ಪಾಲಿಕೆ ಕಂದಾಯಾಧಿಕಾರಿ ಪ್ರಭುಸ್ವಾಮಿ ಕಾರ್ಯಕ್ಕೆ ಜನ ಮೆಚ್ಚುಗೆ
ದಾವಣಗೆರೆ, ಮಾ.17- ನಗರ ಪಾಲಿಕೆ ಕಂದಾಯಾಧಿಕಾರಿ ವಿ.ಎಂ. ಪ್ರಭುಸ್ವಾಮಿ ಅವರು ಇಂದು ಸುಮಾರು ಹನ್ನೆರಡೂವರೆ ಕಿ.ಮೀ.ವರೆಗೂ ಸ್ಮಾರ್ಟ್ ಸಿಟಿ ಸೈಕಲ್ ಏರಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕಾರ್ಯ ಕೈಗೊಂಡು ಗಮನ ಸೆಳೆದು ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇತ್ತ ಪರಿಸರ ಸ್ನೇಹಿಯಾಗಿ ಸ್ಮಾರ್ಟ್ ಸಿಟಿ ಸೈಕಲ್ ಗಳ ಬಳಕೆಗೆ ಜನರಿಗೆ ಜಾಗೃತಿ ಮೂಡಿಸುವ ಜೊತೆಗೆ ಜನಾಕರ್ಷಿಸುತ್ತಾ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸಿ ಕಡ್ಡಾಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಉಜ್ವಲ ಭವಿಷ್ಯ ರೂಪಿಸುವಂತೆ ಪೋಷಕರಿಗೆ, ಸಾರ್ವಜನಿಕರಿಗೆ ಮನವರಿಕೆ ಮಾಡುತ್ತಾ ಪ್ರೋತ್ಸಾಹ ತುಂಬಿದರು. ಅಧಿಕಾರಿಯಾಗಿ ಸೈಕಲ್ ಏರಿ ಸಮೀಕ್ಷೆ ನಡೆಸುತ್ತಿರುವುದನ್ನು ಅರಿತ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳು ಸಹ ಆಕರ್ಷಿತರಾದರು.
ಸಮೀಕ್ಷೆ ಕಾರ್ಯದ ಉಸ್ತುವಾರಿ ನೋಡಿಕೊಳ್ಳಬೇಕಾದ ಪ್ರಭುಸ್ವಾಮಿ ಅವರು ಬಿಎಸ್ ಎನ್ ಎಲ್ ಕಚೇರಿ ಬಳಿ ತಮ್ಮ ವಾಹನದಿಂದ ಇಳಿದು ಪಾಲಿಕೆಯ 2ನೇ ವಾರ್ಡ್‍ನ ಶಾಸ್ತ್ರೀ ನಗರ, ರಾಜೀವ್ ಗಾಂಧಿ ಬಡಾವಣೆಗಳಲ್ಲಿ ಸ್ಮಾರ್ಟ್ ಸಿಟಿ ಸೈಕಲ್ ನಲ್ಲಿಯೇ ಪಾಲಿಕೆ ಅಧಿಕಾರಿ, ಸಿಬ್ಬಂದಿಗಳ ಜೊತೆಗೂಡಿ ರಾಜ್ಯ ಸರ್ಕಾರದ ಆದೇಶದಂತೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕಾರ್ಯ ಕೈಗೊಂಡಿದ್ದರು. ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದ ಅಧಿಕಾರಿಗಳು, ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಿದರು.
ಪಾಲಿಕೆಯ ಕಂದಾಯ ನಿರೀಕ್ಷಕ ಹೆಚ್.ಕೆ. ಚಂದ್ರಕುಮಾರ, ಕರ ವಸೂಲಿಗಾರರಾದ ಡಿ. ಮಂಜುಳಮ್ಮ, ಕಂಪ್ಯೂಟರ್ ಆಪರೇಟರ್ ವೆಂಕಟೇಶ, ವಾಲ್ವ್ ಮನ್ ಆಶೀಫುಲ್ಲಾ ಇತರರು ಇದ್ದರು.