ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಅವರಿಗೆ ಕಾಂಗ್ರೆಸ್ ಮುಖಂಡ ಡಿ.ಬಸವರಾಜ್ ಪ್ರಶ್ನೆ
ದಾವಣಗೆರೆ, ಜೂ.2 – ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಜಿಲ್ಲೆಯ ಜನ ಸಾಲು ಸಾಲಾಗಿ ಕೊರೊನಾ ಎಂಬ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಾಸ್ತವ್ಯ ಮಾಡಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ವಾರಕ್ಕೊಮ್ಮೆ ಭೇಟಿ ನೀಡುತ್ತಿರುವುದು ಪಿಕ್ನಿಕ್ ಅಲ್ಲದೇ ಮತ್ತೇನು? ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ವಕ್ತಾರ ಡಿ. ಬಸವರಾಜ್ ಅವರು ಪ್ರಶ್ನಿಸಿದ್ದಾರೆ.
ಭೈರತಿ ಅವರು ಜಿಲ್ಲೆಯ ಅಭಿವೃದ್ಧಿ, ಆಡಳಿತದ ವಿಚಾರದಲ್ಲಿ ಇದುವರೆಗೂ ಗಂಭೀರವಾಗಿ ತೆಗೆದು ಕೊಂಡಿಲ್ಲ. ಸಿಎಂ ಯಡಿಯೂರಪ್ಪ ಅವರು ಉಸ್ತು ವಾರಿ ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ 15 ದಿನಗಳ ಕಾಲ ವಾಸ್ತವ್ಯ ಮಾಡಿ ಕೊರೊನಾ ಉಲ್ಬಣಿ ಸದಂತೆ ಎಚ್ಚರ ವಹಿಸಲು ಆದೇಶಿಸಿದ್ದರೂ ಸಹ ಸಿಎಂ ಮಾತಿಗೆ ಅವರ ಸಂಪುಟದ ಸದಸ್ಯರೇ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ ಎಂದು ದೂರಿದ್ದಾರೆ.
ಕೋವಿಡ್ನಿಂದ ಬಡಜನರು ಜಿಲ್ಲೆಯಲ್ಲಿ ಬೆಡ್, ಆಕ್ಸಿಜನ್ ಬೆಡ್ ಮತ್ತು ವೆಂಟಿಲೇಟರ್ ಬೆಡ್ಗಾಗಿ ಕಣ್ಣೀರಿಡುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯದೆ ನೂರಾರು ಜನರು ಸಾವಿನ ಮನೆ ಸೇರಿದ್ದಾರೆ. ಇಂತಹ ಸಂಕಷ್ಟ ಸಮಯದಲ್ಲಿ ಬಡ ಜನರ ಸಾವಿನ ಲೆಕ್ಕವನ್ನು ಸರಿಯಾಗಿ ನೀಡದೇ ಸುಳ್ಳು ಅಂಕಿ-ಅಂಶಗಳನ್ನು ಜಿಲ್ಲಾಡಳಿತ ಪ್ರಕಟಣೆ ಮಾಡುತ್ತಿದೆ.
ಕೋವಿಡ್ ಲಸಿಕೆ ಕೊರತೆ ಇದ್ದು, ಬೆಳಗಿನ ಜಾವ ಲಸಿಕಾ ಕೇಂದ್ರಗಳಿಗೆ ಹೋದರೂ ಸಹ ಲಸಿಕೆ ದೊರೆಯದೇ ಮನೆಗೆ ವಾಪಾಸ್ ಆಗುತ್ತಿದ್ದಾರೆ. ಇಂತಹ ಸತ್ಯ ಸಂಗತಿಗಳನ್ನು ಅರಿಯಬೇಕಾದರೆ ಸಚಿವರು ತಿಂಗಳಿಗೆ 15 ದಿನ ಜಿಲ್ಲೆಯಲ್ಲಿ ವಾಸ್ತವ್ಯ ಮಾಡಿದಾಗ ಸತ್ಯದ ದರ್ಶನವಾಗುತ್ತದೆ ಎಂದು ಬಸವರಾಜ್ ತಿಳಿಸಿದ್ದಾರೆ.
ಕಳೆದ 20 ವರ್ಷಗಳಲ್ಲಿ ನನ್ನಷ್ಟು ಯಾರು ಜಿಲ್ಲೆಯಲ್ಲಿ ಭೇಟಿ ಮಾಡಿಲ್ಲ. ಜಿಲ್ಲೆಯ ಅಭಿವೃದ್ಧಿಯನ್ನೂ ಸಹ ಮಾಡಿಲ್ಲ ಎಂದು ಭೈರತಿ ಬಸವರಾಜ್ ಅವರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಇತಿಹಾಸ ಸಚಿವರಿಗೆ ತಿಳಿಯದು. ದಾವಣಗೆರೆಯ ನೈಜ ಅಭಿವೃದ್ಧಿ ಆಗಿದ್ದು, ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಆಡಳಿತದ ಅವಧಿಯಲ್ಲಿ ಜಿಲ್ಲೆಯಲ್ಲಿ ಕುಂದುವಾಡ ಕೆರೆ, ಆಶ್ರಯ ಮನೆಗಳು, ನಗರದ ಅಷ್ಟ ದಿಕ್ಕುಗಳಲ್ಲಿ ಸಿಮೆಂಟ್ ರಸ್ತೆಗಳು, ಡಾಂಬರೀಕರಣ ಸೇರಿದಂತೆ ಅಭಿವೃದ್ಧಿ ಪರ್ವವೇ ನಡೆದಿತ್ತು. ನಂತರ ಸಿದ್ದರಾಮಯ್ಯನವರ ಸಂಪುಟದಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ, ಗಾಜಿನ ಮನೆ, ಮೇಲ್ಸೇತುವೆ ಸೇರಿದಂತೆ ಸಾವಿರಾರು ಕೋಟಿ ರೂ ಅನುದಾನ ತಂದು ನಗರ ಹಾಗೂ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದು ಡಿಬಿ ಸಚಿವರಿಗೆ ತಿರುಗೇಟು ನೀಡಿದ್ದಾರೆ.