ಶೇರಾಪುರ ವಸತಿ ಕಾಮಗಾರಿ 6 ತಿಂಗಳಲ್ಲಿ ಪೂರ್ಣ: ಸೋಮಣ್ಣ

ಹರಿಹರ ಶೇರಾಪುರ ಬಡಾವಣೆಯಲ್ಲಿ 50 ಎಕರೆ ವಸತಿ ಪ್ರದೇಶ ಸ್ಥಳ ಪರಿಶೀಲಿಸಿದ ವಸತಿ ಸಚಿವ ವಿ.ಸೋಮಣ್ಣ

ಹರಿಹರ, ಮೇ 30- ರಾಜ್ಯ ಗೃಹ ಮಂಡಳಿ ವತಿಯಿಂದ ನಗರದ ಶೇರಾಪುರ ಬಡಾವಣೆಯ 50 ಎಕರೆ ಪ್ರದೇಶದಲ್ಲಿ ಸುಮಾರು 650 ನಿವೇಶನ ನಿರ್ಮಾಣ ಮಾಡಲು ಎಲ್ಲಾ ರೀತಿಯ ಸಿದ್ದತೆ ನಡೆಸಿದ್ದು, ಕಾಮಗಾರಿ ಇನ್ನು 6 ತಿಂಗಳಲ್ಲಿ ಪೂರ್ಣ ಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು ವಸತಿ ಸಚಿವರಾದ ವಿ.ಸೋಮಣ್ಣ ತಿಳಿಸಿದರು.

ನಗರದ ಶೇರಾಪುರ ಬಡಾವಣೆಯಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ಸುಮಾರು 50 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ವಸತಿ ಪ್ರದೇಶದ ಸ್ಥಳ ಪರಿಶೀಲಿಸಿ ಅವರು ಮಾತನಾಡಿದರು.

ಈ ಪ್ರದೇಶದಲ್ಲಿ 20×30 40×30 60×40 ಅಳತೆಯ ಸುಮಾರು 650 ನಿವೇಶನವನ್ನು ಹಂಚಿಕೆ ಮಾಡಲಾಗುವುದು. ಈಗಾಗಲೇ 33ಸಾವಿರ ಅರ್ಜಿಗಳು ಬಂದಿವೆ. ಇದರಲ್ಲಿ 20×30 ನಿವೇಶನಕ್ಕೆ ಬಿ.ಪಿ.ಎಲ್‌ ಕಾರ್ಡ್ ಹೊಂದಿರುವ ಅತಿ ಬಡವರಿಗೆ ಶೇ. 50 ರಷ್ಟು ಕಡಿಮೆ ದರದಲ್ಲಿ ವಿತರಣೆ ಮಾಡಲಾಗುತ್ತದೆ ಎಂದರು. ಕಾನೂನು ಚೌಕಟ್ಟಿನಲ್ಲೇ ನಿಯಮಾನುಸಾರ ಲೇಔಟ್ ಅಭಿವೃದ್ದಿಪಡಿಸಲಾಗುತ್ತಿದೆ. ಆದರೆ ಅಕ್ಕಪಕ್ಕದ ಕೆಲ ರೈತರು ತಮ್ಮ ತೋಟ ಮತ್ತು ಹೊಲಗಳಿಗೆ ಲೇಔಟ್ ಎತ್ತರವಾಗುವ ಕಾರಣ ತಮ್ಮ ಜಮೀನಿನಲ್ಲಿ ಮಳೆ ನೀರು ನಿಂತು ಶೀತಬಾಧೆ ಕಾಡಲಿದೆ. ಆದ ಕಾರಣ ಕಾಲುವೆ ನಿರ್ಮಿಸಿ ನೀರು ಹೋಗುವಂತೆ ವ್ಯವಸ್ಥೆ ಮಾಡಿಕೊಡಲು ಮನವಿ ಮಾಡಿದ್ದಾರೆ. ಆ ಪ್ರಕಾರವೇ ಅಕ್ಕಪಕ್ಕದ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದೇನೆ ಎಂದರು.

ವಸತಿ ಪ್ರದೇಶದಲ್ಲಿ 24×7 ಶುದ್ಧವಾದ ನೀರು, 4 ಪಾರ್ಕ್,  3 ಲಕ್ಷ ಸಾಮರ್ಥ್ಯದ 3 ವಾಟರ್ ಟ್ಯಾಂಕ್, ಆಸ್ಪತ್ರೆ, ಅಂಗನವಾಡಿ ಕೇಂದ್ರ, ಪ್ರೈಮರಿ ಶಾಲೆ, ಸೇರಿದಂತೆ ಹಲವು ಸೌಕರ್ಯಗಳನ್ನು ಕಲ್ಪಿಸಲಾಗುವುದು.  ಅಕ್ಕ ಪಕ್ಕದ ಜಮೀನು ಮಾಲೀಕರು ಜಮೀನು ನೀಡುವುದಕ್ಕೆ ಮುಂದಾದರೆ ಅವುಗಳನ್ನು ಪಡೆದು ಹೆಚ್ಚು ನಿವೇಶನವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.

