ಸಚಿವ ಭೈರತಿ ಅವರ ಮಾತಿಗೆ ಕಾಂಗ್ರೆಸ್ ಯುವ ಮುಖಂಡ, ಕಾರ್ಯಕರ್ತರ ಅಸಮಾಧಾನ
ದಾವಣಗೆರೆ, ಜೂ.1- ಎರಡನೇ ಲಸಿಕೆಗಾಗಿ ಜನ ನಿಂತಿರುವುದನ್ನು ಕಂಡು ವಿಷಯ ಅರಿಯದೇ ಜಿಲ್ಲಾ ಉಸ್ತುವಾರಿ ಸಚಿವರು ವಿನಾಕಾರಣ ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಮೇಲೆ ರೇಗಾಡಿ ಕಾಂಗ್ರೆಸ್ ಯುವ ಮುಖಂಡ, ಕಾರ್ಯಕರ್ತರಿಂದ ತೀವ್ರ ಪ್ರತಿರೋಧ ಎದುರಿಸುವ ಮೂಲಕ ಮುಖಭಂಗ ಅನುಭವಿಸಿದ ಘಟನೆ ನಗರದಲ್ಲಿ ಇಂದು ಬೆಳಿಗ್ಗೆ ನಡೆಯಿತು.
ನಿಟುವಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಜನದಟ್ಟಣೆ ಕಡಿಮೆ ಮಾಡಲೆಂಬ ಸದುದ್ದೇಶದಿಂದ ಸುತ್ತಮುತ್ತಲಿನ ಐದೂ ವಾರ್ಡುಗಳ ಸದಸ್ಯರು, ಬಿಜೆಪಿ-ಕಾಂಗ್ರೆಸ್ ಮುಖಂಡರು ಪರಸ್ಪರ ಚರ್ಚಿಸಿ, ಶಾಲೆಯವರೊಂದಿಗೆ ಮಾತನಾಡಿ, ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವ್ಯವಸ್ಥಿತವಾಗಿ 2-3 ಲಸಿಕಾ ದಿನಗಳನ್ನು ಕಳೆದಿದ್ದರು. ಐದೂ ವಾರ್ಡ್‍ಗಳಿಂದ ಸಾವಿರಾರು ಜನರು ಈವರೆಗೆ ಲಸಿಕೆ ಹಾಕಿಸಿಕೊಂಡಿದ್ದರೂ ಆಗದ ಸಮಸ್ಯೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ಭೈರತಿ ಅವರಿಗೆ ಏನು ಕಂಡಿತೋ ಪಕ್ಕದಲ್ಲೇ ಇದ್ದ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರೂ ಆದ ಮಾಜಿ ಮೇಯರ್ ಡಿ.ಎಸ್.ಉಮಾ ಪ್ರಕಾಶ್ ಅವರ ಮೇಲೆ ರೇಗಾಡಿದ್ದಾರೆ.
ಅಷ್ಟರಲ್ಲಿ ಅದನ್ನೆಲ್ಲಾ ಗಮನಿಸಿದ ಸ್ಥಳದಲ್ಲೇ ಇದ್ದ ಕಾಂಗ್ರೆಸ್ ಯುವ ಮುಖಂಡ ಗಣೇಶ ಹುಲ್ಮನಿ ಅವರು ಉಮಾ ಪ್ರಕಾಶ್ ಅವರ ನೆರವಿಗೆ ಧಾವಿಸಿದ್ದಾರೆ. ಇಷ್ಟೊಂದು ಜನರಿಗೆ ನಿತ್ಯವೂ ಲಸಿಕೆ ಹಾಕಿಸಲು ನಾವೆಲ್ಲಾ ಸದಸ್ಯರು, ಕಾಂಗ್ರೆಸ್-ಬಿಜೆಪಿಯವರು ಪಕ್ಷಾತೀತವಾಗಿ ಬೆಳಿಗ್ಗೆ 6 ಗಂಟೆಯಿಂದ ಬಂದು, ಲಸಿಕೆ ಕಾರ್ಯ ಮುಗಿಯುವ ಮಧ್ಯಾಹ್ನದವರೆಗೂ ಇದ್ದು, ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತೇವೆ. ಯಾವಾಗಲೋ ಒಮ್ಮೆ ಜಿಲ್ಲೆಗೆ ಬರುವ ನಿಮಗೆ ದಾವಣಗೆರೆ ಮತ್ತು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿವಿಲ್ಲದೇ ಹೀಗೆಲ್ಲಾ ರೇಗಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಪಕ್ಷಾತೀತವಾಗಿ ಸಾವಿರಾರು ಜನರಿಗೆ ವ್ಯವಸ್ಥಿತವಾಗಿ ಲಸಿಕೆ ಹಾಕುತ್ತಿರುವ ನಿಟುವಳ್ಳಿ ಭಾಗದ ಪಾಲಿಕೆ ಸದಸ್ಯರು, ಮುಖಂಡರು, ಕಾರ್ಯಕರ್ತರು, ಆರೋಗ್ಯ ಕೇಂದ್ರದ ವೈದ್ಯರು, ಸಿಬ್ಬಂದಿ ಬಗ್ಗೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು. ಜನರೊಂದಿಗೂ ಲಸಿಕೆ ಹಾಕಿಸಿಕೊಳ್ಳಿ, ಇತರರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಿ ಎಂದು ಹೇಳಿ, ತಮ್ಮ ವಾಹನದತ್ತ ಹೆಜ್ಜೆ ಹಾಕಿದರು.
