ಪಾಲಿಕೆ ಉಪ ಚುನಾವಣೆ: 2 ವಾರ್ಡ್‌ ಗೆಲ್ಲಲು ಕೈ-ಕಮಲ ತೀವ್ರ ಕಸರತ್ತು

ಪಾಲಿಕೆ ಉಪ ಚುನಾವಣೆ: 2 ವಾರ್ಡ್‌ ಗೆಲ್ಲಲು ಕೈ-ಕಮಲ ತೀವ್ರ ಕಸರತ್ತು - Janathavani

ದಾವಣಗೆರೆ, ಮಾ.17- ನಗರ ಪಾಲಿಕೆಯ 20 ಮತ್ತು 22ನೇ ವಾರ್ಡ್ ಗಳ ಉಪ ಚುನಾವಣೆ ರಂಗೇರಿದ್ದು, ಈ ಎರಡೂ ವಾರ್ಡ್ ಗಳನ್ನು ತಮ್ಮದಾಗಿಸಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ಕಸರತ್ತು ನಡೆಸುತ್ತಿವೆ. ಈ ಎರಡೂ ಪಕ್ಷಗಳ ಅಭ್ಯರ್ಥಿಗಳ ನಡುವೆ ಇದೀಗ ಪೈಪೋಟಿ ಶುರುವಾಗಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಕೊನೆಯ ದಿನವಾದ ಇಂದು ನಾಮಪತ್ರ ಸಲ್ಲಿಸಿ, ಚುನಾವಣಾ ಕಣಕ್ಕಿಳಿದರು. ಎಐಎಂಇಇಎಂ ಪಕ್ಷವೂ ತನ್ನ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಸಿದೆ.

ಭಾರತ್ ಕಾಲೋನಿಯ 20ನೇ ವಾರ್ಡ್ ನಲ್ಲಿ ಕಾಂಗ್ರೆಸ್ ನಿಂದ ಎಂ. ಮೀನಾಕ್ಷಿ, ಬಿಜೆಪಿಯಿಂದ ಎಂ. ರೇಣುಕಾ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ಇಲ್ಲಿ ಯಾರೂ ಪಕ್ಷೇತರರು ಸ್ಪರ್ಧಿಸಿಲ್ಲ. ಇನ್ನೂ ಯಲ್ಲಮ್ಮ ನಗರದ ವಾರ್ಡ್ ಸಂಖ್ಯೆ 22ರಿಂದ ಕಾಂಗ್ರೆಸ್ ನಿಂದ ರವಿಸ್ವಾಮಿ, ಬಿಜೆಪಿಯಿಂದ ಶಿವಾನಂದ ಅವರಿಗೆ ಪಕ್ಷದ ಬಿ ಫಾರಂ ನೀಡುವ ಮೂಲಕ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಇಲ್ಲಿ ಎಐಎಂಇಇಎಂನ ಮಹಮದ್ ಅಲಿ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಪಕ್ಷೇತರರಾಗಿ ಎಂ. ಮನು, ಕಲೀಲ್ ಬೇಗ್, ಪ್ರಸನ್ನ ಸಾಳಂಗಿ, ಸೈಯದ್ ನಜೀರ್, ಅಫ್ಜಲ್ ಖಾನ್, ಗಣೇಶ್ ರಾವ್, ಶುಭ ಮಂಗಳ ಮತ್ತು ಮಹಮದ್ ಮುಜಾಹಿದ್ ಪಾಷ ನಾಮಪತ್ರ ಸಲ್ಲಿಸಿದ್ದಾರೆ.