ಬಿಎಸ್‌ವೈ ಬದಲಾವಣೆ ಸಾಧ್ಯವಿಲ್ಲ:  ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ.  ಈ ಬಗ್ಗೆ ರಾಜ್ಯಾಧ್ಯಕ್ಷರು ಹಾಗೂ ನಾಯಕರು ಕೇಂದ್ರದ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಸಚಿವ ಸೋಮಣ್ಣ ಸ್ಪಷ್ಟಪಡಿಸಿದರು.

ಲಾಕ್‌ಡೌನ್‌ ಗೆ ಸಂಬಂಧಿಸಿದಂತೆ ಜೂನ್ 7 ರವರೆಗೆ ಈಗ ಇರುವ ನಿರ್ಬಂಧಗಳು ಚಾಲ್ತಿಯಲ್ಲಿರುತ್ತವೆ. ಪ್ರಸ್ತುತ ಶೇ.10 ರಷ್ಟು ಕೋವಿಡ್ ಪ್ರಕರಣ ಕಡಿಮೆ ಆಗಿದೆ. ಇನ್ನೂ ಕಡಿಮೆ ಆಗಬೇಕು. ಜೂನ್ 7 ರ ನಂತರ ನಿರ್ಬಂಧಗಳನ್ನು ಮುಂದುವರೆಸಬೇಕಾ ಅಥವಾ ಬೇಡವಾ ಎಂಬ ಬಗ್ಗೆ ಪರಿಸ್ಥಿತಿ ನೋಡಿ ಮುಖ್ಯಮಂತ್ರಿಗಳು ನಿರ್ಧರಿಸಲಿದ್ದಾರೆ. ಸಿಎಂ ನಿರ್ಧಾರಕ್ಕೆ ನಮ್ಮ ಸಹಮತ ಇರುವುದಾಗಿ ಹೇಳಿದರು.

ಸಚಿವರು-ಜಮೀನು ಮಾಲೀಕರೊಂದಿಗೆ ಮಾತಿನ ಚಕಮಕಿ:  ಪಕ್ಕದ 14 ಎಕರೆ ಜಮೀನುಗಳಿಗೆ ನೀರು ಹರಿದು ಬರುತ್ತದೆ. ಆದ್ದರಿಂದ ಚರಂಡಿ ನಿರ್ಮಿಸಬೇಕೆಂದು  ಜಮೀನು ಮಾಲೀಕರಾದ ರಂಗಣ್ಣ, ಓಂಕಾರಪ್ಪ, ಕರಿಬಸಪ್ಪ, ಶಿವಪ್ಪ, ಚೆನ್ನಬಸಪ್ಪ, ಜಂಬಣ್ಣ ರಾಜಶೇಖರ್, ಇತರರು ಸಚಿವರ ಬಳಿ ಮನವಿ ಮಾಡಲು ಮುಂದಾದ ವೇಳೆ  ರಾಜಶೇಖರ್ ಮತ್ತು ಸಚಿವ ಸೋಮಣ್ಣ ನವರ ನಡುವೆ ಮಾತಿನ ಚಕಮಕಿ ನಡೆಯಿತು. 

ನಾನೂ ಸಹ ರೈತ ಕುಟುಂಬದಿಂದ ಬಂದವನು. ಅತಿರೇಕದ ವರ್ತನೆ ಸಲ್ಲದು ಎಂದು ಸಚಿವ ಸೋಮಣ್ಣ ರಾಜಶೇಖರ್ ಅವರಿಗೆ ಹೇಳಿದ್ದರಿಂದ ಅಸಮಾಧಾನಗೊಂಡ ಅವರು, ರೈತರ ಬಗ್ಗೆ ಅಸಡ್ಡೆಯಿಂದ ಮಾತನಾಡಬೇಡಿ ಎಂದರು. ನಂತರ ಸಚಿವರು ಶೀಘ್ರವಾಗಿ ಚರಂಡಿ ನಿರ್ಮಾಣ ಮಾಡುವುದಕ್ಕೆ ಸೂಚಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ, ನಗರಸಭೆ ಅಧ್ಯಕ್ಷೆ ರತ್ನ ಡಿ ಉಜ್ಜೇಶ್, ಉಪಾಧ್ಯಕ್ಷ ಬಾಬುಲಾಲ್,  ನಗರಸಭೆ ಸದಸ್ಯರಾದ ಅಶ್ವಿನಿ ಕೃಷ್ಣ, ವಿರುಪಾಕ್ಷ, , ಸಿಪಿಐ ಸತೀಶ್ ಕುಮಾರ್, ನಗರಸಭೆ ಎಇಇ ಬಿರಾದಾರ, ಗೃಹ ಮಂಡಳಿಯ ಅಧಿಕಾರಿಗಳು ಮತ್ತು ಬಿಜೆಪಿ ಪಕ್ಷದ ಮುಖಂಡರು ಹಾಜರಿದ್ದರು.

error: Content is protected !!