು ಕಡ್ಡಾಯವಾಗಿ ಅಕ್ಕಡಿ ಬೆಳೆಯಾಗಿ ಔಡಲ ಮತ್ತು ತೊಗರಿ ಬಿತ್ತನೆ ಮಾಡಬೇಕು. ಆಗ ಮಾತ್ರ ರೈತ ಸ್ವಾವಲಂಬಿಯಾಗಲು ಸಹಕಾರಿಯಾಗಲಿದೆ ಎಂದು ಶಾಸಕರು ತಿಳಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸಲು ಮಾತನಾಡಿ, ತಾಲ್ಲೂಕಿನಲ್ಲಿ ಪೂರ್ವ ಮುಂಗಾರಿನಲ್ಲಿ 95 ಮಿ.ಮೀ ಮಳೆಯಾಗಬೇಕಿತ್ತು. ಇದೀಗ 105 ಮಿ.ಮೀ. ಮಳೆಯಾಗಿದ್ದು, ಶೇ. 10 ರಷ್ಟು ಹೆಚ್ಚು ಮಳೆಯಾಗಿದೆ. ಒಟ್ಟು 54 ಸಾವಿರ ಹೆಕ್ಟೇರ್ ಪ್ರದೇಶದ ಕೃಷಿ ಜಮೀನಿನಲ್ಲಿ ಬಿತ್ತನೆಗೆ ಗುರಿ ಹೊಂದಲಾಗಿದೆ. ತಾಲ್ಲೂಕಿನ ವಿವಿಧೆಡೆ 10 ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರು ಅಗತ್ಯ ದಾಖಲೆ ಸಲ್ಲಿಸಿ ಬೀಜ, ರಸಗೊಬ್ಬರ ಪಡೆಯಬಹುದು ಎಂದರು.
ಮೆಕ್ಕೆಜೋಳ 1375 ಕ್ವಿಂಟಾಲ್, ಹೈ. ಜೋಳ 50 ಕ್ವಿಂಟಾಲ್ , ತೊಗರಿ 160 ಕ್ವಿಂಟಾಲ್, ಸೂರ್ಯಕಾಂತಿ 30 ಕ್ವಿಂಟಾಲ್, ಶೇಂಗಾ 3000 ಕ್ವಿಂಟಾಲ್, ಸಜ್ಜೆ 50 ಕ್ವಿಂಟಾಲ್ ದಾಸ್ತಾನು ಮಾಡಲಾಗಿದೆ. ವಿವಿಧ ರಸಗೊಬ್ಬರ ಒಟ್ಟು 14,400 ಮೆಗಾ ಟನ್ ಬೇಡಿಕೆಯಿದ್ದು, ಡಿಎಪಿ 1200 ಮೆಗಾ ಟನ್, ಯೂರಿಯಾ 3250 ಮೆಗಾ ಟನ್, ಪೊಟ್ಯಾಷ್ 260, ವಿವಿಧ ಸಂಯುಕ್ತ ಗೊಬ್ಬರಗಳು 1800 ಮೆಗಾ ಟನ್,ಒಟ್ಟು 6510 ಮೆಗಾ ಟನ್ ಗೊಬ್ಬರ ದಾಸ್ತಾನಿಕರಿಸಲಾಗಿದೆ. ರಸಗೊಬ್ಬರ ಮತ್ತು ಬೀಜದ ಕೊರತೆಯಿಲ್ಲ ಎಂದು ಮಾಹಿತಿ ನೀಡಿದರು.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮತ್ತು ಎಪಿಎಂಸಿ ಅಧ್ಯಕ್ಷ ರೇಣುಕಾನಂದ, ಉಪಾಧ್ಯಕ್ಷ ಗುರುಮೂರ್ತಿ, ಬಿಜೆಪಿ ಮಂಡಲ ಅಧ್ಯಕ್ಷ ಮಹೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ವೇಣು ಗೋಪಾಲ್ ರೆಡ್ಡಿ, ಪ.ಪಂ. ಅಧ್ಯಕ್ಷ ಆರ್. ತಿಪ್ಪೇಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.