20ನೇ ವಾರ್ಡ್‍ನ ಚುನಾವಣಾಧಿಕಾರಿಯಾಗಿ ಲಕ್ಷ್ಮೀಕಾಂತ್ ಬೊಮ್ಮನವರ್‍ಗೆ ಮತ್ತು 22ನೇ ವಾರ್ಡ್‍ನ ಚುನಾವಣಾಧಿಕಾರಿಯಾಗಿದ್ದ ಮಮತಾ ಹೊಸಗೌಡರ್ ಅವರಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಕಳೆದ 2020ರಂದು ನಡೆದ ಮೇಯರ್ ಚುನಾವಣೆಯ ಸಂದರ್ಭದಲ್ಲಿ 20ನೇ ವಾರ್ಡಿನಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ದಿದ್ದ ಯಶೋಧ ಉಮೇಶ್ ಮತ್ತು 2021ರಲ್ಲಿ 22ನೇ ವಾರ್ಡ್ ಯಲ್ಲಮ್ಮ ನಗರದಲ್ಲಿ  ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ದಿದ್ದ ದೇವರಮನೆ ಶಿವಕುಮಾರ್ ಅವರು ರಾಜೀನಾಮೆ ನೀಡಿದ್ದರು. ಈ ಎರಡು ಸದಸ್ಯರ ಸ್ಥಾನಗಳು ತೆರವುಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮಾ.29ರಂದು ಚುನಾವಣೆ ಘೋಷಣೆ ಮಾಡಿದೆ.

20ನೇ ವಾರ್ಡ್ ಎಸ್ಟಿ ಮಹಿಳೆಗೆ ಮೀಸಲಿದೆ. ಬಿಜೆಪಿ ಅಭ್ಯರ್ಥಿಯಾಗಿರುವ ಎಂ. ರೇಣುಕಾ ಅವರು ಕಳೆದ ಬಾರಿಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. 22ನೇ ವಾರ್ಡ್ ಯಲ್ಲಮ್ಮ ನಗರ ಸಾಮಾನ್ಯ ಕ್ಷೇತ್ರವಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಹೊಸಬರಾಗಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯ ಕಾರ್ಯಕರ್ತರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‍ನಲ್ಲಿ ಮೂರು ಜನರು, ಬಿಜೆಪಿಯಲ್ಲಿ ಓರ್ವ ಬಂಡಾಯವಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

 ಪಕ್ಷದ ಕಾರ್ಯಕರ್ತನಿಗೆ ಅವಕಾಶ ನೀಡಿದ ಶಿವನಹಳ್ಳಿ ರಮೇಶ್: 22ನೇ ವಾರ್ಡ್‍ಗೆ ಶಿವನಹಳ್ಳಿ ರಮೇಶ್ ಅವರು ನಾಮಪತ್ರ ಸಲ್ಲಿಸುವ ಬಗ್ಗೆ ಗಾಳಿ ಸುದ್ದಿ ಹರಡಿದ್ದವು. ಶಿವನಹಳ್ಳಿ ರಮೇಶ್ ಸ್ಪರ್ಧಿಸಿದರೆ ದೇವರಮನೆ ಶಿವಕುಮಾರ್ ಸ್ಪರ್ಧಿಸುವ ಬಗ್ಗೆ ಮಾತುಗಳು ಹರಿದಾಡುತ್ತಿದ್ದವು. ಆದರೆ, ಅಂತಿಮವಾಗಿ ಶಿವನಹಳ್ಳಿ ರಮೇಶ್ ಅವರು ತಾವು ಸ್ಪರ್ಧೆಗಿಳಿಯದೇ ಪಕ್ಷದ ಕಾರ್ಯಕರ್ತ ರವಿ ಸ್ವಾಮಿ ಅವರಿಗೆ ಅವಕಾಶ ನೀಡಿದ್ದು, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಅವರ ಕೊಠಡಿಯಲ್ಲಿ ಬಿ ಫಾರಂ ವಿತರಿಸಲಾಯಿತು.

ಅಭ್ಯರ್ಥಿ ಹೆಸರು ಗೌಪ್ಯ: ಯಲ್ಲಮ್ಮ ನಗರದ 22ನೇ ವಾರ್ಡ್‍ಗೆ ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿಯ ಬಗ್ಗೆ ಬಿಜೆಪಿಯು ಕೊನೆಯವರೆಗೂ ಗೌಪ್ಯವಾಗಿರಿಸಿ ಸುಮಾರು 12.30ರ ಸುಮಾರಿಗೆ ಶಿವಾನಂದ ಅವರ ಹೆಸರು ಪ್ರಕಟ ಮಾಡಿದರು ಎಂದು ಹೇಳಲಾಗಿದೆ.

