ಗ್ರಾಮೀಣ ಸೋಂಕು ನಿವಾರಣೆಗೆ ಕ್ರಮ: ಇಂದು ಗ್ರಾ.ಪಂ. ಸದಸ್ಯರ ಜೊತೆ ಸಿ.ಎಂ. ಚರ್ಚೆ
ಬೆಂಗಳೂರು, ಮೇ 25 – ಬೆಂಗ ಳೂರು ಸೇರಿದಂತೆ, ನಗರ ಪ್ರದೇಶಗಳಲ್ಲಿ ಸೋಂಕಿನ ಸರಪಳಿ ಕಡಿತಗೊಳಿಸುವಲ್ಲಿ ಯಶಸ್ವಿ ಹಾದಿ ತುಳಿದಿರುವ ಸರ್ಕಾರ ಇದೀಗ ಗ್ರಾಮೀಣ ಪ್ರದೇಶದ ಹರಡಿರುವ ಸೋಂಕು ನಿವಾರಣೆಗೆ ಮುಂದಾಗಿದೆ.
ಯಾವ ಗ್ರಾಮಗಳಲ್ಲಿ ಹೆಚ್ಚು ಸೋಂಕು ಕಂಡು ಬಂದಿದೆಯೋ ಆ ಗ್ರಾಮವನ್ನು ಕಂಟೈನ್ಮೆಂಟ್ ವಲಯ ಎಂದು ಪರಿಗಣಿಸಿ, ಬಿಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸರ್ಕಾರ ಸೂಚಿಸಿದೆ.
ಅಷ್ಟೇ ಅಲ್ಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವತಃ ತಾವೇ ನಾಳೆ ಸೋಂಕು ಹೆಚ್ಚಿರುವ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರೊಟ್ಟಿಗೆ ಚರ್ಚೆ ಮಾಡಲಿದ್ದಾರೆ.
ಸೋಂಕು ಹೆಚ್ಚಿರುವ ಪ್ರದೇಶದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯುವ ಮುಖ್ಯಮಂತ್ರಿಯವರು ಕೆಲವು ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ.
ಗ್ರಾಮಗಳಲ್ಲಿ ಸೋಂಕು ಹೆಚ್ಚಲು ಕಾರಣವೇನು ಎಂಬುದರ ಬಗ್ಗೆ ಸ್ಥಳೀಯರಿಂದಲೇ ಮಾಹಿತಿ ಪಡೆಯುವ ಮುಖ್ಯಮಂತ್ರಿಯವರು ಇದನ್ನು ತಡೆಯಲು ಸ್ಥಳೀಯ ಮಟ್ಟದಲ್ಲಿ ಕೈಗೊಂಡಿರುವ ಕಾರ್ಯಕ್ರಮದ ಬಗ್ಗೆಯು ಮಾಹಿತಿ ಪಡೆಯಲಿದ್ದಾರೆ.
ಪಂಚಾಯ್ತಿಗಳಲ್ಲಿ ಕೊರೊನಾ ನಿರ್ವಹಣೆಯಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಲಿದ್ದಾರೆ.
ಗ್ರಾ.ಪಂ.ಗಳಲ್ಲಿ ಮೈಕ್ರೋ ಕಂಟೈನ್ಮೆಂಟ್ ವಲಯ
ಬೆಂಗಳೂರು, ಮೇ 25 – ಕೋವಿಡ್ ಸೋಂಕು ಹೆಚ್ಚಿರುವ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೈಕ್ರೋ ಕಂಟೈನ್ಮೆಂಟ್ ವಲಯ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಕಂಟೈನ್ಮೆಂಟ್ ಝೋನ್ ಮಟ್ಟದಲ್ಲಿ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.
ಕೊರೊನಾ ಹೆಚ್ಚಾಗಿರುವ ಕಡೆಗಳಲ್ಲಿ ಮೈಕ್ರೋ ಕಂಟೈನ್ನ್ಮೆಂಟ್ ಝೋನ್ನಲ್ಲಿ ಒಂದು ಸಮಿತಿ ರಚನೆ ಮಾಡುತ್ತೇವೆ. ಸಮಿತಿಯಲ್ಲಿ ಪಿಡಿಓ, ಆರೋಗ್ಯಾಧಿಕಾರಿ, ಸ್ಥಳೀಯ ಪೊಲೀಸರು, ಇತರೆ ಅಧಿಕಾರಿಗಳು ಇರುತ್ತಾರೆ.
