ಸಂತೆ ರದ್ದಾಗಿದ್ದರೂ ಎಗ್ಗಿಲ್ಲದೆ ನಡೆದ ಮಾರಾಟ-ಖರೀದಿ
ಹರಿಹರ, ಮೇ 25- ಸರ್ಕಾರ, ಸ್ಥಳೀಯ ಆಡಳಿತಗಳು ಕೊರೊನಾ ರೋಗವನ್ನು ತಡೆಗಟ್ಟಲು ಪ್ರತಿದಿನ ಹರ ಸಾಹಸ ಮಾಡುತ್ತಾ ಬಂದಿದ್ದರೂ, ಹರಿಹರ ನಗರದಲ್ಲಿ ಅಷ್ಟೊಂದು ಬಿಗಿಯಾಗಿ ನಿಯಮ ಪಾಲನೆ ಆಗುತ್ತಿರುವ ಲಕ್ಷಣಗಳು ಕಂಡುಬಂದಿಲ್ಲ.
ಇಂದು ಸಂತೆಯ ದಿನ ವಾಗಿರುವುದರಿಂದ ಹೈಸ್ಕೂಲ್ ಬಡಾವಣೆಯ 4ನೇ ಮೇನ್ 10 ನೇ ಕ್ರಾಸ್‌ನಲ್ಲಿ ಜನರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಭಾರೀ ಪ್ರಮಾಣದಲ್ಲಿ ಸೇರಿದ್ದು, ನೋಡಿದರೆ ಸರ್ಕಾರದ ಕಟ್ಟು ನಿಟ್ಟಿನ ಪಾಲನೆಯಲ್ಲಿ ಅಧಿಕಾರಿಗಳ ತಂಡ ವಿಫಲವಾಗಿದೆ ಎಂದು ಭಾಸವಾಗುತ್ತಿತ್ತು.
ಇನ್ನು ನಗರದ ವಿವಿಧ ಬಡಾವಣೆಗಳಲ್ಲಿ ಸಹ ಸಣ್ಣ ಪುಟ್ಟ ಅಂಗಡಿಗಳು ತೆರೆದುಕೊಂಡು ವ್ಯಾಪಾರ ವಹಿವಾಟು ಮಾಡುತ್ತಿವೆ. ಜೊತೆಗೆ ತರಕಾರಿ ಕೈ ಗಾಡಿಗಳು ಸಹ ಆಯಾ ಬಡಾವಣೆಯ ಮೂಲೆಯಲ್ಲಿ ನಿಂತುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದಾಗ ಸಾವುಗಳ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಹೆಚ್ಚು ಇರುತ್ತದೆ.
ಶಾಸಕ ಎಸ್. ರಾಮಪ್ಪ ಅವರು ನಿನ್ನೆ ಕೂಡ ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ತಾಲ್ಲೂಕಿನಲ್ಲಿ ಕೊರೊನಾ ರೋಗದಿಂದ ಜನರು ಹೆಚ್ಚಿನ ಪ್ರಮಾಣದಲ್ಲಿ ಸಾಯುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಇಂದು ಸಂತೆ ಸೇರಿ ಅಪಾರ ಪ್ರಮಾಣದ ಜನರು ಸೇರಿರುವುದು ನೋಡಿದರೆ ಇನ್ನೂ ಹೆಚ್ಚಿನ ಕಾಲ ತಾಲ್ಲೂಕಿನಿಂದ ಕೊರೊನಾ ರೋಗವನ್ನು ಮುಕ್ತ ಮಾಡಲು ಸಾಧ್ಯವಿಲ್ಲ ಎನಿಸುತ್ತದೆ.
ಅವಶ್ಯಕತೆ ಇಲ್ಲದೆ ಇದ್ದರೂ ಸಹ ಬೈಕ್ ನಲ್ಲಿ ಓಡಾಡುವ ಸವಾರರು ತಮಗೆ ತೊಂದರೆ ಆದ ತಕ್ಷಣವೇ ಜನಪ್ರತಿನಿಧಿಗಳ ಹತ್ತಿರಕ್ಕೆ ಹೋಗಿ ತಮ್ಮ ವಾಹನಗಳನ್ನು ಬಿಡುಗಡೆ ಮಾಡುವಂತೆ ಮತ್ತು ತಮಗೆ ವ್ಯಾಪಾರ ವಹಿವಾಟು ಮಾಡುವುದಕ್ಕೆ ಅವಕಾಶ ಕೊಡಿಸುವಂತೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿಸುತ್ತಾರೆ. ಇದರಿಂದಾಗಿ ಅಧಿಕಾರಿಗಳು ಜನಪ್ರತಿನಿಧಿಗಳ ಮಾತಿಗೆ ಮನ್ನಣೆಯನ್ನು ಕೊಡಬೇಕಾ ಅಥವಾ ಸರ್ಕಾರದ ಬಿಗಿಯಾದ ನಿಯಮಗಳನ್ನು ಪಾಲನೆ ಮಾಡಬೇಕಾ ಎಂಬ ಗೊಂದಲಕ್ಕೆ ಒಳಗಾ ಗುತ್ತಾರೆ. ಇದರಿಂದಾಗಿ ಕೊರೊನಾ ರೋಗವು ಬಂದಾಗಿನಿಂದ ಅಧಿಕಾರಿಗಳಿಗೆ ಸರಿಯಾದ ಊಟ – ನಿದ್ರೆ ಆಗದಂತಹ ಪರಿಸ್ಥಿತಿಯಲ್ಲಿದ್ದಾರೆ.
ಇಂದೂ ಸಹ ಲಾಕ್‌ಡೌನ್ ಉಲ್ಲಂಘನೆ ಮಾಡಿ ವಾಹನಗಳ ಚಲಾವಣೆಗೆ ಮುಂದಾದ ಸಾರ್ವಜನಿಕರ ವಾಹನಗಳನ್ನು ಪೊಲೀಸ್ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿ ದ್ದರಿಂದ ಅವುಗಳನ್ನು ಬಿಡಿಸಿಕೊಂಡು ಹೋಗುವುದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಠಾಣೆಯ ಮುಂದೆ ಸಾರ್ವಜನಿಕರು ಸೇರಿದ್ದರು.