ರಾಹುಕಾಲದ ನಂತರ ನಾಮಪತ್ರ ಸಲ್ಲಿಕೆ: ನಾಮಪತ್ರ ಸಲ್ಲಿಕೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ರಾಹುಕಾಲ ಮುಗಿಯುವುದನ್ನು ಕಾದಿದ್ದವು. ಬಿಜೆಪಿ ಮುಖಂಡರು ಪಾಲಿಕೆ ಮುಂಭಾಗದಲ್ಲಿ ಜಮಾಯಿಸಿದ್ದರೆ, ಕಾಂಗ್ರೆಸ್ ಮುಖಂಡರು ವಿ.ಪ. ನಾಯಕ ಎ. ನಾಗರಾಜ್ ಅವರ ಕೊಠಡಿಯಲ್ಲಿ ಜಮಾಯಿಸಿದ್ದರು. ಮಧ್ಯಾಹ್ನ 1.30ರ ನಂತರ ಮೊದಲಿಗೆ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಬಳಿಕ ಕಾಂಗ್ರೆಸ್‍ನಿಂದ ನಾಮಪತ್ರ ಸಲ್ಲಿಕೆ ಮಾಡಲಾಯಿತು.

ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್: ನಗರ ಪಾಲಿಕೆ ಉಪ ಚುನಾವಣೆಯಲ್ಲಿ ಎರಡೂ ವಾರ್ಡ್ ಗಳಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವು ಸಾಮಾನ್ಯ ಕಾರ್ಯಕರ್ತರಾದ ರವಿ ಸ್ವಾಮಿ ಮತ್ತು ಎಂ. ಮೀನಾಕ್ಷಿ ಅವರಿಗೆ ಟಿಕೆಟ್ ನೀಡಿ ಸ್ಪರ್ಧೆಗಿಳಿಸಿದೆ. ಶಿವನಹಳ್ಳಿ ರಮೇಶ್ ಅವರು ಟಿಕೆಟ್ ಬೇಡ ಎಂದ ಹಿನ್ನೆಲೆಯಲ್ಲಿ ಅವರೇ ಸೂಚಿಸಿದ್ದಾರೆ ಎನ್ನಲಾದ ರವಿ ಸ್ವಾಮಿ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಜೊತೆಗೆ ಬಿಬಿಎಂ ಪದವೀಧರೆ ಎಂ. ಮೀನಾಕ್ಷಿ ಅವರಿಗೆ ಟಿಕೆಟ್ ಕೊಟ್ಟು ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸಿಸುವ ಭಾರತ್ ಕಾಲೋನಿಯಲ್ಲಿ ವಿದ್ಯಾವಂತರಿಗೆ ಅವಕಾಶ ನೀಡಿದಂತಾಗಿದೆ.

ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುವ ಕಾಂಗ್ರೆಸ್: ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಮಾತನಾಡಿ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ, ಅವಕಾಶ ನೀಡಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡ ಶಿವನಹಳ್ಳಿ ರಮೇಶ್ ಮಾತನಾಡಿ, ನನಗೆ ಪಕ್ಷ ಇದುವರೆಗೂ ಅವಕಾಶ ನೀಡಿ, ಅಧಿಕಾರವನ್ನು ಕೊಟ್ಟಿತ್ತು. ಆದರೆ, ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಈ ಬಾರಿ ಟಿಕೆಟ್‍ ಕೊಟ್ಟು ಕಾರ್ಯಕರ್ತರನ್ನು ಕೈ ಹಿಡಿದಿದೆ. ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುವುದು ಎಂದರು.

ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತನಾಡಿ, ಬಿಜೆಪಿಯ ಅಪರೇಶನ್ ಕಮಲದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಈಗ ಉಪ ಚುನಾವಣೆ ನಡೆಯುವಂತಾಗಿದೆ. ಉಪ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕೆಂದರು.

ಬಿಜೆಪಿಗೆ ಗೆಲುವಿನ ವಿಶ್ವಾಸ: ನಗರ ಪಾಲಿಕೆಯ 20 ಮತ್ತು 22ನೇ ವಾರ್ಡ್‍ ಗಳಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಈ ಉಪ ಚುನಾವಣೆಯಲ್ಲಿ ಎರಡೂ ವಾರ್ಡ್ ಗಳಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಜನರು ಪಕ್ಷವನ್ನು ಬೆಂಬಲಿಸುತ್ತಾರೆಂದು ಬಿಜೆಪಿ ಮುಖಂಡ ದೇವರಮನೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

error: Content is protected !!