38 ಡಿಗ್ರಿ ತಲುಪಲಿರುವ ಉಷ್ಣಾಂಶ, ತಂಪು ಪಾನೀಯಗಳಿಗೆ ಮೊರೆ
ದಾವಣಗೆರೆ, ಮಾ. 17- ಉಫ್.. ಏನ್ ಬಿಸಿಲಪ್ಪಾ? ಹೋದ ವರ್ಷಕ್ಕಿಂತನೂ ಜಾಸ್ತಿ ಇದೆ ಅನಿಸ್ತಿದೆ.. ಪದೇ ಪದೇ ನೀರು ಕುಡಿಬೇಕು ಅನಿಸ್ತಿದೆ. ಹೀಗೆ ಕೆಲ ಮಾತುಗಳು ಅಲ್ಲಲ್ಲಿ ಕೇಳಲಾರಂಭಿಸಿವೆ.
ದಾವಣಗೆರೆಯ ಜನರು ಬಿಸಿಲಿನ ತಾಪಕ್ಕೆ ಬಸವಳಿಯುತ್ತಿದ್ದಾರೆ. ಸೂರ್ಯ ಮೇಲೇರುತ್ತಿದ್ದಂತೆ ಮುಖ ದಲ್ಲಿ ಬೆವರು ಹರಿಯಲಾರಂಭಿಸುತ್ತದೆ. ನಗರದಲ್ಲಿ ಕೆಲಸ ಕಾರ್ಯಗಳಿಗೆ ಬಂದವರು ತಂಪು ಪಾನೀಯಗಳಿಗೆ ತಡಕಾಡುತ್ತಿದ್ದಾರೆ. ಬಿಸಿಲಿನಿಂದ ರಕ್ಷಣೆಗಾಗಿ ನೆರಳು ಇರುವ ಸ್ಥಳ ಹುಡುಕುತ್ತಿದ್ದಾರೆ.
ಬಿಸಿಲಿನಿಂದ ಬೇಸತ್ತ ಜನತೆ ನಗರದ ಬಹುತೇಕ ಉದ್ಯಾನವನಗಳಿಗೆ ಆಶ್ರಯ ಬಯಸಿ ಬರುತ್ತಿದ್ದಾರೆ. ಗಿಡ-ಮರಗಳ ಕೆಳಕೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾರೆ. ಇತ್ತ ಎಳನೀರು, ಕಬ್ಬಿನ ಹಾಲು, ಹಣ್ಣಿನ ಜ್ಯೂಸ್ ಅಂಗಡಿಗಳಲ್ಲಿ ವ್ಯಾಪಾರ ಹೆಚ್ಚಾಗಿದೆ.
ಮಾರ್ಚ್ 17 ರಂದು ದಾವಣಗೆರೆಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ದಾಖಲಾಗಿದೆ. ಇಂದು ಗುರುವಾರವೂ ಅದೇ ತಾಪಮಾನ ಮುಂದುವರೆಯಲಿದೆ. ಬರುವ 21ನೇ ತಾರೀಖು ತಾಪಮಾನ ಮತ್ತಷ್ಟು ಹೆಚ್ಚಳವಾಗಲಿದೆ. ಅಂದು 37 ಡಿಗ್ರಿ ಯಾದರೆ 26ರಂದು 38ಕ್ಕೆ ತಲುಪಲಿದೆ. ಇದು ಜನತೆಯನ್ನು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ.
ಬೇಸಿಗೆ ನಿಭಾಯಿಸುವುದು ಹೇಗೆ?
ಬಿಸಿಲಿಗೆ ಬೆದರಿ ಮನೆಯಲ್ಲಿಯೇ ಕುಳಿತುಕೊಳ್ಳಲಾಗದು. ಬಿಸಿಲನ್ನು ನಿಭಾಯಿಸಲು ಸುಲಭವಾದ ಮಾರ್ಗೋಪಾಯಗಳಿವೆ.
ಬೇಸಿಗೆಗೆ ಹೊಂದುವಂತಹ ಉಡುಪು ಹಾಗೂ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು. ಸಾಧ್ಯವಾದಷ್ಟು ಹತ್ತಿ ಬಟ್ಟೆಯನ್ನೇ ಧರಿಸುವುದು ಒಳಿತು. ತೀರಾ ಬಿಸಿಲಿಗೆ ಹೋಗುವಾಗ ತುಂಬು ತೋಳಿನ ಹತ್ತಿ ಬಟ್ಟೆಯ ಉಡುಪು ಹಾಗೂ ನೆರಳಿನಲ್ಲಿರುವುದಾದರೆ ಸ್ಲೀವ್ಲೆಸ್ ಉಡುಪು ಧರಿಸುವುದು ಆರಾಮದಾಯಕ. ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಏರಿದಂತೆ ನೀರಿನ ಅವಶ್ಯಕತೆ ಹೆಚ್ಚಾಗುತ್ತದೆ. ಹಾಗಾಗಿ ಹೆಚ್ಚೆಚ್ಚು ನೀರು ಸೇವಿಸಬೇಕು. ನೀರಿನಾಂಶವಿರುವ ಕಲ್ಲಂಗಡಿ, ಕರಬೂಜ, ಕಿತ್ತಲೆ ಬಳಕೆ ಹೆಚ್ಚು ಸೂಕ್ತ. ಹಸಿ ತರಕಾರಿಗಳಾದ ಸೌತೆ, ಟೊಮ್ಯಾಟೊ ಬಳಸಬಹುದು. ಹಣ್ಣಿನ ರಸಕ್ಕಿಂತ ಹಣ್ಣನ್ನೇ ತಿನ್ನುವುದು ಉತ್ತಮ. ಮನೆಯಿಂದ ಹೊರಗೆ ಹೋಗುವಾಗ ಛತ್ರಿ ಹಾಗೂ ನೀರಿನ ಬಾಟಲು ಜೊತೆಗೆ ಇಟ್ಟುಕೊಳ್ಳಬೇಕು ಎಂಬುದು ತಜ್ಞರ ಸಲಹೆ.
