ದಾವಣಗೆರೆ, ಮೇ 30- ನರೇಂದ್ರ ಮೋದಿ ಅವರಂತಹ ಶ್ರೇಷ್ಠ ಪ್ರಧಾನಿಯನ್ನು ದೇಶಕ್ಕೆ ನೀಡಿದ ಕೀರ್ತಿ ಬಿಜೆಪಿ ಪಕ್ಷದ ಹೆಗ್ಗಳಿಕೆ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಬಣ್ಣಿಸಿದರು.
ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಕೇಂದ್ರದಲ್ಲಿ ಯಶಸ್ವಿಯಾಗಿ ಏಳು ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಮಹಾನಗರ ಪಾಲಿಕೆಯ 33 ನೇ ವಾರ್ಡ್ನಲ್ಲಿ ಇಂದು ಏರ್ಪಾಡಾಗಿದ್ದ ಕೋವಿಡ್ ಸಂಬಂಧಿತ ವಿವಿಧ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಹಲವಾರು ಗಮನಾರ್ಹ ಬದಲಾವಣೆಗಳಾಗಿವೆ. ನಮ್ಮ ದೇಶದ ಕೀರ್ತಿ ಜಗತ್ತಿನಾದ್ಯಂತ ಪಸರಿಸಿದೆ. ಭಾರತ ದೇಶ ವಿಶ್ವದಲ್ಲಿ ತಲೆಯೆತ್ತಿ ನಿಲ್ಲುವಂತೆ ಮಾಡಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಆರಂಭದಲ್ಲಿ ಜನರು ಲಸಿಕೆ ಪಡೆಯಲು ಉದಾಸೀನತೆ ತೋರಿ ಸಿದ್ದೇ ಇಂದು ಲಸಿಕೆಗಾಗಿ ಹಾಹಾಕಾರ ಪಡುವಂತಾಗಿದೆ. ಆದರೂ ಸರ್ಕಾರ ದಿಂದ ವ್ಯವಸ್ಥಿತವಾಗಿ ಲಸಿಕೆಗಳನ್ನು ಸರಬರಾಜು ಮಾಡಲಾಗುತ್ತಿದೆ. ಎಲ್ಲರಿಗೂ ಲಸಿಕೆ ಸಿಗಲಿದೆ. ಸಾರ್ವಜನಿಕರು ತಾಳ್ಮೆ ಕಳೆದುಕೊಳ್ಳದೇ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಲು ಶಾಸಕರು ಮನವಿ ಮಾಡಿದರು.
ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ದಾನ ಮತ್ತು ಸೇವೆಯು ಪ್ರಧಾನ ಸ್ಥಾನವನ್ನು ಪಡೆದಿವೆ. ಕೆ.ಎಂ. ಸುರೇಶ್ ಮತ್ತು ಕೆ.ಎಂ. ವೀರೇಶ್ ಸಹೋದರರು ಸಾಮಾಜಿಕ ಕಳಕಳಿಯ ಸೇವಾ ಚಟುವಟಿಕೆಗಳ ಮೂಲಕ ನರೇಂದ್ರ ಮೋದಿಯವರ 7 ವರ್ಷಗಳ ಸಾಧನೆ ಯನ್ನು ಜನರಿಗೆ ತಿಳಿಸುತ್ತಿದ್ದಾರೆ. ಇದು ಇತರ ರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿ ಸ್ವಾಮಿ ಮಾತನಾಡಿ, ಕೊರೊನಾ ಸಾಂಕ್ರಾಮಿಕ ರೋಗವನ್ನು ಪ್ರಧಾನಿ ಮೋದಿ ಅವರು ನಿರ್ವಹಿಸಿದ ರೀತಿ ವಿಶ್ವಮಾನ್ಯವಾಗಿದೆ ಎಂದು ಕೊಂಡಾಡಿದರು.
ಕಾರ್ಯಕ್ರಮದ ಆಯೋಜಕರಾದ ಶ್ರೀ ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿಯೂ ಆದ ಬಿಜೆಪಿ ಶಿಕ್ಷಕರ ಪ್ರಕೋಷ್ಠಾದ ರಾಜ್ಯ ಸಹ ಸಂಚಾಲಕ ಕೆ.ಎಂ. ಸುರೇಶ್ ಮಾತನಾಡಿ, ನರೇಂದ್ರ ಮೋದಿಯವರು ಪ್ರಧಾನಿಗಳಾಗಿ ಏಳು ವರ್ಷ ಅಧಿಕಾರ ನಡೆಸಿದ್ದನ್ನು ವಿಜಯೋತ್ಸಾಹದ ಮೂಲಕ ಆಚರಿಸುವುದರ ಬದಲಾಗಿ ಕೋವಿಡ್ ಸೋಂಕಿತರ ಮನೆಬಾಗಿಲಿಗೆ ಆಹಾರ ವಿತರಣೆ, ಅಗತ್ಯವಿರುವವರಿಗೆ ಆಹಾರ ಧಾನ್ಯಗಳ ಕಿಟ್, ಹಬೆ ಯಂತ್ರ, ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸುವಂತಾಗ ಬೇಕು ಎಂದು ಆಶಯ ವ್ಯಕ್ತಪಡಿಸಿದರು.
ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಜಿ.ಯಲ್ಲಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ನಿಟುವಳ್ಳಿಯ ಸರಸ್ವತಿ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಉದ್ಯಾನವನ ದಲ್ಲಿ ಸಸಿ ನೆಡುವ ಹಾಗೂ ಮಣಿಕಂಠ ಸರ್ಕಲ್ನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 10 ಸಾವಿರ ರೂ. ಮೌಲ್ಯದ ಕೋವಿಡ್ ಸಂಬಂಧಿತ ಔಷಧಗಳನ್ನು ಉಚಿತವಾಗಿ ನೀಡುವ ಹಾಗೂ 33ನೇ ವಾರ್ಡ್ ಫಲಾನುಭವಿಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.
33ನೇ ವಾರ್ಡಿನ ಪಾಲಿಕೆ ಸದಸ್ಯ ಕೆ.ಎಂ.ವೀರೇಶ್, ಎಸ್.ಮಂಜುನಾಥ್ ನಾಯ್ಕ್, ಪಿ.ಎಸ್.ಬಸವರಾಜ್, ಕ್ರೀಡಾ ಪಟು ಧನ್ಯಕುಮಾರ್, ದೇವಸ್ಥಾನ ಸಮಿತಿಯ ಚಂದ್ರಪ್ಪ, ಕೂಲಂಬಿ ಬಸಣ್ಣ, ವಿ.ಸಿದ್ದೇಶ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.