ಸೊಂಕಿತರಿಗೆ ಔಷಧ, ಆಹಾರ ವಿತರಣೆ ಮಾಡಲು ಮತ್ತು ಸೊಂಕು ಹರಡದಂತೆ ನಿಗಾವಹಿಸಲು ಈ ಸಮಿತಿ ಕೆಲಸ ಮಾಡಲಿದೆ ಎಂದವರು ತಿಳಿಸಿದರು. ಲಾಕ್ಡೌನ್ ಮತ್ತು ಕೆಲ ಓಡಾಟಗಳಿಗೆ ನಿರ್ಬಂಧ ಜಾರಿಗೆ ತರಲು ಸ್ಥಳೀಯ ಆಡಳಿತಕ್ಕೆ ಹೊಣೆ ನೀಡಲಾಗಿದೆ. ಕಡ್ಡಾಯವಾಗಿ ಪ್ರಥಮ ಸಂಪರ್ಕಿತರಿಗೆ ಕೊರೊನಾ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದರು.
ಬ್ಲಾಕ್ ಫಂಗಸ್ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ. ಬ್ಲಾಕ್ ಫಂಗಸ್ ಸಂಬಂಧ ನಿನ್ನೆ ಕೇಂದ್ರ ಸಚಿವ ಸದಾನಂದಗೌಡರ ಜೊತೆ ಚರ್ಚೆ ಮಾಡಲಾಗಿದ್ದು, ಅವರು ಒಂದು ಸಾವಿರಕ್ಕೂ ಹೆಚ್ಚು ಇಂಜೆಕ್ಷನ್ ಕೊಡುವ ಬಗ್ಗೆ ಭರವಸೆ ನೀಡಿದ್ದಾರೆ.
ಕೋವಿಡ್ ಸೋಂಕಿತ ಮಕ್ಕಳಿಗೆ ಜಿಲ್ಲೆಗಳಲ್ಲಿ ವಿಶೇಷ ವಾರ್ಡ್ ಹಾಗೂ ಐಸಿಯು ಬೆಡ್ ವ್ಯವಸ್ಥೆ ಮಾಡುವ ಬಗ್ಗೆ ನಿರ್ಧಾರ ಮಾಡಲಾಗಿದೆ ಎಂದರು.
ಅಲ್ಲದೆ ಸೋಂಕು ಕಂಡು ಬಂದ ವ್ಯಕ್ತಿಯನ್ನು ತಕ್ಷಣವೇ ಕೋವಿಡ್ ಕೇರ್ ಸೆಂಟರ್ಗಳಿಗೆ ಸ್ಥಳಾಂತರಿಸಿ, ಸೋಂಕಿತರಿಗೆ ಅಗತ್ಯ ಕಂಡು ಬಂದಲ್ಲಿ ಆಸ್ಪತ್ರೆ ಚಿಕಿತ್ಸೆ ಕಲ್ಪಿಸಿ ಇಲ್ಲದಿದ್ದರೆ, ಕೋವಿಡ್ ಕೇಂದ್ರದಲ್ಲೇ ಆಹಾರ ಮತ್ತು ಔಷಧಿ ವ್ಯವಸ್ಥೆ ಮಾಡಿ ಎಂದು ಪಂಚಾಯ್ತಿ ಆಡಳಿತಕ್ಕೆ ಆದೇಶಿಸಲಿದ್ದಾರೆ.
ಸೋಂಕಿತ ಕುಟುಂಬದವರು ಮತ್ತು ಅವರ ಹತ್ತಿರದವರನ್ನು ಪರೀಕ್ಷೆಗೆ ಒಳಪಡಿಸಿ, ಆ ಗ್ರಾಮದಲ್ಲಿ ಶುಚಿತ್ವಕ್ಕೆ ಹೆಚ್ಚು ಒತ್ತು ಕೊಡಿ. ಮುನ್ನೆಚ್ಚರಿಕೆಯಾಗಿ ಗ್ರಾಮಸ್ಥರಿಗೆ ರೋಗ ನಿರೋಧಕ ಶಕ್ತಿ ಬರುವ ಔಷಧಿಗಳನ್ನು ನೀಡುವಂತೆ ವೈದ್ಯರಿಗೆ ತಿಳಿಸಲಿದ್ದಾರೆ.
ಸೋಂಕಿನ ಹಿನ್ನೆಲೆಯಲ್ಲಿ 2000ಕ್ಕೂ ಹೆಚ್ಚು ವೈದ್ಯರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ನೇಮಕಗೊಂಡವ ರನ್ನು ಗ್ರಾಮೀಣ ಸೇವೆಗೆ ನಿಯೋಜಿಸಲಾಗುವುದು.
ಕೊರೊನಾ ಸೋಂಕು ನಿವಾರಣೆಗಾಗಿ ಇದುವರೆಗೂ ಹಿರಿಯ ಅಧಿಕಾರಿಗಳು ಜಿಲ್ಲಾಡಳಿತದ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡುತ್ತಿದ್ದ ಮುಖ್ಯಮಂತ್ರಿಯವರು ಗ್ರಾಮೀಣ ಮಟ್ಟದಲ್ಲೂ ವಿಡಿಯೋ ಕಾನ್ಫರೆನ್ಸ್ ಮಾಡುವುದರ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಖುದ್ದಾಗಿ ಆಲಿಸಲಿದ್ದಾರೆ.