ದಾವಣಗೆರೆ, ಮೇ 31- ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಗೆ ನುಗ್ಗಿದ ಜನತೆ, ಸಿಕ್ಕೀತೋ ಇಲ್ಲವೋ ಎಂಬಂತೆ ಖರೀದಿ, ಏಕ ಕಾಲದಲ್ಲಿಯೇ ಲೋಡಿಂಗ್, ಅನ್ ಲೋಡಿಂಗ್, ಟ್ರಾಫಿಕ್ ಜಾಮ್, ಹೈರಾಣಾದ ಜನತೆ…
ಸೋಮವಾರ ಮುಂಜಾನೆ ದಾವಣಗೆರೆ ಮಾರುಕಟ್ಟೆಯಲ್ಲಿ ಕಂಡು ಬಂದ ಪ್ರಮುಖ ದೃಶ್ಯಗಳಿವು. ಮಾರುಕಟ್ಟೆಯನ್ನೊಮ್ಮೆ ನೋಡಿದರೆ ಜನರು ವಸ್ತುಗಳನ್ನು ಖರೀದಿಸುತ್ತಿದ್ದಾರೋ ಅಥವಾ ಕೊರೊನಾ ಸೋಂಕು ಖರೀದಿಸುತ್ತಿದ್ದಾರೋ ಎಂದನಿಸಿದ್ದು ನಿಜ.
ಕಳೆದ ಒಂದು ವಾರದ ನಂತರ ಅಗತ್ಯ ವಸ್ತುಗಳ ಖರೀದಿಗೆ ಮುಂಜಾನೆ 6 ರಿಂದ ಮಧ್ಯಾಹ್ನ 12ರವರೆಗೆ ಅನುಮತಿ ನೀಡಿದ್ದರಿಂದ ಜನ ಮಾರುಕಟ್ಟೆಗೆ ದಾಂಗುಡಿ ಇಟ್ಟಿದ್ದರು. ಪರಿಣಾಮ ಮಾರ್ಕೆಟ್‌ನಲ್ಲಿ ಜನಜಾತ್ರೆಯೇ ನೆರೆದಿತ್ತು. ಸಮಾಜಿಕ ಅಂತರ ಮರೆಯಾಗಿತ್ತು.
ಕೊರೊನಾ ಇದೆ ಎಂಬುದನ್ನೇ ಮರೆತಂತೆ ಜನರು ವಸ್ತುಗಳ ಖರೀದಿಗೆ ಮುಗಿ ಬಿದ್ದಿದ್ದರು. ಒಂದು ಕಡೆ ಕಿರಾಣಿ ಅಂಗಡಿಗಳ ಮಾಲೀಕರು ಹೋಲ್ ಸೇಲ್ ಅಂಗಡಿಗಳಿಗೆ ಮುಗಿ ಬಿದ್ದಿದ್ದರೆ, ರಿಟೇಲ್ ಖರೀದಿ ದಾರರೂ ಸಹ ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಖರೀದಿಸಲು ಮುಂದಾಗಿದ್ದ ರಿಂದ ಅವರೂ ಸಹ ಹೋಲ್ ಸೇಲ್ ಖರೀದಿದಾರರೇ ಆಗಿದ್ದರು.
ಏಕಕಾಲದಲ್ಲಿಯೇ ಲೋಡಿಂಗ್-ಅನ್‌ಲೋಡಿಂಗ್ : ಇತ್ತ ಹೋಲ್ ಸೇಲ್ ವ್ಯಾಪಾರಿಗಳು ವಸ್ತುಗಳನ್ನು ಅನ್‌ಲೋಡಿಂಗ್ ಮಾಡಿಕೊಳ್ಳುತ್ತಿದ್ದರು. ಮತ್ತೊಂಡೆಗೆ ಖರೀದಿಸಿದವರು ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳಿಗೆ ವಸ್ತುಗಳನ್ನು ಲೋಡ್ ಮಾಡುತ್ತಿದ್ದರು. ಈ ಎರಡೂ ಕಾರ್ಯಗಳು ಏಕಕಾಲದಲ್ಲಿಯೇ ನಡೆಯುತ್ತಿದ್ದವು. ಪರಿಣಾಮ ವಾಹನಗಳ ಸಂಖ್ಯೆ ಹೆಚ್ಚಾಗಿ ಜನರು ಮಾರುಕಟ್ಟೆಯಿಂದ ಹೊರ ಬರಲು ಸಾಕಷ್ಟು ಪರಿಶ್ರಮ ಪಡಬೇಕಾಗಿತ್ತು.
ನೋ ಸ್ಟಾಕ್ : ಹಲವು ದಿನಗಳಿಂದ ಮಾರಲು ಬೇಕಾದ ವಸ್ತುಗಳನ್ನು ತರಿಸಲು ಸಾಧ್ಯವಾಗದ ಕಾರಣ ಬಹುತೇಕ ಅಂಗಡಿಗಳಲ್ಲಿ ದಿನಸಿ ವಸ್ತುಗಳು ಖಾಲಿಯಾಗಿದ್ದವು. ಬೇಕಾದ ವಸ್ತುಗಳನ್ನು ಜನರು ಹುಡುಕಿಕೊಂಡು ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
ದರ ಏರಿಕೆ: ಇದ್ದ ಕಡಿಮೆ ದಾಸ್ತಾನಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲ ಅಂಗಡಿ ಮಾಲೀಕರು ಹೆಚ್ಚು ದರಕ್ಕೆ ಮಾರಾಟ ಮಾಡಿದ ಪ್ರಸಂಗಗಳು ನಡೆದವು. ದರ ಹೆಚ್ಚಾದರೂ ಪರವಾಗಿಲ್ಲ. ಸಿಕ್ಕರೆ ಸಾಕು ಎಂಬಂತೆ ಗ್ರಾಹಕರು ಖರೀದಿಗೆ ಮುಗಿ ಬಿದ್ದಿದ್ದರು.