ಮಾಸ್ಕ್-ಹೆಲ್ಮೆಟ್ ಮತ್ತು ಬೇಸಿಗೆ: ಕೊರೊನಾ ಎರಡನೇ ಅಲೆಯ ಭಯ ಆವರಿಸುತ್ತಿದ್ದಂತೆ ಜಿಲ್ಲಾಡಳಿತ ಮಾಸ್ಕ್ ಕಡ್ಡಾಯ ಮಾಡಿದೆ. ಇತ್ತ ಪೊಲೀಸ್ ಇಲಾಖೆ ಹೆಲ್ಮೆಟ್ ಕಡ್ಡಾಯ ಮಾಡಿದ್ದು, ಹೆಲ್ಮೆಟ್ ಹಾಗೂ ಮಾಸ್ಕ್ ಧರಿಸದವರಿಗೆ ದಂಡದ ಬಿಸಿ ತಾಕುತ್ತಿದೆ. ಬಿಸಿಲಿನ ಧಗೆ ನಡುವೆಯೂ ಹೆಲ್ಮೆಟ್, ಮಾಸ್ಕ್ ಧರಿಸಿ ತಲೆಯಲ್ಲಿ, ಮುಖದಲ್ಲಿ ಬೆವರಿಳಿಸಿಕೊಳ್ಳುತ್ತಾ ಓಡಾಡಬೇಕಾದ ಅನಿವಾರ್ಯತೆ ನಗರದ ಜನತೆಯದ್ದು.
ಬಿಸಿಲಿಗೂ ಅರಳುವ ಕೊಡೆಗಳು: ಬಣ್ಣ ಬಣ್ಣದ ಛತ್ರಿಗಳು ಅರಳುವುದು ಕೇವಲ ಮಳೆಗಾಲದಲ್ಲಲ್ಲ. ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಮಹಿಳೆಯರು ಇದೀಗ ಕೊಡೆಗಳ ಮೊರೆ ಹೋಗಿದ್ದಾರೆ. ಕಾಲೇಜು ಹುಡುಗಿಯರು, ನೌಕರರು ಛತ್ರಿಗಳನ್ನು ಬಳಸುತ್ತಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ಕೆಲ ಯುವತಿಯರಂತೂ ಬಿಸಿಲಿನ ಕಿರಣಗಳು ತಮ್ಮ ತ್ವಚೆಗೆ ಧಕ್ಕೆಯನ್ನುಂಟು ಮಾಡುತ್ತವೆಂಬ ಕಾರಣಕ್ಕಾಗಿ ಮುಖ ಹಾಗೂ ಕೈಗಳನ್ನೂ ಮುಚ್ಚಿಕೊಳ್ಳುವಂತೆ ಬಟ್ಟೆಗಳನ್ನು ಧರಿಸುತ್ತಿದ್ದಾರೆ.
ಹಣ್ಣುಗಳಿಗೆ ಹೆಚ್ಚಿದ ಬೇಡಿಕೆ: ನೀರಿನ ಅಂಶ ಹೆಚ್ಚಾಗಿರುವ ಕಲ್ಲಂಗಡಿ, ಕರಬೂಜ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಿಸಿಲಿನಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದನ್ನು ತಡೆಗಟ್ಟಲು ಜನರು ಹಣ್ಣುಗಳ ಮೊರೆ ಹೋಗಲಾರಂಭಿಸಿದ್ದಾರೆ.
ಅಭಿವೃದ್ಧಿಯ ನೆಪದಲ್ಲಿ ಮರಗಳನ್ನು ಕಡಿಯುತ್ತಿರುವುದು, ಸಿಮೆಂಟ್ ರಸ್ತೆಗಳ ನಿರ್ಮಾಣವೂ ಸಹ ನಗರದಲ್ಲಿ ತಾಪಮಾನ ಹೆಚ್ಚಳಕ್ಕೆ ಕಾರಣ ಎನ್ನಬಹುದು.