ಸೋಂಕು ದೃಢಪಟ್ಟವರ ಮನೆ ಸೀಲ್ ಡೌನ್‌ಗೆ ಸಲಹೆ

ಸೋಂಕು ದೃಢಪಟ್ಟವರ ಮನೆ ಸೀಲ್ ಡೌನ್‌ಗೆ ಸಲಹೆ - Janathavaniವಾರದಲ್ಲಿ 2 ರಿಂದ 3 ದಿನ ಬೆಳಿಗ್ಗೆ 6 ರಿಂದ 12 ಗಂಟೆವರೆಗೆ ದಿನಸಿ, ತರಕಾರಿ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿ ಇನ್ನುಳಿದ ದಿನಗಳಂದು ಹಾಲು ಮಾರಾಟ ಹೊರತುಪಡಿಸಿ ಉಳಿದೆಲ್ಲ ವನ್ನೂ ಸಂಪೂರ್ಣ ಬಂದ್ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಚಿಂತನೆ ನಡೆಸು ವಂತೆ ತಿಳಿಸಲಾಗಿದೆ ಎಂದು ಎಸ್.ಆರ್. ಉಮಾಶಂಕರ್ ಹೇಳಿದರು.

ದಾವಣಗೆರೆ, ಮೇ 28-  ಮುಂದಿನ ಎರಡು ವಾರಗಳ ಕಾಲ ಗಂಭೀರವಾಗಿ ಪರಿಶ್ರಮ ಪಟ್ಟು ಕೋವಿಡ್ ನಿಯಂತ್ರಿಸಲು ಯತ್ನಿಸಿದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಲಿದೆ. ಆದ ಕಾರಣ ಕೋವಿಡ್ ಪಾಸಿಟಿವ್ ಬಂದವರ ಮನೆಗಳನ್ನು ಸೀಲ್‍ಡೌನ್ ಮಾಡಬಹುದು ಅಥವಾ ದೊಡ್ಡದಾಗಿ ಪೋಸ್ಟರ್ ಅಂಟಿಸುವ ಕೆಲಸ ಆಗಬೇಕು. ಆಗ ಅವರಿಂದ ಇತರರಿಗೆ ಸೋಂಕು ಹರಡುವುದು ತಪ್ಪುತ್ತದೆ ಎಂದು  ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್  ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದಾರೆ.

ಜಿಲ್ಲಾಡಳಿತ ಕಚೇರಿಯಲ್ಲಿ ಇಂದು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಯಾರೂ ಕೂಡ ಕೋವಿಡ್ ಸೋಂಕಿನ ಕುರಿತು ವೈಯಕ್ತಿಕ ನಿರ್ಧಾರ ಕೈಗೊಳ್ಳುವುದು ಬೇಡ. ಸೋಂಕಿತರು, ಅವರ ಸಂಪರ್ಕಿತರು, ಎಸ್‍ಎಆರ್‍ಐ ಮತ್ತು ಐಎಲ್‍ಐ ಲಕ್ಷಣ ಇರುವವರಿಗೆ ಕಡ್ಡಾಯ ಕೋವಿಡ್ ಪರೀಕ್ಷೆ ಮಾಡಿಸಿ ಪಾಸಿಟಿವ್ ಬಂದವರನ್ನು ಕಡ್ಡಾಯವಾಗಿ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಇರಿಸಿ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.

ಮದುವೆಗಳು ಸೋಂಕು ಹರಡುವಿಕೆಗೆ ಕಾರಣ ವಾಗಿವೆ. ಈಗಾಗಲೇ ನಿಗದಿಯಾದ, ನಡೆಯುತ್ತಿರುವ ಮದುವೆಗಳನ್ನು ನಿಲ್ಲಿಸುವುದು ಕಷ್ಟ. ಆದ ಕಾರಣ ಜೂನ್ 5 ರ ನಂತರ 15 ದಿನಗಳ ಕಾಲ ಮದುವೆಗಳನ್ನು ನಿಷೇಧ ಮಾಡಿದಲ್ಲಿ ಸೋಂಕು ನಿಯಂತ್ರಣಕ್ಕೆ ತರಬಹುದೆಂಬ ಬಗ್ಗೆ ತಹಶೀಲ್ದಾರರಿಂದ ಸಲಹೆ ಪಡೆದ ಅವರು ಜಿಲ್ಲಾಧಿಕಾರಿಗಳು ಈ ಬಗ್ಗೆ ಚಿಂತನೆ ನಡೆಸುವಂತೆ ಸೂಚಿಸಿದರು.

ಕೋವಿಡ್ ಲಸಿಕೆ ಗೇಮ್ ಚೇಂಜರ್ ಆಗುವುದರಲ್ಲಿ ಅನುಮಾನವಿಲ್ಲ. ಹೆಚ್ಚೆಚ್ಚು ಲಸಿಕಾಕರಣವಾದಷ್ಟು ಜನರು ಕೊರೊನಾ ಮುಕ್ತರಾಗಲು ಸಾಧ್ಯವಿದೆ. ಆದ ಕಾರಣ ಟಾರ್ಗೆಟೆಡ್ ಸಮುದಾಯಗಳಾದ ಆರೋಗ್ಯ, ಫ್ರಂಟ್‍ಲೈನ್ ವರ್ಕರ್ಸ್ ಹಾಗೂ ಇ-ಕಾಮರ್ಸ್ ಡೆಲಿವರಿ ಬಾಯ್ಸ್, ಆಟೋ ಮತ್ತು ಟ್ಯಾಕ್ಸಿ ಡ್ರೈವರ್‍ಗಳು ಈ ರೀತಿ ಸೇವಾನಿರತರಿಗೆ ಮೊದಲ ಆದ್ಯತೆಯಲ್ಲಿ ಲಸಿಕೆ ನೀಡಲು ಯೋಜನೆ ಹಾಕಿಕೊಳ್ಳುವಂತೆ ಹೇಳಿದರು. ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಜಿಲ್ಲಾ ತಂಡ ಉತ್ತಮವಾಗಿ ತಯಾರಿ ಮಾಡಿಕೊಂಡಿದೆ. ಅದೇ ರೀತಿಯಲ್ಲಿ ತಾಲ್ಲೂಕು ತಂಡಗಳು ಸಹ ತಯಾರಿ ಮಾಡಿಕೊಂಡು ಕೈಜೋಡಿಸಿದಲ್ಲಿ ಜಿಲ್ಲೆ ಕೊರೊನಾ ಮುಕ್ತವಾಗಿ, ಮಾದರಿ ಜಿಲ್ಲೆಯಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕೆಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಜಿ.ಪಂ. ಸಿಇಓ ಡಾ.ವಿಜಯ ಮಹಾಂತೇಶ ಬಿ.ದಾನಮ್ಮನವರ್, ಎಡಿಸಿ ಪೂಜಾರ ವೀರಮಲ್ಲಪ್ಪ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಎಸ್‍ಎಲ್‍ಓ ರೇಷ್ಮಾ ಹಾನಗಲ್ ಡಿಹೆಚ್‍ಓ ಡಾ.ನಾಗರಾಜ್, ಡಿಎಸ್ ಡಾ.ಜಯಪ್ರಕಾಶ್, ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

error: Content is protected !!