ಹೊನ್ನಾಳಿ, ಮೇ 26- ಅವಳಿ ತಾಲ್ಲೂಕುಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ತಮ್ಮ ತಂದೆ-ತಾಯಿ ಪಂಚಾಕ್ಷರಯ್ಯ ಹಾಗೂ ಕಮಲಮ್ಮನವರ ಸ್ಮರಣಾರ್ಥ 4 ಆಂಬ್ಯುಲೆನ್ಸ್ ಹಾಗೂ 50 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಿದ್ದು, ಇಲ್ಲಿನ ಜನತೆಯ ಜೀವ ರಕ್ಷಣೆಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಹೇಳಿದರು.
ಅವರು, ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಜನರೇಟರ್ ಕಾಮಗಾರಿ ವೀಕ್ಷಿಸಿ, ಆಸ್ಪತ್ರೆ ಹೊರಾಂಗಣದಲ್ಲಿ ರೋಗಿಗಳಿಗೆ ನಡೆಯುತ್ತಿದ್ದ ತಪಾಸಣೆ ಕಾರ್ಯ ಪರಿಶೀಲಿಸಿ ನಂತರ ರೇಣುಕಾಚಾರ್ಯ ನೀಡಿದ ಬೆಡ್ಗಳು ಹಾಗೂ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು.
ರೇಣುಕಾಚಾರ್ಯ ಅವರು ರೋಗಿಗಳಿಗೆ ಊಟ, ವಸತಿ ಕಲ್ಪಿಸುವ ಮೂಲಕ ರೋಗಿಗಳ ಮೇಲೆ ತೋರುತ್ತಿ ರುವ ಕಾಳಜಿ ಇತರರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಕ್ಸಿಜನ್ ಜನರೇಟರ್ ವ್ಯವಸ್ಥೆಯ ಕಾರ್ಯವು ಚನ್ನಗಿರಿ, ಹರಿಹರದಲ್ಲಿ ನಡೆಯುತ್ತಿದೆ.
ಹರಪನಹಳ್ಳಿಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ನಾನೂ ಕೂಡ ನಮ್ಮ ಪೋಷಕರ ಹೆಸರಿನಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲೂ ಈ ಸೌಲಭ್ಯ ಕಲ್ಪಿಸುವಲ್ಲಿ ಮುಂದಾಗಿದ್ದೇನೆ. ಮುಂದಿನ 15 ದಿನ ಗಳಿಗೆ ಆಗುವಷ್ಟು ಜಿಲ್ಲೆಗೆ ಆಕ್ಸಿಜನ್ ಸೌಲಭ್ಯವಿದೆ ಎಂದರು.
ಶಾಸಕ ರೇಣುಕಾಚಾರ್ಯ ಮಾತನಾಡಿ, ಕೊರೊನಾ ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಕಂಡು ತಾವು ಅಂಬ್ಯುಲೆನ್ಸ್ ಹಾಗೂ ಮಂಚದೊಂದಿಗೆ ಹಾಸಿಗೆಗಳನ್ನು ವಿತರಿಸುತ್ತಿರುವುದಾಗಿ ಹೇಳಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ 1059, ಹೊನ್ನಾಳಿ ಆಸ್ಪತ್ರೆಯಲ್ಲಿ 416 ಜನರು ಇದೀಗ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಪರಿಣಾಮಕಾರಿ ಕೆಲಸದಿಂದಾಗಿ ಒಂದು ವಾರದ ಒಳಗಾಗಿ ಕೊರೊನಾ ಸಾವಿನ ಪ್ರಮಾಣ ಇಳಿಮುಖವಾಗಲಿದೆ ಎಂಬ ಭರವಸೆ ಇದೆ ಎಂದರು.
ಡಿಹೆಚ್ಒ ನಾಗರಾಜ್, ತಹಶೀಲ್ದಾರ್ ಬಸವರಾಜ್ ಕೋಟೂರ್, ಆರೋಗ್ಯಾಧಿಕಾರಿ ಕೆಂಚಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಶ್ರೀಧರ್, ಸದಸ್ಯ ರಂಗಪ್ಪ, ಜಿಪಂ ಸದಸ್ಯ ಸುರೇಂದ್ರನಾಯ್ಕ್, ತಾಲ್ಲೂಕಿನ ಅಧಿಕಾರಿಗಳಿದ್ದರು.