ಗ್ರಾಹಕರ ಆಯೋಗಕ್ಕೆ ದೂರುಗಳು ಹೆಚ್ಚಲಿ

8 ಲಕ್ಷ ಜನಸಂಖ್ಯೆಯ ನಗರದಲ್ಲಿ ತಿಂಗಳಿಗೆ 10 ಪ್ರಕರಣಗಳು ಮಾತ್ರ ದಾಖಲಾಗುತ್ತಿವೆ, ಇದು ಕನಿಷ್ಠ 100ಕ್ಕೆ ಹೆಚ್ಚಬೇಕು.

– ಮಹಾಂತೇಶ್ ಬೀಳಗಿ, ಡಿಸಿ

ದಾವಣಗೆರೆ, ಮಾ. 16 – ದಾವಣಗೆರೆ ದೊಡ್ಡ ವ್ಯಾಪಾರ ಕೇಂದ್ರವಾಗಿದ್ದು, ಜಿಲ್ಲೆಯಲ್ಲಿ ಸುಮಾರು 8 ಲಕ್ಷ ಜನಸಂಖ್ಯೆ ಇದೆ. ಇಷ್ಟೊಂದು ಗ್ರಾಹಕರನ್ನು ಹೊಂದಿರುವ ಜಿಲ್ಲೆಯಲ್ಲಿ ಗ್ರಾಹಕರ ಆಯೋಗದಲ್ಲಿ ತಿಂಗಳಿಗೆ 10 ಪ್ರಕರಣಗಳು ಮಾತ್ರ ದಾಖಲಾಗುತ್ತಿವೆ ಎಂದು ಹೇಳಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪ್ರತಿ ತಿಂಗಳು ಕನಿಷ್ಠ 100 ದೂರುಗಳನ್ನು ಗ್ರಾಹಕರ ಆಯೋಗಕ್ಕೆ ದಾಖಲಿಸಬೇಕು ಎಂದು ಆಶಿಸಿದ್ದಾರೆ.

ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ದಾವಣಗೆರೆ ಇವರ ಸಹಯೋಗದಲ್ಲಿ ಮಂಗಳವಾರ ನಗರದ ಆರ್.ಎಲ್. ಕಾನೂನು ಕಾಲೇಜಿನಲ್ಲಿ ವಿಶ್ವ ಗ್ರಾಹಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಗ್ರಾಹಕರ ಆಯೋಗದಲ್ಲಿ ಕಡಿಮೆ ದೂರು ದಾಖಲಾಗುತ್ತಿವೆ. ಹಾಗಾದರೆ ಎಲ್ಲ ವ್ಯಾಪಾರ, ವಹಿವಾಟುಗಳು ಕಾನೂನಿನ್ವಯ ಆಗುತ್ತಿ ವೆಯೇ? ಅಥವಾ ಕಾನೂನಿನ ಅರಿವಿನ ಕೊರತೆ ಯಿಂದ ಗ್ರಾಹಕರು ಗ್ರಾಹಕ ಆಯೋಗಕ್ಕೆ ದೂರು ನೀಡುತ್ತಿಲ್ಲವೇ? ಎಂಬ ಪ್ರಶ್ನೆ ಹಾಕಿಕೊಳ್ಳಬೇಕು ಎಂದ ಅವರು, ಉತ್ಪಾದಕರು ನಿಯಮಾನುಸಾರ ತಮ್ಮ ಉತ್ಪನ್ನಗಳ ಮೇಲೆ ಮುದ್ರಿಸಬೇಕಾದ ಅಂಶಗಳಿಗೆ ಸಂಬಂಧಿಸಿ ದಂತೆ, ಗುಣಮಟ್ಟ ಮತ್ತು ಸೇವೆಗೆ ಸಂಬಂಧಿಸಿ ದಂತೆ ಅನೇಕ ಲೋಪಗಳು ಇದ್ದರೂ ಗ್ರಾಹಕರು ಅದನ್ನು ಗಣನೆಗೆ ತೆಗೆದುಕೊಳ್ಳದೇ ವ್ಯಾಪಾರ, ವಹಿವಾಟು ಮಾಡುತ್ತಿರುವುದು ನಾವು ದಿನನಿತ್ಯ ನೋಡುತ್ತೇವೆ ಎಂದು ವಿಷಾದಿಸಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಗೋಖಲೆ ಘಾಳಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿದಿನ ನೂರಾರು ಪ್ರಕರಣಗಳನ್ನು ದಾಖಲಿಸಬಹುದು ಅಂತಹ ಸ್ಥಿತಿ ಮಾರುಕಟ್ಟೆಯಲ್ಲಿ ಇರುತ್ತದೆ. ಕಾನೂನು ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಗ್ರಾಹಕರು ಪ್ರಶ್ನೆ ಮಾಡುವುದು, ಹೋರಾಟ ಮಾಡುವುದಕ್ಕೆ ತಯಾರಾಗಬೇಕು ಎಂದವರು ತಿಳಿಸಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಜ್ಯೋತಿ ರಾಧೇಶ್ ಜಂಬಿಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಗ್ರಾಹಕರು ಆನ್‍ಲೈನ್ ಅಥವಾ ಆಫ್‍ಲೈನ್‍ನಲ್ಲಿ ಖರೀದಿಸುವ ಉತ್ಪನ್ನಗಳಿಗೆ ನೇರವಾಗಿ ಈ ಆಯೋಗದಲ್ಲಿ ಅಹವಾಲು ದಾಖಲಿಸಬಹುದು ಮತ್ತು ಗ್ರಾಹಕರು ಖರೀದಿಸಿದ ವಸ್ತುಗಳಿಗೆ ಪಕ್ಕಾ ರಶೀದಿಗಳನ್ನು ಪಡೆಯಬೇಕು. ಆಗ ಮಾತ್ರ ಗ್ರಾಹಕರಿಗೆ ಆಯೋಗದಿಂದ ತಕ್ಕ ನ್ಯಾಯ ಮತ್ತು ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಚಾಲಕ ಪಿ. ಅಂಜನಪ್ಪ ಉಪನ್ಯಾಸ ನೀಡಿ ಮಾತನಾಡಿ, ಅನುಚಿತ ವ್ಯವಹಾರ, ವಂಚನೆ ಯಿಂದ ತೊಂದರೆಯಾಗಿ ನಷ್ಟವಾಗಿದ್ದರೆ, ಬೇಕಾಗಿರುವ ಸೇವೆ ಅಥವಾ ವಸ್ತುಗಳನ್ನು ಪಡೆಯಲು ಬೇಡವಾದ ಸೇವೆ ಅಥವಾ ವಸ್ತುಗಳನ್ನು ಪಡೆಯಲೇಬೇಕೆಂಬ ಕಡ್ಡಾಯ ಆಸೆ ಆಮಿಷಗಳನ್ನು ಒಡ್ಡುವುದು. ಪಡೆದ ವಸ್ತು ಅಥವಾ ಸೇವೆಯ ಪ್ರಮಾಣ, ಗುಣಮಟ್ಟ ಮಾದರಿ, ಶೈಲಿ, ಆಕಾರ ಮುಂತಾದವುಗಳಲ್ಲಿ ಕೊರತೆ ಅಥವಾ ನ್ಯೂನತೆಯಿರುವುದು. ಸುಳ್ಳು ಅಥವಾ ತಪ್ಪು ಮಾಹಿತಿ ನೀಡುವುದು, ಹಳೆಯದನ್ನು ಹೊಸತಂದು ನಂಬಿಸುವುದು, ಎಂಆರ್‌‍ಪಿಗಿಂತ ಹೆಚ್ಚಿನ ದರ ಪಡೆದರೆ ಗ್ರಾಹಕರು ದೂರು ನೀಡಿ ಪರಿಹಾರ ಪಡೆಯಬಹುದು ಎಂದು ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಆರ್.ಎಲ್. ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸೋಮಶೇಖರಪ್ಪ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಟಿ.ಪ್ರಕಾಶ್ ಪ್ರಾರ್ಥಿಸಿದರು. ಕಾನೂನು ಮಾಪನಶಾಸ್ತ್ರದ ಸಹಾಯಕ ನಿಯಂತ್ರಕ ಹೆಚ್.ಎಸ್.ರಾಜು ವಂದಿಸಿದರು.

error: Content is protected !!