ಎಣ್ಣೆ ಅಂಗಡಿಗೆ ಸರದಿ ಸಾಲು: ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಅಡುಗೆ ಎಣ್ಣೆ ವಿತರಿಸುವ ಅಂಗಡಿಗಳ ಮುಂದೆ ಎಣ್ಣೆಗಾಗಿ ಗ್ರಾಹಕರು ಸರದಿ ಸಾಲಿನಲ್ಲಿ ನಿಂತು ಖರೀದಿಸುತ್ತಿದ್ದುದು ಕಂಡು ಬಂತು. ಮನೆಗಳಿಗೆ ಬಳಕೆ ಮಾಡುವವರು ಹಾಗೂ ದಿನಸಿ ಅಂಗಡಿಗಳಿಗೆ ಕೊಂಡೊಯ್ಯುವವರು ಏಕಕಾಲದಲ್ಲಿಯೇ ಆಗಮಿಸಿದ್ದರಿಂದ ಸರದಿಯಲ್ಲಿ ನಿಲ್ಲಬೇಕಾಗಿತ್ತು. ಚಿಪ್ಸ್, ಕುರ್ ಕುರೆ ಯಂತಹ ವಸ್ತುಗಳನ್ನು ಮಾರುವ ಅಂಗಡಿಗಳ ಮುಂದೆಯೂ ಗ್ರಾಹಕರು ಸರದಿಯಲ್ಲಿ ನಿಂತಿದ್ದುದು ಕಂಡು ಬಂತು.
ಬ್ಯಾರಿಕೇಡ್ ಸಮಸ್ಯೆ: ಕಳೆದೊಂದು ವಾರ ಪೂರ್ತಿ ಲಾಕ್‌ಡೌನ್ ಮಾಡಿದ್ದರಿಂದ ಅನಗತ್ಯ ಓಡಾಟ ನಿಯಂತ್ರಿಸಲು ಮಾರುಕಟ್ಟೆ ಪ್ರದೇಶದ ಬಹುತೇಕ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಆದರೆ ಸೋಮವಾರ ರೇಣುಕಾಮಂದಿರದ ಪಕ್ಕದ ರಸ್ತೆ, ಬಿನ್ನಿ ಕಂಪನಿ ರಸ್ತೆ ಸೇರಿದಂತೆ ಬೆರಳೆಣಿಕೆ ರಸ್ತೆಗಳಲ್ಲಿ ಮಾತ್ರ ಬ್ಯಾರಿಕೇಡ್ ತೆರವು ಮಾಡಲಾಗಿತ್ತು. ಪರಿಣಾಮ ಜನತೆ ಊರೆಲ್ಲಾ ಸುತ್ತಿಕೊಂಡು ಮಾರುಕಟ್ಟೆ ಪ್ರವೇಶಿಸಬೇಕಾಗಿತ್ತು. ಇನ್ನು ಹೊರ ಬರುವಾಗಂತೂ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ತೀವ್ರ ಸಮಸ್ಯೆ ಎದುರಿಸಿದರು. ಸಾಮಗ್ರಿ ಹೊತ್ತುಕೊಂಡು ಕಿಲೋಮೀಟರ್ ದೂರ ಕೆಲವರು ನಡೆದು ಸಾಗಬೇಕಾಗಿತ್ತು. ಒಂದಡೆ ಜನರ ಹಾಗೂ ವಾಹನ ದಟ್ಟಣೆ ಸಮಸ್ಯೆ, ಮತ್ತೊಂದೆಡೆ ಅಡ್ಡಡ್ಡ ಬ್ಯಾರಿಕೇಡ್‌ಗಳು. ಒಟ್ಟಾರೆ ಮಾರುಕಟ್ಟೆ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ತಹಶೀಲ್ದಾರ್ ಭೇಟಿ: ತಹಶೀಲ್ದಾರ್ ಗಿರೀಶ್ ಮುಂಜಾನೆ ಕೆ.ಆರ್. ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿದರು. ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹಾರ ಮಾಡುವಂತೆ ಜನತೆಗೆ ಮನವಿ ಮಾಡಿದರು.
ಮಾರುಕಟ್ಟೆ ಅಷ್ಟೇ ಅಲ್ಲದೆ ನಗರದ ಪ್ರಮುಖ ರಸ್ತೆಗಳಲ್ಲೂ ಬೆಳಿಗ್ಗೆ ತರಕಾರಿ ಹಾಗೂ ಹಣ್ಣಿನ ಗಾಡಿಗಳು ಸಾಲುಗಟ್ಟಿ ನಿಂತಿದ್ದವು. ಜನತೆ ಅಂತರ ಮರೆತು ಖರೀದಿಸಿದರು. 12 ಗಂಟೆಯಾಗುತ್ತಲೇ ಜನರು ಮನೆಗಳಿಗೆ ಮರಳತೊಡಗಿದರು.
ಮಂಗಳವಾರ ಹಾಗೂ ಬುಧವಾರ ಸಂಪೂರ್ಣ ಲಾಕ್‌ಡೌನ್ ಇದ್ದು, ಗುರುವಾರ ಮತ್ತೆ 6 ರಿಂದ 12ರವರೆಗೆ ಖರೀದಿಗೆ ಅವಕಾಶ ನೀಡಲಾಗಿದೆ.