ಆದರೆ, ಸಚಿವ ಭೈರತಿ ಬಸವರಾಜ ಅವರು, ವ್ಯವಸ್ಥಿತ ಲಸಿಕಾ ಕಾರ್ಯದ ಬಗ್ಗೆ ಒಂದು ಮೆಚ್ಚುಗೆ ಮಾತನಾಡದೇ, ಉಮಾ ಪ್ರಕಾಶ್‌ರ ಅವರ ಮೇಲೆ ರೇಗಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಉಮಾ ಪ್ರಕಾಶ್, ಇಲ್ಲಿನ ವಾಸ್ತವ ಸ್ಥಿತಿ ಅರಿಯಲಿ ಎಂಬುದಾಗಿ ನಿಮ್ಮನ್ನು ಇಲ್ಲಿಗೆ ಕರೆಸಿದ್ದೇವೆ. 5 ವಾರ್ಡ್ ಜನರಿಗೆ ಒಂದೇ ಕಡೆ ಲಸಿಕೆ ನೀಡುವುದು ಸುಲಭವಲ್ಲ. ಆದರೆ, ಇಲ್ಲಿನ ವೈದ್ಯರು, ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಅಚ್ಚುಕಟ್ಟಾಗಿ ಲಸಿಕೆ ಕಾರ್ಯ ಸಾಗಿದೆ. ಜನರೂ ಸಹ ಶಾಂತಿಯುತವಾಗಿ ಸರದಿಯಲ್ಲಿ ನಿಂತು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ವಿನಾಕಾರಣ ತಮ್ಮ ಬಗ್ಗೆ ಹೀಗೆಲ್ಲಾ ಮಾತನಾಡಬೇಡಿ ಎಂಬುದಾಗಿ ತಿರುಗೇಟು ನೀಡಿದರು.
ಯಾವ ದಿನ ಯಾವ ಲಸಿಕೆ ನೀಡಲಾಗು ತ್ತದೆ, ಎಷ್ಟು ಲಸಿಕೆ ಪೂರೈಸಲಾಗುತ್ತಿದೆ ಎಂಬ ಮಾಹಿತಿ ಸರಿಯಾಗಿ ಇರುವುದಿಲ್ಲ. ತಡವಾಗಿ ಗೊತ್ತಾಗುವುದರಿಂದ ಲಸಿಕೆಗೆ ಟೋಕನ್ ನೀಡುವುದು ಕಷ್ಟವಾಗುತ್ತದೆ. ನಸುಕಿನ 4.30ಕ್ಕೆ ಜನ ಬಂದು ನಿಲ್ಲುತ್ತಾರೆ. 45 ವರ್ಷ ಮೇಲ್ಪಟ್ಟರು, ವಯೋವೃದ್ಧರು, ಅನಾರೋಗ್ಯಕ್ಕೆ ತುತ್ತಾದವರು, ಅಂಗವಿಕಲರು ಬಂದು ನಿಲ್ಲುತ್ತಾರೆ. ನಾವೂ ಸಹ ಬೆಳಿಗ್ಗೆ 5ಕ್ಕೆ ಬಂದು, ವ್ಯವಸ್ಥೆ ಗಮನಿಸುತ್ತೇವೆ. 32, 33, 34, 35 ಹಾಗೂ 36ನೇ ವಾರ್ಡ್ ಈ ಕೇಂದ್ರದ ವ್ಯಾಪ್ತಿಗೆ ಬರುತ್ತವೆ. ಸಹಸ್ರಾರು ಸಂಖ್ಯೆ ಜನ ಇದ್ದಾರೆ. ಮೊದಲು ಎಷ್ಟು ಲಸಿಕೆ ಕೊಡಲಾಗುತ್ತದೆಂಬ ಮಾಹಿತಿ ಕೊಡಿಸಿ. ನಮ್ಮ ಭಾಗದ ಸಮಸ್ಯೆ ನಮಗೆ ಗೊತ್ತಿದೆ. ವಾರ್ಡ್ ಮಟ್ಟದಲ್ಲಿ ಲಸಿಕೆ ಕಾರ್ಯ ಕೈಗೊಳ್ಳುವಂತೆ ಮನವಿ ಮಾಡಿದ್ದರೂ ಯಾವೊಬ್ಬ ಅಧಿಕಾರಿಗಳೂ ಸ್ಪಂದಿ ಸುತ್ತಿಲ್ಲ ಎಂದು ಉಮಾ ಪ್ರಕಾಶ್ ಕಿಡಿ ಕಾರಿದರು.
