15 ದಿನಗಳಲ್ಲಿ ಆಕ್ಸಿಜನ್ ಜನರೇಟರ್ ಪ್ಲಾಂಟ್ ಕಾರ್ಯಾರಂಭ

ಹರಿಹರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್

ಹರಿಹರ, ಜೂ.1- ನಗರದ ಸಾರ್ವ ಜನಿಕ ಆಸ್ಪತ್ರೆಯ ಆವರಣದಲ್ಲಿ ರೋಗಿ ಗಳ ಚಿಕಿತ್ಸೆಗಾಗಿ ಇನ್ನು 15 ದಿನಗಳಲ್ಲಿ ಆಕ್ಸಿಜನ್ ಜನರೇಟರ್ ಪ್ಲಾಂಟ್‌ ಕಾರ್ಯಾರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.

ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ತಮ್ಮ ತಂದೆ ದಿವಂಗತ ಜಿ.ಎಂ. ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ನವರ ಸ್ಮರಣಾರ್ಥ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ಆಕ್ಸಿಜನ್ ಜನರೇಟರ್ ಪ್ಲಾಂಟ್‌ ನಿರ್ಮಾಣಕ್ಕೆ ಗುದ್ದಲಿ ಪೂಜೆ  ನೆರವೇರಿಸಿ, ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಸಂಸದ ಜಿ.ಎಂ‌. ಸಿದ್ದೇಶ್ವರ ಅವರು ಹರಿಹರ, ಹರಪನಹಳ್ಳಿ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ  ಸುಮಾರು 1.80 ಕೋಟಿ ರೂ.ಗಳ ವೆಚ್ಚದಲ್ಲಿ ಆಕ್ಸಿಜನ್ ಜನರೇಟರ್ ಪ್ಲಾಂಟನ್ನು ತಮ್ಮ ತಂದೆ, ತಾಯಿ ಹೆಸರಿನಲ್ಲಿ ಮಾಡಿಸಲು ಮುಂದಾಗಿ, ತಮ್ಮ ಸಹೋದರ ಲಿಂಗರಾಜ್‌ ಅವರ ಪುತ್ರ ಜಿ.ಎಲ್. ರಾಜೀವ್ ಮೂಲಕ ಪೂಜೆ ಸಲ್ಲಿಸಿ ಕಾಮಗಾರಿಗೆ  ಚಾಲನೆ ನೀಡಿದ್ದಾರೆ. ಸರ್ಕಾರದ ವತಿ ಯಿಂದ ಅವರ ಕುಟುಂಬದವರಿಗೆ ಅಭಿ ನಂದನೆಗಳು ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ರಾಜ್ಯದ ಆಡಳಿತವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಇನ್ನೂ ಎರಡು ವರ್ಷಗಳ ಕಾಲ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡುವ ಮಾತಿಲ್ಲ. ಮುಂದಿನ ಚುನಾವಣೆ ಸಹ ಅವರ ಮುಖಂಡತ್ವದಲ್ಲಿ ನಡೆಯುತ್ತದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ದೆಹಲಿ ಪ್ರಯಾಣ ಬೆಳೆಸಿರುವ ಮಾಹಿತಿ ನನಗೆ ಇಲ್ಲ ಎಂದು ಸಚಿವರು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತ ನಾಡಿ, ಆಕ್ಸಿಜನ್ ಜನರೇಟರ್ ಪ್ಲಾಂಟ್ ಕಾಮಗಾರಿಗೆ ತನ್ನ ಸಹೋದರ ಲಿಂಗರಾಜ್ ಅವರ ಪುತ್ರ ಜಿ.ಎಲ್. ರಾಜೀವ್ ಅವರ ಕೈಯಲ್ಲಿ ಪೂಜೆ ಮಾಡಿಸಿ ಚಾಲನೆ ನೀಡಲಾಗಿದೆ. ಪಶ್ಚಿಮ ಬಂಗಾಳದ ಕಂಪನಿಯ ಜೊತೆಗೆ ಲಿಂಗರಾಜ್ ಮಾತನಾಡಿ ಈ ವ್ಯವಸ್ಥೆಗೆ ಮುಂದಾಗಿದ್ದು, ಈಗ ಸದ್ಯದಲ್ಲಿ ಹರಿಹರ, ಹರಪನಹಳ್ಳಿ, ಚಿತ್ರದುರ್ಗ ನಗರಗಳಲ್ಲಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ನಗರಗಳಿಂದ ಬೇಡಿಕೆ ಬಂದರೆ ಅಲ್ಲಿಯೂ ಕೂಡ ಪ್ಲಾಂಟ್ ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯಪ್ಪ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ನಾಗರಾಜ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್. ಲಕ್ಷ್ಮಿ, ತಾಲ್ಲೂಕು ಆರೋಗ್ಯ ಅಧಿಕಾರಿ .ಡಾ ಚಂದ್ರಮೋಹನ್, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಹೆಚ್. ಹನುಮನಾಯ್ಕ್, ತಾ.ಪಂ. ಇಒ ಗಂಗಾಧರನ್, ಲಿಂಗರಾಜ್, ನಗರಸಭೆ ಉಪಾಧ್ಯಕ್ಷ ಬಾಬುಲಾಲ್,  ಸದಸ್ಯರಾದ ಅಶ್ವಿನಿ ಕೃಷ್ಣ, ವಿಜಯಕುಮಾರ್, ರಜನೀಕಾಂತ್, ನೀತಾ ಮೆಹರ್ವಾಡೆ ಹಾಗೂ ಬಿಜೆಪಿ ಪಕ್ಷದ ಮುಖಂಡರು ಹಾಜರಿದ್ದರು. 

error: Content is protected !!