ಬಾಕಿ ಬಿಲ್ ಪಾವತಿಗೆ ಒತ್ತಡ ಮೃತ ವ್ಯಕ್ತಿಯ ಶವ ಹಸ್ತಾಂತರಕ್ಕೆ ನಿರಾಕರಣೆ

ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮಧ್ಯಪ್ರವೇಶದಿಂದ ಸಮಸ್ಯೆಗೆ ಪರಿಹಾರ

ದಾವಣಗೆರೆ, ಮೇ 31- ಕೋವಿಡ್‌ನಿಂದ ಮೃತಪಟ್ಟ‌ ವ್ಯಕ್ತಿಯ ಶವವನ್ನು ಹಸ್ತಾಂತರಿಸುವ ವೇಳೆ ಆಸ್ಪತ್ರೆಯ ಬಾಕಿ ಬಿಲ್ ಪಾವತಿಗೆ ಒತ್ತಡ ಹೇರುವಂತಿಲ್ಲ ಮತ್ತು ಬಿಲ್ ಪಾವತಿ‌ ಮಾಡದೇ ಇದ್ದ ಪಕ್ಷದಲ್ಲಿ ಶವ ಹಸ್ತಾಂತರಿಸಲು ನಿರಾಕರಿಸುವಂತಿಲ್ಲ ಎಂಬ ಸರ್ಕಾರದ ಆದೇಶವಿದೆ.

ಹೀಗಿದ್ದರೂ ಸಹ ಸರ್ಕಾರದ ಆದೇಶ ಪಾಲಿಸದೇ ಮೃತಪಟ್ಟ ವ್ಯಕ್ತಿಯ ಶವವನ್ನು ಹಸ್ತಾಂತರಿಸದೇ ಆಸ್ಪತ್ರೆಯ ಬಾಕಿ ಬಿಲ್ ಪಾವತಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಕೊನೆಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮಧ್ಯಪ್ರವೇಶದಿಂದ  ಆಸ್ಪತ್ರೆಯ ಬಿಲ್ ಪಾವತಿ ಜೊತೆಗೆ ಮೃತದೇಹವನ್ನು ವಾರಸುದಾರರಿಗೆ ಸಿಗುವಂತಾದ ಘಟನೆ ನಗರದಲ್ಲಿಂದು ರಾತ್ರಿ ನಡೆದಿದೆ.

ಮತ್ತಿ ಗ್ರಾಮದ ರಾಮಚಂದ್ರಪ್ಪ ಎಂಬಾತನನ್ನು ಶುಗರ್ ಜಾಸ್ತಿಯಾದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರು ದಿನಗಳ ನಂತರ ರಾಮಚಂದ್ರಪ್ಪ ಅವರು ಕೋವಿಡ್ ನಿಂದ ಮೃತಪಟ್ಟಿದ್ದಾರೆನ್ನಲಾಗಿದೆ. ಹೀಗಾಗಿ ವೈದ್ಯಕೀಯ ವೆಚ್ಚ 2.80 ಲಕ್ಷ ಕೊಡದೇ ಶವವನ್ನು ಕೊಡುವುದಿಲ್ಲ ಎಂದು ಖಾಸಗಿ ಆಸ್ಪತ್ರೆಯವರು ಹೇಳಿದ್ದರು ಎಂದು ತಿಳಿದು ಬಂದಿದೆ.

ಈ ವಿಚಾರವಾಗಿ ಸಹಾಯ ಮಾಡುವಂತೆ ಸಾಮಾಜಿಕ ಹೋರಾಟಗಾರ ಎಂ.ಜಿ. ಶ್ರೀಕಾಂತ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆ ಪತ್ರಕರ್ತರು ಸಹ ಈ ವಿಚಾರವಾಗಿ ಗಮನಹರಿಸಿ ಮೃತ ವ್ಯಕ್ತಿಯ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಈ ಹಂತದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟಲ್ಲಿ ಖಾಸಗಿ ಆಸ್ಪತ್ರೆಯವರು ಚಿಕಿತ್ಸೆಯ ಬಾಕಿ ವೆಚ್ಚದ ಪಾವತಿಗೆ ಒತ್ತಡ ಹೇರುವಂತಿಲ್ಲ. ಬಾಕಿ ಪಾವತಿಸದಿದ್ದ ಪಕ್ಷದಲ್ಲಿ  ಮೃತದೇಹ ಹಸ್ತಾಂತರಿಸಲು ನಿರಾಕರಿಸುವಂತಿಲ್ಲ ಎಂಬ ಉಲ್ಲೇಖದ ಆದೇಶದಂತೆ ಕ್ರಮಕೈಗೊಳ್ಳಲು ಪತ್ರಕರ್ತರು ಆಗ್ರಹಿಸಿದರು. 

