ದಾವಣಗೆರೆ, ಮಾ.17- ಕುಂದು-ಕೊರತೆ ನಿವಾರಿ ಸುವಂತೆ ಒತ್ತಾಯಿಸಿ ಬುಧವಾರ ಆಶಾ ಕಾರ್ಯಕರ್ತೆ ಯರು ಜಿ.ಪಂ. ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಪ್ರತಿಭಟನೆಯ ನೇತೃತ್ವ ವಹಿಸಿತ್ತು.
ಆಶಾ ಕಾರ್ಯಕರ್ತೆಯರಿಗೆ ಇ-ಸಮೀಕ್ಷೆ ಮಾಡಲು ಮೊಬೈಲ್, ಟ್ಯಾಬ್ ಜೊತೆಗೆ ಡಾಟಾ ಒದಗಿಸಿ ಸಮೀಕ್ಷೆ ನಡೆಸುವಂತೆ ಒತ್ತಾಯಿಸಿದರು.
ಮೊಬೈಲ್, ಟ್ಯಾಬ್ ಬಳಸಲು ಸಾಧ್ಯವಾಗದ ಆಶಾ ಕಾರ್ಯಕರ್ತೆಯರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು, ಇ-ಸಮೀಕ್ಷೆಗೆ ಸೂಕ್ತ ಸಂಭಾವನೆ ನಿಗದಿ ಮಾಡಬೇಕು, ಒತ್ತಡ ಹೇರದೆ ಅಗತ್ಯವಿರುವಷ್ಟು ಸಮಯ ನೀಡಿ ಇ-ಸಮೀಕ್ಷೆ ಮಾಡಿಸಬೇಕು, ಆರ್ಥಿಕ ಮಾಹಿತಿಯನ್ನು ಇ-ಸಮೀಕ್ಷೆಯಿಂದ ಕೈಬಿಡಬೇಕು ಹಾಗೂ ಪ್ರತಿ 3 ತಿಂಗಳಿಗೊಮ್ಮೆ ಆಶಾ ಕುಂದು-ಕೊರತೆ ಸಭೆ ಕರೆಯವಂತೆ ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ತಿಪ್ಪೇಸ್ವಾಮಿ ಅಣಬೇರು, ಶಿವಾಜಿರಾವ್ ಢಗೆ, ಭಾರತಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಮಧು ತೊಗಲೇರಿ, ಮಾರಕ್ಕ ಜಗಳೂರು, ನಾಗವೇಣಿ ಚನ್ನಗಿರಿ, ಅನಿತಾ, ಲಕ್ಷ್ಮಿ, ರೀಟಾ, ವೀಣಾ, ಗಂಗಮ್ಮ, ವಿಶಾಲಾಕ್ಷಿ, ಗೌರಮ್ಮ, ಆಶಾ, ಲೋಲಾಕ್ಷಮ್ಮ, ಸುಮ, ಜ್ಯೋತಿ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರಿದ್ದರು.