ತಕ್ಷಣವೇ ಸಚಿವ ಭೈರತಿ ಬಸವರಾಜ್ ಪಕ್ಕದಲ್ಲೇ ಇದ್ದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರನ್ನೂ ತರಾಟೆಗೆ ತೆಗೆದುಕೊಂಡರು. ಅದು ಆರೋಗ್ಯ ಇಲಾಖೆ ಅಧಿಕಾರಿಗಳ ಕೆಲಸ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಅದರಿಂದ ಮತ್ತಷ್ಟು ಸಿಟ್ಟಾದ ಉಮಾ ಪ್ರಕಾಶ್, ಅವರಿವರ ಮೇಲೆ ಹೇಳುತ್ತಾ ಹೋದರೆ ಸಮಸ್ಯೆ ಬಗೆಹರಿಯದು. ಎಲ್ಲರಿಗೂ ಲಸಿಕೆ ಬೇಕೇ ಬೇಕು. ವಾರ್ಡ್ ಮಟ್ಟದಲ್ಲಿ ಲಸಿಕೆ ಕೊಡಲು ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದರು. ಅದೇ ವೇಳೆ ಸಚಿವರ ರೇಗಾಟ ಗಮನಿಸಿದ ಕಾಂಗ್ರೆಸ್ ಯುವ ಮುಖಂಡ ಗಣೇಶ್ ಹುಲ್ಮನಿ ಧಾವಿಸಿ, ಉಮ್ಮಕ್ಕನವರ ಬಗ್ಗೆ ಹಾಗೆಲ್ಲಾ ಮಾತನಾಡಬೇಡಿ ಎಂದರು.
ಲಸಿಕೆ ಕಾರ್ಯ ವ್ಯವಸ್ಥಿತವಾಗಿ ನಡೆಯಲು ನಾವೆಲ್ಲರೂ ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದೇವೆ. ಪೂರ್ವಾಪರ ಗೊತ್ತಿಲ್ಲದೇ ಹೀಗೆ ಜವಾಬ್ಧಾರಿಯುತ ಸಚಿವರು ಮಾತನಾಡುವುದು ಸರಿಯಲ್ಲ. ನಮ್ಮ ಜಿಲ್ಲೆಯಲ್ಲೇ ಉಸ್ತುವಾರಿ ಸಚಿವರು ವಾಸ್ತವ್ಯ ಮಾಡಿ ದರೆ ಜಿಲ್ಲೆಯ ಸಮಸ್ಯೆ ಅರಿವಾಗುತ್ತದೆ ಎಂದು ಉಮಾಪ್ರಕಾಶ್ ಪರ ಗಣೇಶ್ ಹುಲ್ಮನಿ ಧ್ವನಿ ಎತ್ತಿದರು.
ಮುಂದಿನ ವಾರ ದಿಢೀರ್ ಭೇಟಿ: ಜಿಲ್ಲಾ ಸಚಿವರು, ಮುಂದಿನ ವಾರ ದಿಢೀರ್ ಭೇಟಿ ನೀಡುತ್ತೇನೆ. ಲಸಿಕೆ ವ್ಯವಸ್ಥೆ ಸರಿ ಹೋಗದಿದ್ದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳುವೆ. ಉಮಾ ಪ್ರಕಾಶ್ ಅವರೇ ಹೇಳಿದಂತೆ ವಾರ್ಡ್ ಮಟ್ಟದಲ್ಲಿ ಲಸಿಕೆ ಕಾರ್ಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿ, ತಮ್ಮ ವಾಹನದತ್ತ ಹೆಜ್ಜೆ ಹಾಕಿದರು.
ಮೇಯರ್ ಎಸ್.ಟಿ.ವೀರೇಶ್ ಮತ್ತು ಇತರರು ಸಚಿವರೊಂದಿಗೆ ಇದ್ದರು.