ಜಿಲ್ಲಾಧಿಕಾರಿಗಳು ಡಿಹೆಚ್ಓ ಅವರಿಗೆ ಸರ್ಕಾರದ ಆದೇಶ ಉಲ್ಲಂಘಿಸಿದರೆ ಕ್ರಮ ಜರುಗಿಸಲು ಆದೇಶಿಸಿದರು. ಅಂತೆಯೇ ಡಿಹೆಚ್ಓ ಖಾಸಗಿ ಆಸ್ಪತ್ರೆಗೆ ತೆರಳಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದರು. ಈ ಎಲ್ಲಾ ಪ್ರಸಂಗಗಳ ನಂತರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ತಕ್ಷಣವೇ ಆ ಖಾಸಗಿ ಆಸ್ಪತ್ರೆಗೆ ತೆರಳಿ‌ ಸರ್ಕಾರದ ಆದೇಶದಂತೆ ಕ್ರಮ ವಹಿಸಲು ಸೂಚಿಸಿದ ಮೇರೆಗೆ ಆಸ್ಪತ್ರೆಗೆ ತೆರಳಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಜಿ.ಡಿ. ರಾಘವನ್ ಹಾಗೂ ಸ್ಥಳಕ್ಕಾಗಮಿಸಿದ ಕೆಟಿಜೆ ನಗರ ಪಿಎಸ್‌ಐ ವೀರೇಶ್ ಸಮ್ಮುಖದಲ್ಲಿ ಮಾತುಕತೆ ನಡೆದು ಮೃತದೇಹವನ್ನು ಹಸ್ತಾಂತರಿಸಲಾಯಿತು.

ಹಾಗೆಯೇ ಎರಡೂವರೆ ಲಕ್ಷ ಆಗಿದ್ದ ಆಸ್ಪತ್ರೆ ಬಿಲ್ ಅನ್ನು ಕೇವಲ 50 ಸಾವಿರ ಕೊಡುವಂತೆ ಮಾಡಲಾಯಿತು. ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಮೃತ ವ್ಯಕ್ತಿಯ ದೇಹವನ್ನು ಹಸ್ತಾಂತರಿಸುವ ವೇಳೆ ಆಸ್ಪತ್ರೆಯ ಬಾಕಿ ಬಿಲ್ ಪಾವತಿಗೆ ಒತ್ತಡ ಹೇರಿದರೆ ಹಾಗೂ ಬಿಲ್ ಪಾವತಿ ಮಾಡದೆ ಇದ್ದ ಪಕ್ಷದಲ್ಲಿ ಮೃತದೇಹದ ಹಸ್ತಾಂತರ ಮಾಡಲು ನಿರಾಕರಸಿದರೆ ಕರ್ನಾಟಕ ಪ್ರೈವೇಟ್ ಮೆಡಿಕಲ್‌ ಎಸ್ಟಾಬ್ಲಿಷ್‌ಮೆಂಟ್ ಆಕ್ಟ್ (ಕೆಪಿಎಂಇ) ನಿಯ ಮಾನುಸಾರ ಸದರಿ ಆಸ್ಪತ್ರೆಯ ನೋಂದಣಿ ಯನ್ನು ರದ್ದುಗೊಳಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುವ ಆದೇಶವಿದೆ. ಹೀಗೆ ಮಾಡಿರುವ ಖಾಸಗಿ ಆಸ್ಪತ್ರೆ ವಿರುದ್ಧ ಯಾವ ಕ್ರಮ‌ ಜರುಗಿ ಸಲಾಗಿದೆ ಎಂಬ ಮಾಹಿತಿ ನಿರೀಕ್ಷಿಸಲಾಗಿದೆ.

error: Content is protected !!