ಕೋವಿಡ್ ಕೇಂದ್ರಗಳಲ್ಲಿ ಮನೆಯಂತಹ ಸೌಲಭ್ಯ

ಸ್ವಚ್ಛತೆ, ಉತ್ತಮ ಊಟ, ಚಿಕಿತ್ಸೆ ಒದಗಿಸಲು ಸಚಿವ ಭೈರತಿ ಸೂಚನೆ

ದಾವಣಗೆರೆ, ಜೂ. 1 –  ಸೋಂಕಿತ ರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸುವ ಜೊತೆಗೆ ಅಲ್ಲಿ ಒದಗಿಸುವ ಊಟ, ಉಪಹಾರ, ವೈದ್ಯಕೀಯ ನೆರವು, ಸ್ವಚ್ಛತೆ ಸೇರಿ ಎಲ್ಲ ಸೌಲಭ್ಯಗಳು ಮನೆಗಿಂತಲೂ ಉತ್ತಮ ಗುಣಮಟ್ಟದ್ದಾಗಿರಬೇಕು ಎಂದು ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಅವರು ತಿಳಿಸಿದ್ದಾರೆ.

ಕೊರೊನಾ ಕುರಿತು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಲಾದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸಬೇಕು ಎಂದು ಕಳೆದ ಬಾರಿ ಕೈಗೊಂಡ ಸಭೆಯಲ್ಲಿ ಸೂಚನೆ ನೀಡಲಾಗಿತ್ತು.  ಆದರೆ ಇನ್ನೂ 2068 ಜನ ಹೋಂ ಐಸೋಲೇಷನ್‍ನಲ್ಲಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.  

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಸದ್ಯ 1200 ಜನರನ್ನು ದಾಖಲಿಸಲಾಗಿದೆ. ಇಲ್ಲಿ ದೈಹಿಕ ಶಿಕ್ಷಣ ಹಾಗೂ ಯೋಗ ಶಿಕ್ಷಣ ನೀಡುವುದರ ಜೊತೆಗೆ ಸೌಲಭ್ಯ ಇರುವ ಕಡೆಗಳಲ್ಲಿ ಟಿ.ವಿ. ಸಂಪರ್ಕ ಕಲ್ಪಿಸಿ, ಮನರಂಜನೆಗೂ ವ್ಯವಸ್ಥೆ ಮಾಡಲಾಗಿದೆ.  ಇನ್ನು ಮುಂದೆ ಹೋಂ ಐಸೋಲೇಷನ್‍ಗೆ ಅವಕಾಶ ನೀಡದೆ, ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.  

ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕಳೆದ ವಾರ 1815 ಜನ ಹೋಂ ಐಸೋಲೇಷನ್‍ನಲ್ಲಿ ಇದ್ದರು, ಇದೀಗ 739 ಜನ ಮಾತ್ರ ಇದ್ದಾರೆ, ಉಳಿದವರನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ದಾಖಲಿಸಲಾಗಿದೆ.  ಗ್ರಾಮಗಳ ವ್ಯಾಪ್ತಿಯಲ್ಲಿ ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದ್ದು, ಸ್ಯಾನಿಟೈಸ್ ಕೂಡ ಮಾಡಿಸಲಾಗುತ್ತಿದೆ ಎಂದರು.  

ಸಚಿವ ಭೈರತಿ ಮಾತನಾಡಿ, ಗ್ರಾಮಗಳಲ್ಲಿ ಈಗಲೂ ಜನರು ಮಾಸ್ಕ್ ಸಮರ್ಪಕವಾಗಿ ಧರಿಸುತ್ತಿಲ್ಲ, ಅಲ್ಲಲ್ಲಿ ಗುಂಪು ಗುಂಪಾಗಿ ಸಂಚರಿಸುತ್ತಿರುವು ದನ್ನು ನಾನು ಗಮನಿಸಿದ್ದೇನೆ.  ಹೀಗಾಗಿ ಎಲ್ಲ ಗ್ರಾ.ಪಂ. ಕೋವಿಡ್ ನಿಯಂತ್ರಣ ಕಾರ್ಯಪಡೆಗಳು ಸಕ್ರಿಯವಾಗಿ ತೊಡ ಗಿಸಿಕೊಳ್ಳಬೇಕು. ಕೋವಿಡ್ ತಡೆ ಗಟ್ಟುವ ಕುರಿತು ಗ್ರಾಮಗಳಲ್ಲಿ ಡಂಗುರ ಹಾಕುವ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದರು.

ವೈದ್ಯರು, ಸಿಬ್ಬಂದಿಗಳ ನೇಮಕ : ರಾಜ್ಯ ಮಟ್ಟದಲ್ಲಿ ವೈದ್ಯರು ಹಾಗೂ ತಜ್ಞ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ದಾವಣಗೆರೆ ಜಿಲ್ಲೆಗೆ ರಾಜ್ಯ ಮಟ್ಟದಿಂದ 23 ಎಂಬಿಬಿಎಸ್ ವೈದ್ಯರು ಹಾಗೂ 19 ತಜ್ಞ ವೈದ್ಯರನ್ನು ನಿಯುಕ್ತಿ ಮಾಡಲಾಗಿದ್ದು, ಜಿಲ್ಲಾ ಮಟ್ಟದಲ್ಲಿಯೂ 24 ವೈದ್ಯರು ಹಾಗೂ 34 ಶುಶ್ರೂಷಕರ ನೇಮಕ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ.  ಶೀಘ್ರದಲ್ಲಿಯೇ ಜಿಲ್ಲೆಯಲ್ಲಿ ವೈದ್ಯರು ಹಾಗೂ ತಜ್ಞ ವೈದ್ಯರು, ಶುಶ್ರೂಷಕರ ಕೊರತೆ ನೀಗುವ ಮೂಲಕ ಸಮರ್ಪಕ ವೈದ್ಯಕೀಯ ಸೌಲಭ್ಯ ಜಿಲ್ಲೆಗೆ ದೊರೆಯಲಿದೆ ಎಂದು ಸಚಿವ ಬಸವರಾಜ ಹೇಳಿದರು.

ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಚನ್ನಗಿರಿ ಶಾಸಕ ಹಾಗೂ ಕೆಎಸ್‍ಎಸ್‍ಡಿಎಲ್ ಅಧ್ಯಕ್ಷರೂ ಆಗಿರುವ ಶಾಸಕ ಮಾಡಾಳ್ ವಿರುಪಾಕ್ಷಪ್ಪ, ಹೊನ್ನಾಳಿ  ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಲಿಡ್ಕರ್‌ ಅಧ್ಯಕ್ಷರೂ ಆಗಿರುವ ಶಾಸಕ ಪ್ರೊ. ಲಿಂಗಣ್ಣ, ಪಾಲಿಕೆ ಮೇಯರ್   ಎಸ್.ಟಿ. ವೀರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮತ್ತಿತರರು ಉಪಸ್ಥಿತರಿದ್ದರು.

error: Content is protected !!